ಹಲಸೂರು ಕೆರೆ: 30 ಲೋಡ್ ಕಸ ತೆರವು

ಬೆಂಗಳೂರು: ಬಿಬಿಎಂಪಿ ಹಾಗೂ ಭಾರತೀಯ ಸೇನೆಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ಸಹಯೋಗದಲ್ಲಿ ಹಲಸೂರು ಕೆರೆಯ ಸ್ವಚ್ಛತಾ ಅಭಿಯಾನ ಒಂದು ವಾರದಿಂದ ನಡೆಯುತ್ತಿದೆ. ಇದುವರೆಗೆ 30 ಲೋಡ್‌ಗಳಷ್ಟು ಕಸ ಹೊರ ತೆಗೆದು ವಿಲೇವಾರಿ ಮಾಡಲಾಗಿದೆ.
113 ಎಕರೆಗಳಷ್ಟು ವಿಸ್ತಾರವಾದ ಹಲಸೂರು ಕೆರೆಯಲ್ಲಿ ಬಿಬಿಎಂಪಿಯ ಕೆರೆಗಳ ನಿರ್ವಹಣೆ ಮಾಡುವ 50 ಸಿಬ್ಬಂದಿ ಹಾಗೂ ಎಂಇಜಿಯ 50 ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಶನಿವಾರ ಬಿಬಿಎಂಪಿಯ 80 ಸಿಬ್ಬಂದಿ ಹಾಗೂ ಎಂಇಜಿಯ 150 ಸಿಬ್ಬಂದಿ ಕೆರೆಯ ಕಸ ಹೊರತೆಗೆದರು. 5 ಬೋಟ್ ಗಳ ಮೂಲಕ ಕಳೆಯನ್ನು ದಡಕ್ಕೆ ತರಲಾಯಿತು. ಇದುವರೆಗೆ 30 ಲೋಡ್ ಕಸ ತೆರವು ಮಾಡಲಾಗಿದೆ.
ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರು ಬೋಟ್‌ನಲ್ಲಿ ತೆರಳಿ ಕೆರೆ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿದರು. ಸ್ವಚ್ಛತಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಹಲಸೂರು ಕೆರೆಯು ನಗರದ ಆಕರ್ಷಣೀಯ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕಿದೆ. ಸಾರ್ವಜನಿಕರ ವಾಯುವಿಹಾರಕ್ಕೆ ಅನುಕೂಲಕರವಾಗುವಂತೆ ಸೌಕರ್ಯ ಒದಗಿಸಲಾಗುತ್ತದೆ. ಬಿಬಿಎಂಪಿಯ ಮುಂದಿನ ವರ್ಷದ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಮೀಸಲಿಡಲಿದ್ದೇವೆ’ ಎಂದರು.
ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್, ಮೋಹನ್ ಕೃಷ್, ‘ಕೆರೆಗೆ ನೀರು ಹರಿದುಬರುವ ತೂಬಿನ ಬಳಿ 100 ಅಡಿ ಉದ್ದದ ಕಸದ ಬೇಲಿ (ತ್ರ್ಯಾಷ್ ಬ್ಯಾರಿಯರ್) ಅಳವಡಿಸಲಾಗಿದೆ. ತೇಲುವ ವಸ್ತುಗಳು ಅಲ್ಲೇ ಸಂಗ್ರಹವಾಗಲಿವೆ. ಅವುಗಳನ್ನು ಆಗಿಂದಾಗ್ಗೆ ತೆರವುಗೊಳಿಸಲಾಗುತ್ತದೆ’ ಎಂದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.