ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮದ ಪ್ರಕರಣ | ಯಾವುದೇ ತನಿಖೆಗೂ ಸಿದ್ಧ: ಸಚಿವ ಶರಣಪ್ರಕಾಶ್ ಪಾಟೀಲ

Published 9 ಜೂನ್ 2024, 0:07 IST
Last Updated 9 ಜೂನ್ 2024, 0:07 IST
ಅಕ್ಷರ ಗಾತ್ರ

ಬೆಂಗಳೂರು: ‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಸಾಕ್ಷ್ಯ ನಾಶಗೊಳಿಸಲು ನನ್ನ ಕಚೇರಿಯಲ್ಲಿ ಯಾವುದಾದರೂ ವ್ಯಕ್ತಿಗಳ ಜೊತೆ ನಾನು ಸಭೆ ನಡೆಸಿದ್ದರೆ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಗೆ ಸಿದ್ಧ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಸವಾಲು ಹಾಕಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಮೇ 24ರಂದುವಿಕಾಸಸೌಧದ ನನ್ನ ಕಚೇರಿಯಲ್ಲಿ ನಿಗಮದ ಅಧ್ಯಕ್ಷ ಬಸವರಾಜ ದದ್ದಲ್ ಸೇರಿ ಕೆಲವರ ಜೊತೆ ನಾನು ಸಭೆ ನಡೆಸಿ ಸಾಕ್ಷ್ಯ ನಾಶ ಮಾಡಿದ್ದೇನೆಂಬ ಆರೋಪ ಮಾಡಲಾಗಿದೆ. ಆದರೆ, ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ
ಜಾರಿಯಲ್ಲಿದ್ದ ಕಾರಣ ನಾನು ಆ ದಿನ ಕಚೇರಿಗೆ ಭೇಟಿ ನೀಡಿರಲಿಲ್ಲ’ ಎಂದರು.

‘ಸುಳ್ಳು ಆರೋಪಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅಷ್ಟಕ್ಕೂ ವಿಕಾಸಸೌಧದ ಕೊಠಡಿಯು ನನಗೆ ಸರ್ಕಾರ ನೀಡಿರುವ ಕಚೇರಿ. ಅದು ನನ್ನ ಸ್ವಂತ ಮನೆಯೇನೂ ಅಲ್ಲ. ಸಚಿವನಾಗಿರುವುದರಿಂದ ನನ್ನನ್ನು ನೋಡಲು ರಾಜ್ಯದ ವಿವಿಧ ಕಡೆಗಳಿಂದ ನೂರಾರು ಜನ ಬಂದು ಹೋಗುತ್ತಾರೆ. ಆ ಎಲ್ಲರ ವಿವರಗಳನ್ನು ಕಲೆ ಹಾಕಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಎಸ್‍ಐಟಿ ವಶದಲ್ಲಿರುವ ವ್ಯಕ್ತಿಗಳ ಮುಖವನ್ನು ನಾನು ನೋಡಿಲ್ಲ. ನನಗೂ, ಅವರಿಗೂ ಯಾವುದೇ ಸಂಬಂಧವೂ ಇಲ್ಲ. ಎಸ್‍ಐಟಿ ಅಧಿಕಾರಿಗಳ ಮುಂದೆ ಪ್ರಕರಣದ ಆರೋಪಿ ಏನು ಹೇಳಿದ್ದಾನೆಂಬುದು ನನಗೂ ಗೊತ್ತಿಲ್ಲ. ವೈದ್ಯಕೀಯ ಶಿಕ್ಷಣ ಸಚಿವರು ಎಂದು ಎಲ್ಲಾದರೂ ಹೇಳಿರುವ ಬಗ್ಗೆ ವರದಿಯಾಗಿದೆಯೇ? ಊಹಾಪೋಹಗಳಿಗೆ ನಾನೇಕೆ ಉತ್ತರಿಸಲಿ’ ಎಂದು ಹೇಳಿದರು.

‘ನನ್ನ ಕಚೇರಿಯಲ್ಲಿ ಸಭೆ ನಡೆಸಿದ್ದೇನೆಯೇ ಎಂದು ತಿಳಿಯಲು ಸಿ.ಸಿ.ಟಿ.ವಿ ಕ್ಯಾಮೆರಾದ ತುಣುಕುಗಳನ್ನು ತೆಗೆದು ಪರಿಶೀಲಿಸಲಿ. ಈ ಕುರಿತು ಸರ್ಕಾರ ತನಿಖೆ ನಡೆಸಿದರೂ ನನ್ನ ಅಭ್ಯಂತರವಿಲ್ಲ. ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಲಿದೆ’ ಎಂದರು.

ಬಿಜೆಪಿಯವರು ರಾಜೀನಾಮೆ ಕೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾವ ಆಧಾರದ ಮೇಲೆ ಅವರು ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂಬುದೇ ಗೊತ್ತಿಲ್ಲ. ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದ ಮೇಲೆ ರಾಜೀನಾಮೆ ನೀಡುವ ಔಚಿತ್ಯವಾದರೂ ಏನು’ ಎಂದೂ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT