ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿಗೆ ಕೊರೊನಾ ಸೋಂಕು: ವಿಕ್ಟೋರಿಯಾ ಪ್ರಯೋಗಾಲಯ ಸ್ಥಗಿತ

Last Updated 23 ಜೂನ್ 2020, 20:23 IST
ಅಕ್ಷರ ಗಾತ್ರ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ಪ್ರಯೋಗಾಲಯದ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ ಪರಿಣಾಮ ಅಲ್ಲಿ ಕೋವಿಡ್ ಪರೀಕ್ಷೆಯನ್ನು ಸ್ಥಗಿತ ಮಾಡಲಾಗಿದೆ. ಇದರಿಂದಾಗಿ ಕೋವಿಡ್ ಪರೀಕ್ಷೆಗೆ ಹಿನ್ನಡೆ ಉಂಟಾಗಿದೆ.

ಇಲ್ಲಿನ ಪ್ರಯೋಗಾಲಯವು ನಿತ್ಯ ಒಂದು ಸಾವಿರ ಮಂದಿಯ ಗಂಟಲ ದ್ರವದ ಮಾದರಿಗಳನ್ನು ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿತ್ತು. ಈಗ ಅಲ್ಲಿ ಮಾದರಿಗಳನ್ನು ಸಂಗ್ರಹಿಸಿ, ನಿಮ್ಹಾನ್ಸ್,ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ) ಬೆಂಗಳೂರು ಶಾಖೆ ಸೇರಿದಂತೆ ವಿವಿಧ ಪ್ರಯೋಗಾಲಯಗಳಿಗೆ ರವಾನಿಸಲಾಗುತ್ತಿದೆ.

‘ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಶನಿವಾರದಿಂದ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಹಾಗಾಗಿ ಪ್ರಯೋಗಾಲಯವನ್ನು ಬಂದ್ ಮಾಡಲಾಗಿದೆ. ಬುಧವಾರದಿಂದ ಪ್ರಯೋಗಾಲಯ ಮತ್ತೆ ಕಾರ್ಯಾರಂಭ ಮಾಡಲಿದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

ಊಟ ನೀಡುವಂತೆ ರೋಗಿಗಳ ಆಗ್ರಹ

ಸಮಯಕ್ಕೆ ಸರಿಯಾಗಿ ಊಟ–ತಿಂಡಿಯನ್ನು ನೀಡುತ್ತಿಲ್ಲ. ಯಾರು ಕೂಡ ನಮ್ಮ ಗೋಳನ್ನು ಕೇಳುತ್ತಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ 10.30ಕ್ಕೆ ಊಟ ನೀಡುತ್ತಾರೆ. ರೊಟ್ಟಿಗಳು ಗಟ್ಟಿಯಾಗಿರುತ್ತದೆ. ತಿನ್ನಲು ಸಾಧ್ಯವಿಲ್ಲ. ಮಧುಮೇಹ ಸೇರಿದಂತೆ ವಿವಿಧ ಅನಾರೋಗ್ಯದಿಂದ ಬಳಲುತ್ತಿದ್ದವರೂ ಕೂಡ ಇದ್ದೇವೆ. ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಯಾರು ಇಲ್ಲ ಎಂದು ಅಳಲು ತೋಡಿಕೊಂಡು, ಪ್ರತಿಭಟಿಸಿದ್ದಾರೆ.

‘5–6 ದಿನಗಳಿಂದ ಸರಿಯಾಗಿ ಊಟ ಒದಗಿಸುತ್ತಿಲ್ಲ. ಮಧ್ಯಾಹ್ನ 1 ಗಂಟೆಗೆ ನೀಡಬೇಕಾದ ಊಟವನ್ನು 4 ಗಂಟೆಗೆ ನೀಡುತ್ತಾರೆ. ಸರಿಯಾಗಿ ಬೆಂದಿರದ ಅನ್ನವನ್ನು ನೀಡಲಾಗುತ್ತಿದೆ. ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಕೂಡ ಇಲ್ಲ. ತೀವ್ರ ನಿಗಾ ಘಟಕದಲ್ಲಿನ ರೋಗಿಗಳಿಗೂ ಸಮಯಕ್ಕೆ ಸರಿಯಾಗಿ ಊಟ–ತಿಂಡಿ ಸಿಗುತ್ತಿಲ್ಲ. ನಮ್ಮ ಸಮಸ್ಯೆಗೆ ಯಾರೂ ಕೂಡ ಸ್ಪಂದಿಸುತ್ತಿಲ್ಲ’ ಎಂದು ರೋಗಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ಒದಗಿಸಿ

‘ಕೋವಿಡ್ ಆಸ್ಪತ್ರೆಗಳಿಗೆ ದಾಖಲಾದ ರೋಗಿಗಳಿಗೆರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ನೀಡುವ ಜತೆಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಸ್ವಚ್ಛತೆ ವಿಷಯದಲ್ಲೂ ಎಚ್ಚರಿಕೆ ವಹಿಸಬೇಕು. ಆಹಾರದ ವಿಷಯದಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನು ಸರಬರಾಜುದಾರರಿಗೆ ನೀಡಬೇಕು’ ಎಂದು ಡಾ.ಕೆ. ಸುಧಾಕರ್ ಅವರು ವಿವಿಧ ಆಸ್ಪತ್ರೆಗಳ ನಿರ್ದೇಶಕರಿಗೆ ಸೂಚಿಸಿದರು.

‘ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಹಾಸಿಗೆಗಳನ್ನು ಮೀಸಲು ಇರಿಸಲಾಗಿದೆ. ಅದನ್ನು ಸರಿಯಾಗಿ ಖಚಿತಪಡಿಸಿಕೊಳ್ಳಬೇಕು.ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ನೀಡುವ ಸೌಲಭ್ಯಗಳಲ್ಲೂ ಲೋಪಗಳಾಗದಂತೆ ನೋಡಿಕೊಳ್ಳಬೇಕು. ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ಕೋವಿಡ್‌ ಆಸ್ಪತ್ರೆಗಳಿಂದ ಆಂಬ್ಯುಲೆನ್ಸ್‌ ಅಥವಾ ಸಕಾ೯ರಿ ಬಸ್‌ಗಳ ಮೂಲಕ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಸ್ಥಳಾಂತರಿಸಬೇಕು’ ಎಂದು ಸಲಹೆ ನೀಡಿದರು.

‘ಚಿಕಿತ್ಸೆ ನೀಡಲು ತಜ್ಞ ಮತ್ತು ಹಿರಿಯ ವೈದ್ಯರು ಬರುತ್ತಿಲ್ಲ ಎಂಬ ದೂರುಗಳಿವೆ. ಕತ೯ವ್ಯಕ್ಕೆ ನಿಯೋಜನೆಗೊಂಡಿರುವ ತಜ್ಞರು, ವೈದ್ಯರು ಮತ್ತು ಪಿಜಿ ವಿದ್ಯಾಥಿ೯ಗಳ ಪಟ್ಟಿಯನ್ನು ಆಯಾ ವಾರ್ಡ್‌, ಐಸಿಯು ಮುಂದೆ ಪ್ರಕಟಣಾ ಫಲಕದಲ್ಲಿ ಹಾಕಬೇಕು. ಒಳಗೆ ಮತ್ತು ಹೊರಗೆ ಹೋಗುವ ಮುನ್ನ ಕಡ್ಡಾಯವಾಗಿ ಸಮಯ ನಮೂದಿಸಿ ಸಹಿ ಮಾಡಲೇಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT