ಮಂಗಳವಾರ, ಸೆಪ್ಟೆಂಬರ್ 29, 2020
21 °C

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ; ಪೊಲೀಸರಿಂದ ಗಾಳಿಯಲ್ಲಿ ಗುಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಕಾವಲ್ ಭೈರಸಂದ್ರ ಮನೆಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಇಡೀ ಮನೆ ಬೆಂಕಿಯಿಂದ ಹೊತ್ತಿ ಉರಿಯುತ್ತಿದೆ.

ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಠಾಣೆ ಎದುರು ಪೊಲೀಸ್ ಜೀಪಿಗೆ ಬೆಂಕಿ ಹಚ್ಚಿದ್ದ ಬಳಿಕ ಕೆಲವರು ಶಾಸಕರ ಮನೆಗೂ ಹೋಗಿ ಬೆಂಕಿ ಹಚ್ಚಿದ್ದಾರೆ. ಗಾಬರಿಗೊಂಡ ಶಾಸಕರ ಕುಟುಂಬದವರು ಹೊರಗೆ ಓಡಿ ಬಂದು ರಕ್ಷಣೆಗಾಗು ಕೂಗಾಡುತ್ತಿದ್ದಾರೆ. ಅವರನ್ನು ರಕ್ಷಿಸಲು ಸ್ಥಳಕ್ಕೆ ಪೊಲೀಸರು ಹೋಗಲು ಸಹ ಕಿಡಿಗೇಡಿಗಳು ಬಿಡುತ್ತಿಲ್ಲ. ಕಟ್ಟಡಗಳ ಮೇಲೆ ನಿಂತು ಪೊಲೀಸರ ಮೇಲೆಯೇ ಕಲ್ಲು ಎಸೆಯುತ್ತಿದ್ದಾರೆ.

ಡಿಸಿಪಿ ಕಾರು ಜಖಂ; ಚಾಲಕನ ಮೇಲೆ ಹಲ್ಲೆ
ಘಟನಾ ಸ್ಥಳಕ್ಕೆ ಬಂದಿದ್ದ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಅವರ ಕಾರನ್ನೂ ಕಿಡಿಗೇಡಿಗಳು ಜಖಂಗೊಳಿಸಿದ್ದಾರೆ. ಪ್ರಶ್ನಿಸಲು ಹೋದ ಚಾಲಕನ ಮೇಲೂ ಹಲ್ಲೆ ಮಾಡಿದ್ದಾರೆ.

ಗಲಾಟೆ ನಿಯಂತ್ರಿಸುವುದಕ್ಕಾಗಿ ಡಿಸಿಪಿ ಭೀಮಾಶಂಕರ್ ಅವರು ಸ್ಥಳಕ್ಕೆ ಬಂದಿದ್ದರು. ಠಾಣೆ ಎದುರೇ ಅವರ ಕಾರು ತಡೆದಿದ್ದ ಕಿಡಿಗೇಡಿಗಳು, ಏಕಾಏಕಿ ಕಲ್ಲು ತೂರಾಟ ನಡೆಸಿದರು. ಪೊಲೀಸರು, ಡಿಸಿಪಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಅಷ್ಟರಲ್ಲೇ ಕಿಡಿಗೇಡಿಗಳು ಇಡೀ ವಾಹನ ಜಖಂಗೊಳಿಸಿದ್ದಾರೆ.

ಇದನ್ನೂ ಓದಿ... ಪುಂಡಾಟಿಕೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ: ಬೊಮ್ಮಾಯಿ

ಉದ್ರಿಕ್ತರನ್ನು ನಿಯಂತ್ರಿಸಲು ಗಾಳಿಯಲ್ಲಿ ಗುಂಡು
ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಉದ್ರಿಕ್ತ ಜನ ಠಾಣೆ ಹಾಗೂ ಸಾರ್ವಜನಿಕರ ಮನೆಗಳ ಮೇಲೆಯೇ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಪೊಲೀಸ್‌ ಜೀಪು, ಕೆಎಸ್‌ಆರ್‌ಪಿ ವಾಹನ ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳಿಗೆ ಉದ್ರಿಕ್ತರು ಬೆಂಕಿ ಹಚ್ಚುತ್ತಿದ್ದಾರೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ.

ಗಲಾಟೆ ಹೆಚ್ಚಾಗುತ್ತಿದ್ದಂತೆ ಮತ್ತಷ್ಟು ಜನರು ಸ್ಥಳಕ್ಕೆ ಬರುತ್ತಿದ್ದಾರೆ. ಅವರನ್ನು ಸ್ಥಳದಿಂದ ವಾಪಸು ಕಳುಹಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ರಾತ್ರಿ 12ರ ಸುಮಾರಿಗೆ ಪೊಲೀಸರು, ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಪರಿಸ್ಥಿತಿ ನಿಯಂತ್ರಣಗೆ ಬರುತ್ತಿಲ್ಲ. ಪೊಲೀಸರ ಮೇಲೂ ಉದ್ರಿಕ್ತರು ಕಲ್ಲು ತೂರಾಟ ನಡೆಸುತ್ತಿದ್ದಾರೆ.


ಉದ್ರಿಕ್ತರ ಗುಂಪು

ರಕ್ಷಣೆ ಕೋರುತ್ತಿರುವ ನಿವಾಸಿಗಳು
ಕೆ.ಜಿ.ಹಳ್ಳಿ ಠಾಣೆಯೊಂದರ ಮನೆ ಹಾಗೂ ಬಾರ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಮನೆಯ ಮೊದಲ ಮಹಡಿ ಸುಟ್ಟಿದ್ದು, ಮನೆಯ ನಿವಾಸಿಗಳು ಎರಡನೇ ಮಹಡಿಗೆ ಬಂದು ರಕ್ಷಣೆಗಾಗಿ ಕೂಗುತ್ತಿದ್ದಾರೆ.

ಪೊಲೀಸರು ರಕ್ಷಣೆಗೆ ಬರುತ್ತಿದ್ದಂತೆ ಕಿಡಿಗೇಡಿಗಳು, ಸ್ಥಳದಿಂದ ಓಡಿ ಹೋಗುತ್ತಿದ್ದಾರೆ. ಪುನಃ ಬೇರೆ ಮನೆಗಳಿಗೂ ಬೆಂಕಿ ಹಚ್ಚಲು ಯತ್ನಿಸುತ್ತಿದ್ದಾರೆ. ವಾಹನಗಳಿಗೆ ಬೆಂಕಿ ಹಚ್ಚಿ ಚಪ್ಪಾಳೆ ತಟ್ಟುತ್ತಿದ್ದಾರೆ.

ಅವಹೇಳನ ಪೋಸ್ಟ್ ಪ್ರಕಟಿಸಿದ್ದ ಆರೋಪಿ ವಶಕ್ಕೆ
ಬೆಂಗಳೂರು:
ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದಾನೆ ಎನ್ನಲಾದ ಆರೋಪಿ ನವೀನ್‌ನನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಗೊತ್ತಾಗಿದೆ. ಪೋಸ್ಟ್ ಸಂಬಂಧ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ನವೀನ್‌ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು