ಭಾನುವಾರ, ಜೂನ್ 26, 2022
21 °C
ದಾನಕ್ಕೆ ಹಿಂದೇಟು l ಎದೆಹಾಲು ಬ್ಯಾಂಕಿನಲ್ಲಿ ಸದ್ಯ 6 ಲೀಟರ್‌ ಅಷ್ಟೇ ಸಂಗ್ರಹ

ವಾಣಿವಿಲಾಸ: ‘ಅಮೃತಧಾರೆ’ಗೆ ಬೇಡಿಕೆ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಲ್ಲಿನ ವಾಣಿವಿಲಾಸ ಆಸ್ಪತ್ರೆಯ ‘ಅಮೃತಧಾರೆ’ ಎದೆಹಾಲು ಬ್ಯಾಂಕಿಗೆ ನಗರದ ಖಾಸಗಿ ಆಸ್ಪತ್ರೆಗಳೂ ಎದೆಹಾಲಿಗೆ ಬೇಡಿಕೆ ಸಲ್ಲಿಸುತ್ತಿವೆ. ಆದರೆ, ದಾನಿಗಳ ಕೊರತೆಯಿಂದಾಗಿ ಬ್ಯಾಂಕಿನಲ್ಲಿ ಸದ್ಯ 6 ಲೀಟರ್ ಹಾಲು ಮಾತ್ರ ಲಭ್ಯವಿದೆ.

ಆಸ್ಪತ್ರೆಯಲ್ಲಿ ಹೆರಿಗೆ ಆದವರು ಹಾಗೂ ಸ್ವಇಚ್ಛೆಯಿಂದ ಹೊರಗಿನಿಂದ ಬರುವ ತಾಯಂದಿರಿಂದ ಎದೆ ಹಾಲು ಸಂಗ್ರಹಿಸಲಾಗುತ್ತಿದೆ. ಬ್ಯಾಂಕ್‌ನಲ್ಲಿ ಈವರೆಗೆ 45 ಲೀಟರ್ ಹಾಲನ್ನು ಶೇಖರಣೆ ಮಾಡಲಾಗಿದೆ. ಅದರಲ್ಲಿ 30 ಲೀಟರ್‌ನಷ್ಟು ಎದೆಹಾಲನ್ನು 120 ಶಿಶುಗಳಿಗೆ ಒದಗಿಸಲಾಗಿದೆ. 

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಯಂತೆ ಆರು ತಿಂಗಳೊಳಗಿನ ಶೇ 46 ರಷ್ಟು ಶಿಶು ಗಳಿಗೆ ಸ್ತನ್ಯಪಾನ ಸಮರ್ಪಕವಾಗಿ ಆಗುತ್ತಿಲ್ಲ. ಈ ಕೊರತೆ ನೀಗಿಸಲು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ (ಬಿಎಂಸಿಆರ್‌ಐ) ಕಾರ್ಯನಿರ್ವಹಿಸುತ್ತಿರುವ ವಾಣಿವಿಲಾಸ ಆಸ್ಪತ್ರೆಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ತಾಯಂದಿರ ಎದೆ ಹಾಲಿನ ಬ್ಯಾಂಕ್‌ ನಿರ್ಮಿಸಲಾಗಿದೆ.

ಕಳೆದ ಮಾರ್ಚ್‌ ತಿಂಗಳಿನಲ್ಲಿ ಈ ಬ್ಯಾಂಕಿಗೆ ಚಾಲನೆ ದೊರೆತಿದ್ದು, ರಾಜ್ಯದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸ್ಥಾಪಿಸ ಲಾದ ತಾಯಂದಿರ ಎದೆ ಹಾಲಿನ ಮೊದಲ ಬ್ಯಾಂಕ್ ಎಂಬ ಹಿರಿಮೆಗೂ ಇದು ಪಾತ್ರವಾಗಿದೆ. 

ವಾಣಿವಿಲಾಸ ಆಸ್ಪತ್ರೆಯಲ್ಲಿ ಜನಿಸಿದ ಶಿಶುಗಳಿಗೆ ಅಲ್ಲಿನ ವೈದ್ಯರು ಪರಿಶೀಲಿಸಿ, ಎದೆಹಾಲು ಪೂರೈಕೆಗೆ ಬ್ಯಾಂಕ್‌ಗೆ ಶಿಫಾರಸು ಸಲ್ಲಿಸುತ್ತಿದ್ದಾರೆ. ನವಜಾತ ತೀವ್ರ ನಿಗಾ ಘಟಕದಲ್ಲಿ ಇರುವ ಶಿಶುಗಳು ಸೇರಿದಂತೆ ಎದೆಹಾಲಿನಿಂದ ವಂಚಿತರಾಗಿರುವ ಶಿಶುಗಳಿಗೆ ಎದೆಹಾಲು ಪೂರೈಸಲು ಖಾಸಗಿ ಆಸ್ಪತ್ರೆಗಳು ಮನವಿ ಸಲ್ಲಿಸುತ್ತಿವೆ. 

ಜಾಗೃತಿ ಕೊರತೆ: ‘ಅಗತ್ಯ ಪರೀಕ್ಷೆ ನಡೆಸಿ ಆರೋಗ್ಯವಂತ ತಾಯಿಯಿಂದ ಎದೆಹಾಲು ಪಡೆಯಲಾಗುತ್ತದೆ. ಈ ಬಗ್ಗೆ ಇನ್ನಷ್ಟು ಜಾಗೃತಿ ಅಗತ್ಯ. ಸುಶಿಕ್ಷಿತ ತಾಯಂದಿರಷ್ಟೇ ಈಗ ಎದೆಹಾಲು ದಾನಕ್ಕೆ ಮುಂದೆ ಬರುತ್ತಿದ್ದಾರೆ’ ಎಂದು ಸ್ಥಾನಿಕ ವೈದ್ಯಾಧಿಕಾರಿ ಡಾ. ಸಂತೋಷ್ ತಿಳಿಸಿದರು. 

‘ಖಾಸಗಿ ಆಸ್ಪತ್ರೆಗಳೂ ಬೇಡಿಕೆ ಸಲ್ಲಿಸು ತ್ತಿವೆ. ಆದರೆ, ನಮ್ಮ ಆಸ್ಪತ್ರೆಯಲ್ಲಿಯೇ ಕೆಲ ಶಿಶುಗಳಿಗೆ ಅಗತ್ಯವಿರುವುದರಿಂದ ಬೇಡಿಕೆ ಪೂರೈಸುವುದು ಕಷ್ಟ. ಶೇಖರಣೆ ಸಾಮರ್ಥ್ಯವನ್ನೂ ವಿಸ್ತರಣೆ ಮಾಡಲಾಗುತ್ತಿದೆ’ ಎಂದು ಆಸ್ಪತ್ರೆ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಮಲ್ಲೇಶ್ ಕೆ. ಹೇಳಿದರು. 

‘6 ತಿಂಗಳು ಶೇಖರಣೆ ಸಾಧ್ಯ’
‘ಬ್ಯಾಂಕ್‌ನಲ್ಲಿ ಸಂಗ್ರಹಿಸಿದ ಹಾಲನ್ನು ಪ್ಯಾಶ್ಚಿರೀಕರಿಸಿದ ಬಳಿಕ ಪ್ಯಾಕ್‌ ಮಾಡಿ, ಸಂರಕ್ಷಿಸಲಾಗುತ್ತದೆ. ಶಿಶುವಿಗೆ ನೀಡುವಾಗ ಸಾಮಾನ್ಯ ಉಷ್ಣಾಂಶಕ್ಕೆ ತರಲಾಗುತ್ತದೆ. ಇದನ್ನು ಆರು ತಿಂಗಳು ಶೇಖರಿಸಿಡಬಹುದು. ಖಾಸಗಿ ಎದೆಹಾಲು ಬ್ಯಾಂಕ್‌ಗಳಲ್ಲಿ 150 ಮಿ.ಲೀ. ಹಾಲಿಗೆ ₹ 6,500ರಿಂದ ₹ 8,000 ಪಾವತಿಸಬೇಕು. ಅಗತ್ಯವಿರುವ ಶಿಶುಗಳಿಗೆ ಇಲ್ಲಿ ಎದೆಹಾಲು ಉಚಿತವಾಗಿ ಒದಗಿಸಲಾಗುತ್ತಿದೆ’ ಎಂದು ವಾಣಿವಿಲಾಸ ಆಸ್ಪತ್ರೆ ವೈದ್ಯರು ತಿಳಿಸಿದರು.

ಯಾವ ಶಿಶುಗಳಿಗೆ ಹಾಲು ಪೂರೈಕೆ?
ಅವಧಿ ಪೂರ್ವದಲ್ಲಿ ಜನಿಸಿದ ಶಿಶುಗಳು, ಅಸ್ವಸ್ಥ ಶಿಶುಗಳು, ಅನಾಥ ಶಿಶುಗಳು, ಮೃತಪಟ್ಟ ತಾಯಂದಿರ ಶಿಶುಗಳು, ರೋಗಗ್ರಸ್ತ ಬಾಣಂತಿಯರ ಶಿಶುಗಳು, ಎದೆಹಾಲು ಉತ್ಪಾದನೆಯಾಗದ ಬಾಣಂತಿಯರ ಶಿಶುಗಳಿಗೆ ಕೇಂದ್ರದಿಂದ ಎದೆಹಾಲು ದಾನ ಮಾಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು