ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೆರೆಹಳ್ಳಿ ಕೆರೆಯಲ್ಲಿ ತೆರವಾಗದ ಮಣ್ಣು

ಮೂರು ದಿನವಾದರೂ ಈಡೇರದ ಬಿಬಿಎಂಪಿ ಭರವಸೆ; ಸ್ಥಳೀಯರ ಆಕ್ರೋಶ
Last Updated 26 ಮಾರ್ಚ್ 2023, 20:16 IST
ಅಕ್ಷರ ಗಾತ್ರ

ಬೆಂಗಳೂರು: ಹೊಸಕೆರೆಹಳ್ಳಿ ಕೆರೆಯಲ್ಲಿ ಮಣ್ಣು ಸುರಿದಿರುವುದನ್ನು ತೆರವುಗೊಳಿಸಲಾಗುತ್ತದೆ ಎಂಬ ವಿಶೇಷ ಆಯುಕ್ತ ರವೀಂದ್ರ ಅವರ ಭರವಸೆ ಮೂರು ದಿನವಾದರೂ ಈಡೇರದ್ದಕ್ಕೆ ಸ್ಥಳೀಯ ಜನರು ಹಾಗೂ ಪರಿಸರಪ್ರೇಮಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕೆರೆಯಲ್ಲಿ ರಸ್ತೆ ನಿರ್ಮಿಸಲಾಗಿದೆ. ಇದನ್ನು ತೆರವುಗೊಳಿಸಬೇಕು ಎಂದು ಹೊಸಕೆರೆಹಳ್ಳಿ ಕೆರೆಗಾಗಿ ನಾಗರಿಕರು, ಝಟ್ಕಾ, ಒಆರ್‌ಜಿ ಮತ್ತು ಇಂಡಿಯನ್‌ ಪ್ಲೊಗ್ಗರ್ಸ್‌ ಆರ್ಮ್‌ ಸದಸ್ಯರು ಹೋರಾಟ ನಡೆಸಿದ್ದರು. ಇದಕ್ಕೆ ಸ್ಪಂದಿಸಿದ್ದ ಬಿಬಿಎಂಪಿಯ ಯೋಜನೆ ವಿಭಾಗದ ವಿಶೇಷ ಆಯುಕ್ತ ರವೀಂದ್ರ, ಮಾರ್ಚ್‌ 23ರಂದು ಸ್ಥಳಕ್ಕೆ ಭೇಟಿ ನೀಡಿದ್ದರು.

‘ಕೆರೆಯಲ್ಲಿ ರಸ್ತೆ ನಿರ್ಮಿಸುತ್ತಿಲ್ಲ. ಒಳಚರಂಡಿ ನೀರು ಹರಿವಿನ ಮಾರ್ಗ ಬದಲಾಯಿಸಲಾಗುತ್ತಿದೆ. ಇದಕ್ಕಾಗಿ ಲಾರಿಗಳು, ವಾಹನಗಳ ಸಂಚಾರ ಸುಲಭವಾಗಲಿ ಎಂದು ಮಣ್ಣು ಸುರಿದಿದ್ದೇವೆ. ಇದನ್ನು ತೆರವು ಮಾಡಲಾಗುತ್ತದೆ ಎಂದು ಸ್ಥಳೀಯರಿಗೆ ಭರವಸೆ ನೀಡಿದ್ದರು. ಆದರೆ ಭಾನುವಾರ ನಾವೆಲ್ಲ ಕೆರೆ ಬಳಿ ಹೋದಾಗ ಎಂದಿನಂತೆ ಕೆರೆಯಲ್ಲಿ ಜೆಸಿಬಿಗಳಿಂದ ಕೆಲಸ ನಡೆಯುತ್ತಿತ್ತು. ಮಣ್ಣು ತೆಗೆದಿರಲಿಲ್ಲ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಲು
ಪ್ರಯತ್ನಿಸಿದರೆ ಯಾರೂ ಪ್ರತಿಕ್ರಿಯಿಸಲಿಲ್ಲ’ ಎಂದು ಸಂಸ್ಥೆಯ ಸದಸ್ಯರು ದೂರಿದರು.

‘ಹೊಸಕೆರೆ ಹಳ್ಳಿ ಕೆರೆಯ ಅಭಿವೃದ್ಧಿ ಕಾರ್ಯಗಳನ್ನು ₹9 ಕೋಟಿ ವೆಚ್ಚದಲ್ಲಿ ನಡೆಸಲು ಟೆಂಡರ್‌ ಕರೆಯ‌ಲಾಗಿದೆ. ಆದರೆ, ಈ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳದಯೇ ಕೆಲಸಗಳು ಆರಂಭವಾಗಿವೆ. ಇದೀಗ ಹೂಳು ತೆಗೆಯಲು ಹಣ ವೆಚ್ಚ ಮಾಡಲಾಗುತ್ತದೆ ಎನ್ನಲಾಗಿದೆ. ಆದರೆ, ಬಿಡಿಎ ವತಿಯಿಂದ 2017ರಲ್ಲಿ ಹೂಳು ತೆಗೆಯಲಾಗಿತ್ತು. ಈ ಬಗ್ಗೆ ಬಿಬಿಎಂಪಿ ಎಂಜಿನಿಯರ್‌ಗಳಿಗೆ ಮಾಹಿತಿಯೇ ಇಲ್ಲ. ಇದೀಗ ಮತ್ತೆ ಅದೇ ಕೆಲಸಕ್ಕೆ ಕೋಟ್ಯಂತರ ವೆಚ್ಚ ಮಾಡುತ್ತಿದ್ದಾರೆ. ಇದೆಲ್ಲ ಹಣವನ್ನು ಲೂಟಿ ಮಾಡುವ ಬಗೆ’ ಎಂದು ಸ್ಥಳೀಯರಾದ ಶ್ರೀನಿವಾಸ್ ಆರೋಪಿಸಿದರು.

‘ಹೊಸ ಟೆಂಡರ್‌ ಕರೆದಿರುವ ಬಗ್ಗೆ ಮಾಹಿತಿ ನೀಡಿ, ಯಾವ ಕೆಲಸ ಕೈಗೊಳ್ಳುತ್ತಿದ್ದೀರಿ ಎಂಬ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ನೀಡಿ ಎಂದು ಟೆಂಡರ್‌ ಕರೆದಿರುವ ಕಾರ್ಯಪಾಲಕ ಎಂಜಿನಿಯರ್‌ ಅವರನ್ನೇ ಕೇಳಿದರೆ, ಡಿಪಿಆರ್ ಆಗಿಲ್ಲ ಎನ್ನುತ್ತಾರೆ. ಡಿಪಿಆರ್‌ ಇಲ್ಲದೆ ಟೆಂಡರ್‌ ಕರೆಯುವಂತಿಲ್ಲ. ಹೀಗಾಗಿ ಇದು ಟೆಂಡರ್‌ ನಿಯಮದ ಉಲ್ಲಂಘನೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಭೀಮನಕಟ್ಟೆಗೆ ಕೊಳಚೆ ನೀರು, ಮಣ್ಣು

ಹೊಸಕೆರೆಹಳ್ಳಿ ಕೆರೆಗೆ, ಮೇಲ್ಭಾಗದಲ್ಲಿರುವ ರಾಜರಾಜೇಶ್ವರಿನಗರದ ಭೀಮನಕಟ್ಟೆ ಕೆರೆಗೆ ಕೊಳಚೆ ನೀರು ಮತ್ತು ಮಣ್ಣು–ಕಲ್ಲು ಸುರಿಯಲಾಗುತ್ತಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಭೀಮನಕಟ್ಟೆ ಕೆರೆ ಸಂರಕ್ಷಣಾ ಬಳಗದ ಸದಸ್ಯರು ದೂರಿದರು.

‘ಕೆರೆಯ ಹೂಳು ತೆಗೆದು, ಸಂಗ್ರಹ ಸಾಮರ್ಥ್ಯ ಹೆಚ್ಚಿಸುವಂತೆ ಕೋರಲಾಗಿತ್ತು. ಅದನ್ನೂ ಮಾಡಿಲ್ಲ. ಇದೀಗ ಮೇಲ್ಭಾಗದಿಂದ ಒಳಚರಂಡಿ ನೀರು ಕೆರೆಗೆ ಹರಿಯುತ್ತಿದೆ. ಇದನ್ನು ನಿಲ್ಲಿಸುವಂತೆ ಮನವಿ ಮಾಡಲಾಗಿದೆ. ಆದರೆ, ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಬಳಗದ ಕೆ.ಎ. ಶಿವೇಗೌಡ ಹೇಳಿದರು.

‘ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಬೇರೆ ಯಾವುದೇ ರೀತಿಯಲ್ಲಿ ಅಭಿವೃದ್ಧಿಯಾದರೆ ಭೀಮನಕಟ್ಟೆ ಕೆರೆಗೆ ನೀರಿನ ಹರಿವಿಗೆ ತಡೆಯಾಗುತ್ತದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದರು.

ಪ್ರತಿಕ್ರಿಯಿಸದ ಎಂಜಿನಿಯರ್‌

‘ರಾಜರಾಜೇಶ್ವರಿ ನಗರ ವಲಯದ ಹೊಸಕೆರೆಹಳ್ಳಿ ಕೆರೆ, ಭೀಮನಕಟ್ಟೆ, ಮಲ್ಲತ್ತಹಳ್ಳಿ, ಹಲಗೆವಡೇರಹಳ್ಳಿ, ಕೆಂಚೇನಹಳ್ಳಿ ಕೆರೆಗಳಲ್ಲಿ ಪರಿಸರಕ್ಕೆ ವಿರುದ್ಧವಾಗಿ ಕೆರೆಗಳ ಅಭಿವೃದ್ಧಿ ಹಾಗೂ ಅಲ್ಲಿ ಮಣ್ಣು ತುಂಬುವ ಕೆಲಸಲಾಗುತ್ತಿವೆ. ಈ ವಲಯದ ಕೆರೆಗಳ ವಿಭಾಗದ ಎಂಜಿನಿಯರ್‌ ಶಿಲ್ಪಾ ಅವರು ನಾಗರಿಕರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ’ ಎಂದು ಸ್ಥಳೀಯ ನಿವಾಸಿಗಳು, ಕೆರೆ ಸಂರಕ್ಷಣೆ ಹೋರಾಟಗಾರರು ದೂರಿದ್ದಾರೆ.

‘ಮುಖ್ಯ ಎಂಜಿನಿಯರ್‌ ಅವರಿಗೂ ಶಿಲ್ಪಾ ಅವರು ಮಾಹಿತಿ ನೀಡುವುದಿಲ್ಲ. ಕೆರೆಗಳ ಅಭಿವೃದ್ಧಿಯಲ್ಲಿ ಆಗುತ್ತಿರುವ ಎಲ್ಲ ಲೋಪಗಳಿಗೂ ಇವರೇ ಕಾರಣ. ಇವರ ಆಣತಿಯಂತೆಯೇ ಎಲ್ಲ ನಡೆಯುತ್ತಿದೆ’ ಎಂದು ವಿಜಯಕುಮಾರ್‌ ಆರೋ‍ಪಿಸಿದರು. ಈ ಬಗ್ಗೆ ಶಿಲ್ಪಾ ಅವರು ಪ್ರತಿಕ್ರಿಯಿಸಲಿಲ್ಲ.

ಸದ್ಯಕ್ಕೆ ತೆರವಿಲ್ಲ

‘ರೀಟೈನಿಂಗ್ ವಾಲ್‌ ಮಾಡಲು ಒಂದು ಕಡೆ ಕೆಲಸ ಮಾಡಲಾಗುತ್ತಿದೆ. ಇನ್ನೊಂದೆಡೆ, ಶುಭ್ರ ಬೆಂಗಳೂರು ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆ ವಿಭಾಗದಿಂದ ಒಳಚರಂಡಿ ನೀರನ್ನು ಮಾರ್ಗ ಬದಲಿಸುವ ಕೆಲಸವಾಗುತ್ತಿದೆ. ಇದಕ್ಕಾಗಿ ತಾತ್ಕಾಲಿಕವಾಗಿ ಮಣ್ಣು ಸುರಿದುಕೊಂಡು, ‍‘ರ‍್ಯಾಂಪ್’ ಮಾಡಿಕೊಳ್ಳಲಾಗುತ್ತಿದೆ. ಇದು ₹10 ಕೋಟಿ ವೆಚ್ಚದ ಕಾಮಗಾರಿಯಾಗಿದ್ದು, ಒಂದಷ್ಟು ತಿಂಗಳು ನಡೆಯುತ್ತದೆ. ಕೆಲಸ ಮುಗಿದ ನಂತರವಷ್ಟೇ ತೆರವು ಮಾಡಲಾಗುತ್ತದೆ. ಕೆರೆಯನ್ನು ಸಂಪೂರ್ಣವಾಗಿ ರಕ್ಷಿಸಲಾಗುತ್ತದೆ’ ಎಂದು ಬಿಬಿಎಂಪಿ ಯೋಜನೆ ವಿಭಾಗದ ವಿಶೇಷ ಆಯುಕ್ತ ರವೀಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT