ಸೋಮವಾರ, ಆಗಸ್ಟ್ 15, 2022
27 °C
ವಾರ್ಡ್ ಮರು ವಿಂಗಡಣೆ ಗೊಂದಲ l ಸಂಸದ ತೇಜಸ್ವಿ ಸೂರ್ಯ ಕಚೇರಿಯಲ್ಲಿ ವರದಿ ಸಿದ್ಧ: ಆರೋ‍ಪ

ಬಿಬಿಎಂಪಿ| ಬೈರಸಂದ್ರ–ತಿಲಕನಗರ ವಿಂಗಡಣೆ ಚಿತ್ರ–ವಿಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾರ್ಡ್ ಮರು ವಿಂಗಡಣೆ ಬಳಿಕ ಹಲವು ವಾರ್ಡ್‌ಗಳು ಕಲಸು ಮೋಲೋಗರವಾಗಿದ್ದು, ಬೈರಸಂದ್ರ, ತಿಲಕನಗರ ವಾರ್ಡ್‌ಗಳನ್ನು ಚಿತ್ರ– ವಿಚಿತ್ರವಾಗಿ ವಿಭಾಗಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಜಯನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿನ ಈ ವಾರ್ಡ್‌ನಲ್ಲಿ ನಿರ್ದಿಷ್ಟ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಬಡಾವಣೆಯನ್ನು ಉದ್ದೇಶಪೂರ್ವಕವಾಗಿಯೇ ಪಕ್ಕದ ತಿಲಕನಗರಕ್ಕೆ ಸೇರಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೈರಸಂದ್ರ ಮತ್ತು ತಿಲಕನಗರ ವಾರ್ಡ್‌ಗಳ ಈ ಹಿಂದಿನ ಮತ್ತು ಮರು ವಿಂಗಡಣೆ ಬಳಿಕದ ನಕ್ಷೆಯನ್ನು ಗಮನಿಸಿದರೆ ಎಷ್ಟು ಅವೈಜ್ಞಾನಿಕವಾಗಿ ವಿಂಗಡಿಸಲಾಗಿದೆ ಎಂಬುದು
ಅರ್ಥವಾಗುತ್ತದೆ ಎಂದು ಅವರು ಹೇಳುತ್ತಾರೆ.

‘ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಬೈರಸಂದ್ರ ಗ್ರಾಮವನ್ನೇ ವಿಭಾಗ ಮಾಡಲಾಗಿದೆ. ಎಲ್ಐಸಿ ಕಾಲೊನಿ, ಬಿಸಿಸಿ ಲೇಔಟ್‌ ಅನ್ನೂ ವಿಭಾಗಿಸಲಾಗಿದೆ. ನಿರ್ದಿಷ್ಟ ಸಮುದಾಯ ವಾಸ ಮಾಡುವ ಮನೆಗಳನ್ನು ಬೈರಸಂದ್ರ ವಾರ್ಡ್‌ನಿಂದ ಹೊರಗಿಡಲು ಹಲವು ರೀತಿಯ ಸರ್ಕಸ್‌
ಗಳನ್ನು ಮಾಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಬಾಂಧವ ನಾಗರಾಜ್ ಹೇಳಿದರು.

‘ನಮ್ಮ ವಾರ್ಡ್‌ನಲ್ಲಿ ಸುಸ್ಥಿತಿಯಲ್ಲಿದ್ದ ಪಾರ್ಕ್‌ಗಳು, ಕಿತ್ತೂರುರಾಣಿ ಚೆನ್ನಮ್ಮ ಕ್ರೀಡಾಂಗಣಗಳನ್ನು ಕಸಿದುಕೊಳ್ಳಲಾಗಿದೆ. ಅಧಿಕಾರ ಇದೆ ಎಂಬ ಕಾರಣಕ್ಕೆ ಈ ರೀತಿ ಅನ್ಯಾಯ ಮಾಡಬಾರದು. ಸಾಮಾನ್ಯ ಜನ ಇದರಿಂದ ಸಮಸ್ಯೆ ಅನುಭವಿಸಬೇಕಾಗುತ್ತದೆ’ ಎಂದು ಅವರು ಕಣ್ಣೀರು ಹಾಕಿದರು.

‘ಮರು ವಿಂಗಡಣೆ ವರದಿ ಸಂಸದ ತೇಜಸ್ವಿಸೂರ್ಯ ಅವರ ಕಚೇರಿಯಲ್ಲಿ ಸಿದ್ಧವಾಗಿದೆ. ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟಕ್ಕೆ ನಿವಾಸಿಗಳು ಸಜ್ಜಾಗಿದ್ದಾರೆ’ ಎಂದು ಹೇಳಿದರು.

‘ಎಚ್‌ಸಿಎಲ್‌ ಅಸೋಸಿಯೇಷನ್‌ನ 600 ಮನೆಗಳಿದ್ದು, ಅವುಗಳಲ್ಲಿ 100 ಮನೆಗಳನ್ನು ತಿಲಕನಗರ ವಾರ್ಡ್‌ಗೆ ಸೇರಿಸಲಾಗಿದೆ. ನಾವು ನಾಗರಿಕ ಸೇವೆ ಪಡೆಯಬೇಕೆಂದರೆ ಎರಡು ಕಿಲೋ ಮೀಟರ್ ದೂರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ರೀತಿಯ ಮೋಸದ ಕೆಲಸವನ್ನು ಯಾರೂ ಮಾಡಬಾರದು’ ಎಂದು ಅಸೋಸಿಯೇಷನ್ ಅಧ್ಯಕ್ಷ ಬಾಬುರಾವ್ ಬೇಸರ ವ್ಯಕ್ತಪಡಿಸಿದರು.

ಹೊಸ ನಾಲ್ಕು ಗ್ರಾಮಗಳು ಸೇರ್ಪಡೆ

ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ನಾಲ್ಕು ಗ್ರಾಮಗಳು ಸೇರ್ಪಡೆಯಾಗಿವೆ. ವಾರ್ಡ್‌ಗಳ ಮರುವಿಂಗಡಣೆಯಿಂದ ಈ ಬದಲಾವಣೆಯಾಗಿದ್ದು, ಸುಮಾರು ಒಂಬತ್ತು ಸಾವಿರ ಆಸ್ತಿಗಳು ಪಾಲಿಕೆಯ ತೆರಿಗೆ ವ್ಯಾಪ್ತಿಗೆ ಬರಲಿವೆ.

ಈ ಗ್ರಾಮಗಳ ಸೇರ್ಪಡೆ ಬಗ್ಗೆ ಅಧಿಸೂಚನೆಯನ್ನು ಕಳೆದ ವರ್ಷವೇ ಹೊರಡಿಸಲಾಗಿತ್ತು. ಆದರೆ, ಮೂಲಸೌಕರ್ಯಗಳ ಲಭ್ಯತೆಯ ಬಗ್ಗೆ ಬಿಬಿಎಂಪಿ ಈ ಪ್ರದೇಶಗಳ ಸಮೀಕ್ಷೆಯನ್ನು ಇನ್ನೂ ಕೈಗೊಳ್ಳಬೇಕಾಗಿದೆ.

‘ಕಮ್ಮಗೊಂಡನಹಳ್ಳಿ ವಾರ್ಡ್‌ಗೆ ಸೇರ್ಪಡೆಯಾಗಿರುವ ಲಕ್ಷ್ಮೀಪುರ ಗ್ರಾಮದ ಕಾನ್ಶಿರಾಮ್ ನಗರದಲ್ಲಿನ ಆಸ್ತಿಗಳ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ. ಇದುವರೆಗೆ ಈ ಗ್ರಾಮದಲ್ಲಿನ 4,421 ಆಸ್ತಿಗಳನ್ನು ಗುರುತಿಸಲಾಗಿದೆ’ ಎಂದು ದಾಸರಹಳ್ಳಿ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕಗ್ಗಲಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆ ಕಾವಲು ಪ್ರದೇಶ ಗಳ ಸಮೀಕ್ಷೆ ಕಾರ್ಯ ಹೆಚ್ಚಿನ ಗತಿಯಾಗಿಲ್ಲ. ಈ ಪ್ರದೇಶಗಳನ್ನು ತಲಘಟ್ಟಪುರ ವಾರ್ಡ್‌ಗೆ ಸೇರಿಸಲಾಗಿದೆ ಎಂದರು.

‘ಎಲ್ಲಾ ಅನುಮಾನಗಳಿಗೆ ಉತ್ತರ ಇಲ್ಲ’

‘ಮರು ವಿಂಗಡಣೆ ಕುರಿತ ಎಲ್ಲಾ ಅನುಮಾನಗಳಿಗೆ ಉತ್ತರ ಇಲ್ಲ, ಆಕ್ಷೇಪಣೆ ಸಲ್ಲಿಸಲು ಎಲ್ಲರಿಗೂ ಅವಕಾಶ ಇದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್‌ ಆದೇಶದಂತೆ 8 ವಾರಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಬೇಕಿದೆ. ಕೆಲವು ವಾರ್ಡ್‌ಗಳಿಗೆ ಇತಿಹಾಸ ಪುರುಷರ ಹೆಸರುಗಳನ್ನು ಇಡಲಾಗಿದೆ. ಸ್ಥಳೀಯರ ಭಾವನೆಗಳನ್ನು ಆಧರಿಸಿ ಈ ಹೆಸರುಗಳನ್ನು ಇಡಲು ಉದ್ದೇಶಿಸಲಾಗಿದೆ. ಎಲ್ಲಾ ವಾರ್ಡ್‌ಗಳಲ್ಲೂ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುವುದು ಅಸಾಧ್ಯ. ಹೆಸರುಗಳು ಬೇಡ ಎಂದರೂ ಆಕ್ಷೇಪಣೆ ಸಲ್ಲಿಸಬಹುದು’ ಎಂದು ಹೇಳಿದರು.

‘ಆಕ್ಷೇಪಣೆಗಳನ್ನು ನಗರಾಭಿವೃದ್ಧಿ ಇಲಾಖೆಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಕಳುಹಿಸಬಹುದಾಗಿದೆ. ಸರ್ಕಾರ ಹೊರಡಿಸಿರುವ ಅಧಿಸೂಚನೆ ಆಗಿರುವುದರಿಂದ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಇಲ್ಲ’ ಎಂದರು.

ಈ ಹಿಂದೆ ಇದ್ದ ವಾರ್ಡ್‌ನ ನಕ್ಷೆ, ಮರು ವಿಂಗಡಣೆಯಾದ ಬಳಿಕದ ನಕ್ಷೆ, ಜನಸಂಖ್ಯೆ, ವಾರ್ಡ್‌ನ ವಿಸ್ತೀರ್ಣ, ವಿಧಾನಸಭಾ ಕ್ಷೇತ್ರ, ಲೋಕಸಭಾ ಕ್ಷೇತ್ರ ಸೇರಿ ಎಲ್ಲಾ ವಿವರಗಳನ್ನೂ ವೆಬ್‌ಸೈಟ್‌(http://bbmpdelimitation2022.com) ನೀಡಲಾಗಿದೆ. ಕ್ಷೇತ್ರವಾರು, ವಾರ್ಡ್‌ವಾರು, ಪ್ರದೇಶವಾರು ಮಾಹಿತಿಗಳನ್ನು ಪಡೆದುಕೊಳ್ಳಲು ಅವಕಾಶ ಇದೆ. ವಿವರಗಳು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಒದಗಿಸಲಾಗಿದೆ ಎಂದು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು