ಶುಕ್ರವಾರ, ಫೆಬ್ರವರಿ 3, 2023
24 °C
ಮಹದೇವಪುರ ವಲಯ ವ್ಯಾಪ್ತಿಯ ದೊಡ್ಡನೆಕ್ಕುಂದಿ ಕೆರೆಗೆ ಒಳಚರಂಡಿ ನೀರು ನೇರ ಹರಿವು

ವರ್ತೂರು ಕೆರೆಗೆ ದ್ರವ ತ್ಯಾಜ್ಯ- ವಿಶೇಷ ವರದಿ

ಆರ್‌. ಮಂಜುನಾಥ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆರೆಗಳಿಗೆ ಯಾವುದೇ ರೀತಿಯ ತ್ಯಾಜ್ಯ, ಮಾಲಿನ್ಯ ಸೇರದಂತೆ ನಿಗಾವಹಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಸ್ಪಷ್ಟಸೂಚನೆ ಇದ್ದರೂ, ವರ್ತೂರು ಕೆರೆಗೆ ನಾಲ್ಕಾರು ತಿಂಗಳಿಂದ ನಿತ್ಯವೂ ದ್ರವ ತ್ಯಾಜ್ಯ ಹರಿಯುತ್ತಲೇ ಇದೆ. ಮತ್ತೊಂದೆಡೆ ಒಳಚರಂಡಿ ನೇರವಾಗಿ ದೊಡ್ಡನೆಕ್ಕುಂದಿ ಕೆರೆಗೆ ಹರಿಯುತ್ತಿದ್ದು, ಮಾಲಿನ್ಯದ ತಾಣವಾಗಿವೆ.

ವರ್ತೂರು ಸುತ್ತಮುತ್ತ ತ್ಯಾಜ್ಯ ಸಂಗ್ರಹಿಸುವ ಗುತ್ತಿಗೆದಾರರು, ತ್ಯಾಜ್ಯ ವಿಂಗಡಣೆ ಕಾರ್ಯವನ್ನು ವರ್ತೂರು ಕೆರೆಯ ರಸ್ತೆ ಮೇಲೆಯೇ ಮಾಡುತ್ತಿದ್ದಾರೆ. ಆಟೊ, ಲಾರಿ, ಕಾಂಪ್ಯಾಕ್ಟರ್‌ ಸೇರಿದಂತೆ ನಿತ್ಯವೂ ಹತ್ತಾರು ವಾಹನಗಳು ಇಲ್ಲಿ ನಿಂತಿರುತ್ತವೆ.

ಕಾಂಪ್ಯಾಕ್ಟರ್‌ಗಳಿಂದ ಸೋರುವ ದ್ರವ ತ್ಯಾಜ್ಯ ಕೆರೆಗೆ ಪ್ರತಿದಿನವೂ ಹರಿಯುತ್ತಿದೆ. ಈ ಬಗ್ಗೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಎಂಜಿನಿಯರ್‌ ಹಾಗೂ ಆರೋಗ್ಯ ಪರಿವೀಕ್ಷಕರಿಗೆ ಮಾಹಿತಿ, ದೂರು ನೀಡಿದರೂ  ಕ್ರಮ ಕೈಗೊಂಡಿಲ್ಲ.

‘ವರ್ತೂರು ಕೆರೆ ಮೇಲಿನ ರಸ್ತೆಯಲ್ಲಿ ಕೆಲವು ದಿನ ಮಾತ್ರ ತ್ಯಾಜ್ಯ ವಿಂಗಡಣೆ ಮಾಡುತ್ತೇವೆ ಎಂದು ತ್ಯಾಜ್ಯ ನಿರ್ವಹಣೆ ಗುತ್ತಿಗೆದಾರರು ಹೇಳಿದ್ದರು. ಆದರೆ ಅದು ಎಂಟು ತಿಂಗಳಿನಿಂದ ನಿಂತೇ ಇಲ್ಲ. ಪ್ರತಿ ದಿನವೂ ಕೇಳಿದರೂ ಸಬೂಬು ಹೇಳುತ್ತಿದ್ದಾರೆ. ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರಾದ ಜಗದೀಶ ರೆಡ್ಡಿ ದೂರಿದರು.

‘ಗುತ್ತಿಗೆ ಪಡೆಯುವಾಗ ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿಗೆ ತಮ್ಮದೇ ಸ್ಥಳ ಇದೆ ಎಂದು ಗುತ್ತಿಗೆದಾರರು ತೋರಿಸಿರುತ್ತಾರೆ. ಆದರೆ ವಾಸ್ತವದಲ್ಲಿ ಅದು ಇರುವುದಿಲ್ಲ. ಹೀಗಾಗಿ ರಸ್ತೆಯ ಮೇಲೆಯೇ ತ್ಯಾಜ್ಯ ವಿಂಗಡಣೆ ಆಗುತ್ತಿದೆ. ಹಸಿ ಕಸ ಸೇರಿದಂತೆ ದ್ರವ ತ್ಯಾಜ್ಯ ಸಾಕಷ್ಟು ಪ್ರಮಾಣದಲ್ಲಿ ವರ್ತೂರು ಕೆರೆಗೆ ನಿತ್ಯವೂ ಹರಿಯುತ್ತಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಯಾವುದೇ ರೀತಿಯ ತ್ಯಾಜ್ಯವನ್ನು ಕೆರೆಗೆ ಬಿಡುವಂತಿಲ್ಲ ಎಂದು ಹೇಳಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಅಧಿಕಾರಿಗಳು ಆ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

ಜಲಮಂಡಳಿಯಿಂದ ಕಲ್ಮಶ: ‘ಮಹದೇವಪುರ ವಲಯ ವ್ಯಾಪ್ತಿಯಲ್ಲಿರುವ ದೊಡ್ಡನೆಕ್ಕುಂದಿ ಕೆರೆಗೆ ನೇರವಾಗಿ ಒಳಚರಂಡಿ ನೀರು, ಕಲ್ಮಶ ಹರಿಯುತ್ತಿದೆ. ಇದನ್ನು ತಡೆಯಲು ಬಿಡಬ್ಲ್ಯುಎಸ್ಎಸ್‌ಬಿ ಹಾಗೂ ಬಿಬಿಎಂಪಿಗೆ ಸಾಕಷ್ಟು ಬಾರಿ ಮನವಿ ನೀಡಿದ್ದರೂ ಅವರು ಕ್ರಮ ಕೈಗೊಂಡಿಲ್ಲ. ಕೆರೆ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಾರೆ’ ಎಂದು ಸ್ಥಳೀಯರಾದ ಸುಷ್ಮಾ ದೂರಿದರು.

‘ಎಂಜಿನಿಯರ್‌ಗಳ ನಿರ್ಲಕ್ಷ್ಯ’

ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮಮತಾ, ಕಿರಿಯ ಆರೋಗ್ಯ ನಿರೀಕ್ಷಕ ಬಾಲಾಜಿ ಅವರು
ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದರು. ‘ನಾಳೆಯಿಂದ ಗುತ್ತಿಗೆದಾರರು ಇಲ್ಲಿ ತ್ಯಾಜ್ಯ ವಿಂಗಡಿಸಲ್ಲ’ ಎಂದು ಬಾಲಾಜಿ ಹೇಳಿದರು.

‘ವರ್ತೂರು ಕೆರೆಗೆ ದ್ರವ ತ್ಯಾಜ್ಯ ಹರಿಯುತ್ತಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಎಂಜಿನಿಯರ್‌ಗಳು ಸೇರಿದಂತೆ ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಪರಶುರಾಮ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.