ಮಂಗಳವಾರ, ಜೂನ್ 28, 2022
25 °C

ದೇವಸ್ಥಾನದ ಸ್ಥಿರಾಸ್ತಿ ಒತ್ತುವರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ವಿ. ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಗರದ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಯನ್ನು ಒತ್ತುವರಿ ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮತೆಗೆದುಕೊಳ್ಳಲಾಗುವುದು’ ಎಂದು ವಸತಿ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು.‌

ವಿಧಾನಪರಿಷತ್‌ನಲ್ಲಿ ಬಿಜೆಪಿಯ ಎನ್. ರವಿಕುಮಾರ್ ಮತ್ತು ಕಾಂಗ್ರೆಸ್ಸಿನ ಕೆ.ಆರ್. ರಮೇಶ್ ಅವರ ಪ್ರಶ್ನೆಗಳಿಗೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಪರ ಉತ್ತರಿಸಿದ ಸಚಿವರು, ‘ಬೆಂಗಳೂರಿನ ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನ ‘ಬಿ’ ವರ್ಗದ ಧಾರ್ಮಿಕ ಸಂಸ್ಥೆ. ದೇವಾಲಯವು ನೀಲಸಂದ್ರ ಗ್ರಾಮದಲ್ಲಿ 41.05 ಎಕರೆ, ಹೊಂಗಸಂದ್ರ ಗ್ರಾಮದಲ್ಲಿ 34.18 ಎಕರೆ, ದೂಕನಹಳ್ಳಿ ಗ್ರಾಮದಲ್ಲಿ 87.03 ಎಕರೆ, ಕೋರಮಂಗಲದಲ್ಲಿ 83.30 ಎಕರೆ ಜಮೀನು ಹೊಂದಿದೆ’ ಎಂದರು.

‘ಒಟ್ಟು ಜಮೀನಿನ ಪೈಕಿ ನೀಲಸಂದ್ರ ಗ್ರಾಮದ 79ನೇ ಸರ್ವೆ ನಂಬರ್‌ನಲ್ಲಿರುವ 15.12 ಎಕರೆ ಜಮೀನಿನ ಕೆಲವು ಭಾಗ ಒತ್ತುವರಿಯಾಗಿದೆ. ಇಲ್ಲಿ ಸುಮಾರು 216 ಒತ್ತುವರಿದಾರರಿದ್ದು, ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಲಾಗಿದೆ. ಎಷ್ಟೇ ಪ್ರಭಾವಿಗಳಿದ್ದರೂ, ಯಾರೇ ವಿರೋಧ ವ್ಯಕ್ತಪಡಿಸಿದರೂ ಮುಲಾಜಿಲ್ಲದೆ ಒತ್ತುವರಿ ತೆರವು ಮಾಡ ಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಎಫ್‌ಐಆರ್‌ ದಾಖಲಿಸಲಾಗುವುದು’ ಎಂದರು.

‘ಒತ್ತುವರಿ ತಡೆಯಲು ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಈಗಾಗಲೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಪ್ರಕರಣಕ್ಕೆ ಅಂತ್ಯವಾಡಲು ಸದ್ಯದಲ್ಲೇ ಸಂಬಂಧಪಟ್ಟವರ ಸಭೆ ನಡೆಸಲಾಗುವುದು’ ಎಂದರು.

‘ಈ ದೇವಸ್ಥಾನದ ಭೂಮಿ ಒತ್ತುವರಿ ಮಾಡಿದವರು ಉದ್ಧಾರ ಆಗಿಲ್ಲ. ಬಿಬಿಎಂಪಿ ಕೂಡ ದೇವಸ್ಥಾನದ ಜಾಗದಲ್ಲಿ ಆಡಳಿತಾತ್ಮಕ ಕಚೇರಿ ಹೊಂದಿದೆ. ಹೀಗಾಗಿಯೇ ಅದು ಅಭಿವೃದ್ಧಿಯಾಗದೆ ಕುಂಟುತ್ತಾ ಸಾಗುತ್ತಿದೆ’ ಎಂದು ಸೋಮಣ್ಣ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು