ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸ್ಕುಲರ್‌ ವಿಭಾಗ: ಡಾ.ಶರಣ ಪ್ರಕಾಶ ಪಾಟೀಲ

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಮಾಹಿತಿ
Published 4 ಆಗಸ್ಟ್ 2024, 16:38 IST
Last Updated 4 ಆಗಸ್ಟ್ 2024, 16:38 IST
ಅಕ್ಷರ ಗಾತ್ರ

ಬೆಂಗಳೂರು: ‘ವ್ಯಾಸ್ಕುಲರ್‌ (ರಕ್ತ ನಾಳೀಯ) ಸಮಸ್ಯೆಗಳನ್ನು ಪತ್ತೆ ಹಚ್ಚಲು ಹಾಗೂ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡಲು ರಾಜ್ಯದ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸ್ಕುಲರ್‌ ವಿಭಾಗವನ್ನು ಶೀಘ್ರದಲ್ಲಿಯೇ ಪ್ರಾರಂಭ ಮಾಡಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ತಿಳಿಸಿದರು.

ರಾಷ್ಟ್ರೀಯ ರಕ್ತ ನಾಳೀಯ ದಿನದ ಪ್ರಯುಕ್ತ ವ್ಯಾಸ್ಕುಲರ್‌ ಸೊಸೈಟಿ ಆಫ್‌ ಇಂಡಿಯಾ ಹಾಗೂ ವ್ಯಾಸ್ಕುಲರ್‌ ಸರ್ಜನ್ಸ್ ಅಸೋಸಿಯೇಷನ್ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ವಾಕಥಾನ್‌ಗೆ ಚಾಲನೆ ನೀಡಿ, ಮಾತನಾಡಿದರು.

‘ಈಗಾಗಲೇ ಬೆಂಗಳೂರು ಹಾಗೂ ಮೈಸೂರಿನಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸ್ಕುಲರ್‌ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಕಲಬುರಗಿ, ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ಈ ವಿಭಾಗ ಆರಂಭವಾಗಲಿದೆ. ಇಲ್ಲಿನ ವಿಕ್ಟೋರಿಯಾ ಹಾಗೂ ಸಂಜಯ್‌ ಗಾಂಧಿ ಆಸ್ಪತ್ರೆಯಲ್ಲಿಯೂ ಈ ವಿಭಾಗ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ’ ಎಂದು ಹೇಳಿದರು.

ರಕ್ತ ನಾಳೀಯ ಶಸ್ತ್ರಚಿಕಿತ್ಸಕ ಡಾ.ಕೆ.ಆರ್. ಸುರೇಶ್‌ ಮಾತನಾಡಿ, ‘ಹೃದಯಾಘಾತಕ್ಕೆ ಒಳಗಾದವರಿಗೆ ನಿಗದಿತ ಅವಧಿಯೊಳಗೆ ಚಿಕಿತ್ಸೆ ಒದಗಿಸಬೇಕು. ಇಲ್ಲವಾದಲ್ಲಿ ಜೀವಕ್ಕೆ ಹಾನಿಯಾಗಲಿದೆ. ಹೃದಯ ಕಾಯಿಲೆಗಳ ಬಗ್ಗೆ ಜನರು ಎಚ್ಚರದಿಂದ ಇರಬೇಕು. ಧೂಮಪಾನ, ಮಾದಕ ವಸ್ತುಗಳ ಸೇವನೆಯಿಂದಾಗಿ ಕಿರಿಯ ವಯಸ್ಸಿನಲ್ಲಿಯೇ ಹೃದಯಾಘಾತ ಸಂಭವಿಸುತ್ತಿದೆ. ಆದ್ದರಿಂದ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವ್ಯಾಸ್ಕುಲರ್‌ ಸರ್ಜನ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ವೆಂಕಟೇಶ್‌ ರೆಡ್ಡಿ ಮಾತನಾಡಿ, ‘ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ರಕ್ತ ನಾಳೀಯ ಸಮಸ್ಯೆ ಬಗ್ಗೆ ನಿರಂತರ ಅರಿವು ಮೂಡಿಸಲಾಗುತ್ತಿದೆ’ ಎಂದು ಹೇಳಿದರು.  

ಕಂಠೀರವ ಕ್ರೀಡಾಂಗಣದಿಂದ ಆರಂಭವಾದ ವಾಕಥಾನ್‌, ಕಸ್ತೂರಬಾ ರಸ್ತೆ, ವಿಧಾನಸೌಧ, ನೃಪತುಂಗ ರಸ್ತೆ ಮೂಲಕ ಸಾಗಿ ಬಂದು ಕಂಠೀರವ ಕ್ರೀಡಾಂಗಣದಲ್ಲಿ ಅಂತ್ಯಗೊಂಡಿತು. ರಾಜೀವ್ ಗಾಂಧಿ ಆರೋಗ್ಯ  ವಿಜ್ಞಾನಗಳ  ವಿಶ್ವವಿದ್ಯಾಲಯದ ಕುಲಪತಿ ರಮೇಶ್‌ ಎಂ.ಕೆ., ಜಯದೇವ ಹೃದ್ರೋಗ ಸಂಸ್ಥೆಯ ವ್ಯಾಸ್ಕುಲರ್‌ ಸರ್ಜನ್ ಡಾ.ಮುರಳಿ ಕೃಷ್ಣ, ವಿಜ್ಞಾನಿ ವಿ.ಕೆ.ಆತ್ರೆ, ಚಿತ್ರನಟಿ ಸಂಜನಾ ಗರ್ಲಾನಿ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT