ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸಿರುಗಟ್ಟಿಸಿ ಮಹಿಳೆ ಕೊಲೆ: ಕೊಳೆತ ಸ್ಥಿತಿಯಲ್ಲಿ ಮೃತದೇಹ

ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹ: ಪರಿಚಯಸ್ಥರೇ ಆರೋಪಿಗಳು
Last Updated 12 ಏಪ್ರಿಲ್ 2022, 16:47 IST
ಅಕ್ಷರ ಗಾತ್ರ

ಬೆಂಗಳೂರು: ವರ್ತೂರು ಠಾಣೆ ವ್ಯಾಪ್ತಿಯಲ್ಲಿ ಸುನೀತಾ ರಾಮಪ್ರಸಾದ್ (55) ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

'ಗೋವಿಂದಪುರ ನಿವಾಸಿ ಇಮ್ರಾನ್ (32), ವೆಂಕಟೇಶ್ (30) ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ಕಿರಣ್ (25) ತಲೆಮರೆಸಿಕೊಂಡಿದ್ದಾನೆ. ಈತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಕಿರಣ್, ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಶಿಕ್ಷಕಿಯಾಗಿರುವ ಪತ್ನಿ ಜೊತೆ ವರ್ತೂರು ಬಳಿಯ ಕಾಚಮಾರನಹಳ್ಳಿ ಸಮೀಪದ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ನೆಲೆಸಿದ್ದ. ಇನ್ನೊಬ್ಬ ಆರೋಪಿ ಇಮ್ರಾನ್, ಆಟೊ ಚಾಲಕ. ವೆಂಕಟೇಶ್, ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ’ ಎಂದೂ ತಿಳಿಸಿದರು.

ಅವಿವಾಹಿತೆ: ‘ಮಲ್ಲೇಶ್ವರದ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದ ಸುನೀತಾ, ಅವಿವಾಹಿತೆ. ಅವರ ಸಹೋದರರು ವಿದೇಶದಲ್ಲಿ ವಾಸವಿದ್ದಾರೆ. ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ಸುನೀತಾ, ಹಲವರಿಗೆ ಸಾಲ ಕೊಟ್ಟಿದ್ದರು. ಅವರಿಗೆ ಕಿರಣ್, ಇಮ್ರಾನ್ ಹಾಗೂ ವೆಂಕಟೇಶ್ ಪರಿಚಯವಾಗಿತ್ತು. ಮೂವರು ಆಗಾಗ ಸುನೀತಾ ಅವರನ್ನು ಭೇಟಿಯಾಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಸುನೀತಾ ಬಳಿ ಹೆಚ್ಚು ಚಿನ್ನಾಭರಣ ಹಾಗೂ ಹಣ ಇರುವುದಾಗಿ ತಿಳಿದಿದ್ದ ಆರೋಪಿಗಳು, ಅದನ್ನು ತಮ್ಮದಾಗಿಸಿಕೊಳ್ಳಲು ಯೋಚಿಸುತ್ತಿದ್ದರು. ಕೊಲೆ ಮಾಡಲು ಸಂಚು ರೂಪಿಸಿದ್ದರು’ ಎಂದೂ ತಿಳಿಸಿದರು.

‘ಆರೋಪಿ ಕಿರಣ್, ಸುನೀತಾ ಅವರನ್ನು ಏಪ್ರಿಲ್ 1ರಂದು ತನ್ನ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಫ್ಲ್ಯಾಟ್‌ಗೆ ಕರೆದೊಯ್ದಿದ್ದ. ಅಲ್ಲೇ ಇತರೆ ಆರೋಪಿಗಳು ಇದ್ದರು. ಸುನೀತಾ ಮೇಲೆ ದಾಳಿ ಮಾಡಿದ್ದ ಆರೋಪಿಗಳು, ಉಸಿರುಗಟ್ಟಿಸಿ ಕೊಂದಿದ್ದರು. ಆದರೆ, ಯಾವುದೇ ಆಭರಣ ಹಾಗೂ ಹಣ ಸಿಕ್ಕಿರಲಿಲ್ಲ. ನಂತರ, ಫ್ಲ್ಯಾಟ್‌ಗೆ ಬೀಗ ಹಾಕಿಕೊಂಡು ಆರೋಪಿಗಳು ಪರಾರಿಯಾಗಿದ್ದರು.’

‘ಏ. 5ರಂದು ಪ್ಲ್ಯಾಟ್‌ನಿಂದ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ನಿವಾಸಿಗಳು ಠಾಣೆಗೆ ಮಾಹಿತಿ ನೀಡಿದ್ದರು. ಬೀಗ ಮುರಿದು ಬಾಗಿಲು ತೆರೆದು ನೋಡಿದಾಗ, ಕೊಳೆತ ಸ್ಥಿತಿಯಲ್ಲಿ ಮೃತದೇಹ ಕಂಡಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳು ಹಾಗೂ ಮೊಬೈಲ್‌ ಕರೆಗಳ ವಿವರ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಪತ್ತೆಯಾಯಿತು’ ಎಂದೂ ಪೊಲೀಸರು ಹೇಳಿದರು.

ನಾಪತ್ತೆ ಬಗ್ಗೆ ದೂರು: ‘ಮನೆಯಿಂದ ಹೊರಹೋದ ಸುನೀತಾ ವಾಪಸು ಬಂದಿಲ್ಲವೆಂದು ಅವರ ಸಂಬಂಧಿಕರು ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದರು. ನಾಪತ್ತೆ ಬಗ್ಗೆ ಎಫ್‌ಐಆರ್ ದಾಖಲಾಗಿತ್ತು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT