ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ನಿಗಾ ಘಟಕದಿಂದ ಮಗು ಅಪಹರಣ

ವಾಣಿ ವಿಲಾಸ ಆಸ್ಪತ್ರೆಯಲ್ಲಿ ಘಟನೆ * ಅಪರಿಚಿತ ವಿರುದ್ಧ ದೂರು ನೀಡಿದ ತಂದೆ
Last Updated 15 ನವೆಂಬರ್ 2020, 16:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿದ್ದ ಎರಡು ದಿನದ ಮಗುವನ್ನು ಅಪರಿಚಿತರು ಅಪಹರಣ ಮಾಡಿದ್ದು, ಈ ಸಂಬಂಧ ವಿ.ವಿ. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನ. 11ರಂದು ಮಗು ಅಪಹರಣವಾಗಿದ್ದು, ಈ ಬಗ್ಗೆ ತಂದೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದ್ದು, ಕೆಲ ಸುಳಿವುಗಳು ಸಿಕ್ಕಿವೆ. ಅದನ್ನು ಆಧರಿಸಿ ಮಗುವನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ವಿಜಿನಾಪುರದ ನಿವಾಸಿಯಾದ 27 ವರ್ಷದ ಮಹಿಳೆ, ಹೆರಿಗೆಗೆಂದು ಇತ್ತೀಚೆಗೆ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಹೆಣ್ಣು ಮಗು ಹುಟ್ಟಿತ್ತು. ಎರಡು ದಿನಗಳ ಮಗುವಿನ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.’

‘ಘಟಕಕ್ಕೆ ನುಗ್ಗಿದ್ದ ಅಪರಿಚಿತರು ಮಗು ಅಪಹರಿಸಿಕೊಂಡು ಹೋಗಿದ್ದಾರೆ. ಆತಂಕಗೊಂಡ ಪೋಷಕರು, ಆಸ್ಪತ್ರೆಯವರನ್ನು ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನೊಂದ ತಂದೆ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಪೊಲೀಸರು ಹೇಳಿದರು.

‘ಸಿಬ್ಬಂದಿ ಘಟಕದಲ್ಲಿ ಇಲ್ಲದಿರುವಾಗ ಮಗು ಅಪಹರಣ ಆಗಿರುವುದಾಗಿ ಆಸ್ಪತ್ರೆಯವರು ಹೇಳಿದ್ದಾರೆ. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ’ ಎಂದೂ ತಿಳಿಸಿದರು.

ಆಸ್ಪತ್ರೆಯಿಂದ ಹೋಗುವಂತೆ ಒತ್ತಾಯ: ಮಗು ಅಪಹರಣ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಇದರ ನಡುವೆಯೇ ಆಸ್ಪತ್ರೆಯಿಂದ ಹೋಗುವಂತೆ ಮಗುವಿನ ಪೋಷಕರನ್ನು ಒತ್ತಾಯಿಸಲಾಗುತ್ತಿದೆ.

‘ತೀವ್ರ ನಿಗಾ ಘಟಕದಲ್ಲೇ ಮಗು ಕಳವಾಗಿದ್ದು, ಇದಕ್ಕೆ ಆಸ್ಪತ್ರೆಯವರ ನಿರ್ಲಕ್ಷ್ಯ ಕಾರಣ. ಮಗು ಸಿಗುವವರೆಗೂ ಆಸ್ಪತ್ರೆಯಿಂದ ಹೋಗುವುದಿಲ್ಲ. ನಮಗೆ ನಮ್ಮ ಮಗು ಬೇಕು. ಆದರೆ, ಆಸ್ಪತ್ರೆಯವರು ಆಸ್ಪತ್ರೆಯಿಂದ ಹೊರಡುವಂತೆ ಹೇಳುತ್ತಿದ್ದಾರೆ’ ಎಂದು ಮಗುವಿನ ಸಂಬಂಧಿಕರು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಲು ಆಸ್ಪತ್ರೆಯವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT