ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನಿಂದ ಬಂದಿಳಿದ 273 ಪ್ರಯಾಣಿಕರು

ವಲಸಿಗರ ಕೈಗಳಿಗೆ ಮುದ್ರೆ, ಸಿಮ್ ಕಾರ್ಡ್ ವಿತರಣೆ
Last Updated 10 ಜನವರಿ 2021, 20:19 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ಬೆಳಿಗ್ಗೆ 4 ಗಂಟೆಗೆ ಬ್ರಿಟನ್‌ನಿಂದ ಮೊದಲ ವಿಮಾನ ಬಂದಿದ್ದು, ಇದರಲ್ಲಿ 32 ಮಕ್ಕಳು ಸೇರಿದಂತೆ 273 ಪ್ರಯಾಣಿಕರು ಬಂದಿದ್ದಾರೆ.

ಬ್ರಿಟನ್‌ನಲ್ಲಿ ರೂಪಾಂತರ ಕೊರೊನಾ ವೈರಾಣು ಕಾಣಿಸಿಕೊಂಡ ಕಾರಣ ಡಿ.23ರಿಂದ ವಿಮಾನಯಾನವನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಲಾಗಿದೆ. ವಿಮಾನದಲ್ಲಿ ಬಂದವರಲ್ಲಿ 196 ಪುರುಷರು ಹಾಗೂ 95 ಮಹಿಳೆಯರು. ಇವರ ಜತೆಗೆ ವಿಮಾನದಲ್ಲಿನ16 ಸಿಬ್ಬಂದಿಯ ಗಂಟಲಿನ ದ್ರವದ ಮಾದರಿಯನ್ನೂ ವಿಮಾನ ನಿಲ್ದಾಣದಲ್ಲಿ ಸಂಗ್ರಹಿಸಿ, ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಲಾಗಿದೆ.

ಕೆಲ ದಿನಗಳ ಹಿಂದೆ ಬ್ರಿಟನ್‌ನಿಂದ ಬಂದವರಲ್ಲಿ ಕೆಲವರು 14 ದಿನಗಳ ಮನೆ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ, ವಿವಿಧೆಡೆ ಪ್ರಯಾಣಿಸಿದ್ದರು. ಇದರಿಂದ ಆರೋಗ್ಯ ಸಿಬ್ಬಂದಿಗೆ ಅವರ ಮೇಲೆ ನಿಗಾ ಇಡುವುದು ಸವಾಲಾಗಿತ್ತು. ಈಗ ಬ್ರಿಟನ್‌ನಿಂದ ಬಂದ ಎಲ್ಲ ಪ್ರಯಾಣಿಕರಿಗೆ 14 ದಿನಗಳ ಮನೆ ಕ್ವಾರಂಟೈನ್‌ನ ಮುದ್ರೆ ಹಾಕಿ, ಕಳುಹಿಸಲಾಗಿದೆ. ಅದೇ ರೀತಿ, ಈ ಹಿಂದೆ ಕೆಲ ಪ್ರಯಾಣಿಕರು ಬ್ರಿಟನ್‌ನ ದೂರವಾಣಿ ಸಂಖ್ಯೆ ಹಾಗೂ ತಪ್ಪು ವಿಳಾಸ ನೀಡಿದ್ದರು. ಇದರಿಂದಾಗಿ 70ಕ್ಕೂ ಅಧಿಕ ಮಂದಿಯ ಪತ್ತೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಇಲ್ಲಿನ ಸ್ಥಳೀಯ ದೂರವಾಣಿ ಸಂಖ್ಯೆ ಹೊಂದಿರದವರಿಗೆ ಗುರುತಿನ ಚೀಟಿಯ ಪ್ರತಿಗಳನ್ನು ಪಡೆದು, ಸಿಮ್‌ ಕಾರ್ಡ್‌ ನೀಡಲಾಗಿದೆ.

‘ಕಡ್ಡಾಯವಾಗಿ ಮುಂದಿನ 14 ದಿನಗಳು ನಿಗದಿತ ಸ್ಥಳದಲ್ಲಿಯೇ ವಾಸವಿರಬೇಕು. ನೀಡಲಾದ ದೂರವಾಣಿ ಸಂಖ್ಯೆ ಎಲ್ಲ ಅವಧಿಯಲ್ಲಿಯೂ ಸಕ್ರಿಯವಾಗಿರಬೇಕು. ಈ ಅವಧಿಯಲ್ಲಿ ಆರೋಗ್ಯದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದಲ್ಲಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ತಿಳಿಸಿದರು.

ವರದಿಗಾಗಿ ಕಾದ ವಲಸಿಗರು: ಸರ್ಕಾರದ ಮಾರ್ಗಸೂಚಿ ಅನುಸಾರ ಬ್ರಿಟನ್‌ನಿಂದ ಬಂದವರು ಕೋವಿಡ್ ಪರೀಕ್ಷೆಯ ನಕಾರಾತ್ಮಕ ವರದಿ ತಂದಿದ್ದರೂ ಎಲ್ಲರನ್ನೂ ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಯಿತು. ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆಯೇ ಥರ್ಮಲ್‌ ಸ್ಕ್ಯಾನರ್ ಹಾಗೂ ಪಲ್ಸ್ ಆಕ್ಸಿಮೀಟರ್ ನೆರವಿನಿಂದ ತಪಾಸಣೆ ನಡೆಸಲಾಯಿತು. ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಮಾದರಿಗಳನ್ನು ಸಂಗ್ರಹಿಸಿ, ಅಲ್ಲಿನ ಪ್ರಯೋಗಾಲಯಕ್ಕೆ ರವಾನಿಸಲಾಯಿತು. ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿದ ಸಿಬ್ಬಂದಿ, ವಿಶ್ರಾಂತಿ ಕೊಠಡಿಯಲ್ಲಿ ವರದಿಗೆ ಕಾಯುವಂತೆ ಸೂಚಿಸಿದರು.

ಕೋವಿಡ್ ಪರೀಕ್ಷಾ ವರದಿ ಬರಲು 4ರಿಂದ 5 ಗಂಟೆಗಳು ತಗುಲಿದ ಕಾರಣ ಕೆಲ ಪ್ರಯಾಣಿಕರು ಸಿಬ್ಬಂದಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಪರೀಕ್ಷೆ ಫಲಿತಾಂಶ ಬರುವ ಮುನ್ನವೇ ತೆರಳಲು ಮುಂದಾದರೂ ಸಿಬ್ಬಂದಿ ಅವಕಾಶ ನೀಡಲಿಲ್ಲ. ಸೋಂಕಿತರಾಗಿಲ್ಲ ಎನ್ನುವುದು ಪರೀಕ್ಷಾ ವರದಿಯಿಂದ ದೃಢಪಟ್ಟ ಬಳಿಕ ಖಾಸಗಿ ವಾಹನಗಳಲ್ಲಿ ತೆರಳಲು ಅವಕಾಶ ನೀಡಲಾಯಿತು.

ನಾಲ್ವರು ನಿರಾಳ

ಬ್ರಿಟನ್‌ನಿಂದ ಬಂದವರಲ್ಲಿ ನಾಲ್ವರ ಮಾದರಿಯಲ್ಲಿ ಸೋಂಕು ಶಂಕೆ ವ್ಯಕ್ತವಾಗಿತ್ತು. ಫೂಲ್ ಮಾದರಿಯಲ್ಲಿ ನಡೆಸಿದ ಕೋವಿಡ್‌ ಆರ್‌ಟಿ–ಪಿಸಿಆರ್ ಪರೀಕ್ಷೆಯಲ್ಲಿ ಕೊರೊನಾ ವೈರಾಣು ಕಾಣಿಸಿಕೊಂಡಿತ್ತು. ಹಾಗಾಗಿ ನಾಲ್ಕು ಮಾದರಿಗಳನ್ನೂ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲು ನಿಮ್ಹಾನ್ಸ್‌ ಪ್ರಯೋಗಾಲಯಕ್ಕೆ ಕಳುಹಿಸಿ, ಸೋಂಕು ಶಂಕಿತರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಆದರೆ, ಅಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಯಾರಿಗೂ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿದೆ. ಹೀಗಾಗಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾದವರನ್ನು ಮನೆಗೆ ಕಳುಹಿಸಲಾಗಿದೆ.

‘ಬ್ರಿಟನ್‌ನಿಂದ ಬಂದವರಲ್ಲಿ ಸೋಂಕು ದೃಢಪಟ್ಟಲ್ಲಿ ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಿ, ಅವರೊಂದಿಗೆ ವಿಮಾನ ಪ್ರಯಾಣದಲ್ಲಿ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು’ ಎಂದು ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT