ಬುಧವಾರ, ಅಕ್ಟೋಬರ್ 20, 2021
29 °C
ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಹಾಸಿಗೆಗಳು ಭರ್ತಿ l ವಾತಾವರಣದ ಬದಲಾವಣೆಯಿಂದ ಅನಾರೋಗ್ಯ

ಮಕ್ಕಳನ್ನು ಕಾಡಲಾರಂಭಿಸಿದ ವೈರಾಣು ಜ್ವರ: ಕೆಸಿ ಜನರಲ್ ಆಸ್ಪತ್ರೆ ಹಾಸಿಗೆ ಭರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಾತಾವರಣದಲ್ಲಿ ಉಂಟಾದ ಬದಲಾವಣೆಯಿಂದ ನಗರದ ಮಕ್ಕಳನ್ನು ವೈರಾಣು ಜ್ವರ ಕಾಡಲಾರಂಭಿಸಿದೆ. 

ಬಿಸಿಲು, ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಿಂದಾಗಿ ಕಳೆದೊಂದು ವಾರದಿಂದ ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಕೆ.ಸಿ. ಜನರಲ್ ಆಸ್ಪತ್ರೆಯ ಮಕ್ಕಳ ವಾರ್ಡ್‌ನ 30 ಹಾಸಿಗೆಗಳಲ್ಲಿ 26 ಹಾಸಿಗೆಗಳು ಭರ್ತಿಯಾಗಿವೆ. ಆರು ಮಕ್ಕಳಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಮಕ್ಕಳಲ್ಲಿ ಉಸಿರಾಟ ಸಂಬಂಧಿ ಸೋಂಕು ಕಾಣಿಸಿಕೊಂಡಿದ್ದು, ವೈದ್ಯಕೀಯ ಆಮ್ಲಜನಕದ ಸಂಪರ್ಕ ಒದಗಿಸಲಾಗಿದೆ. ಕೆಲ ಮಕ್ಕಳು ಡೆಂಗಿ ಜ್ವರವನ್ನು ಎದುರಿಸುತ್ತಿದ್ದಾರೆ. 

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಬಿ.ಆರ್. ವೆಂಕಟೇಶಯ್ಯ, ‘ವಿವಿಧ ಜ್ವರಗಳ ಚಿಕಿತ್ಸೆಗೆ ಆಸ್ಪತ್ರೆಗೆ ಬರುವ ಮಕ್ಕಳ ಸಂಖ್ಯೆ ವಾರದಿಂದ ಹೆಚ್ಚುತ್ತಿದೆ. ವಾತಾವರಣದಲ್ಲಿನ ಬದಲಾವಣೆಯೇ ಇದಕ್ಕೆ ಮುಖ್ಯ ಕಾರಣ. ಎಲ್ಲ ಮಕ್ಕಳಿಗೂ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು, ಕೊರೊನಾ ಸೋಂಕಿತರಾಗಿಲ್ಲ ಎನ್ನುವುದು ದೃಢಪಟ್ಟಿದೆ’ ಎಂದರು. 

‘ನ್ಯುಮೋನಿಯಾ, ಡೆಂಗಿ ಸೇರಿದಂತೆ ವಿವಿಧ ವೈರಾಣು ಜ್ವರಗಳು ದಾಖಲಾದ ಮಕ್ಕಳಲ್ಲಿ ಕಾಣಿಸಿಕೊಂಡಿವೆ’ ಎಂದು ಹೇಳಿದರು. 

ಮಕ್ಕಳ ತಜ್ಞ ಡಾ. ರಘುನಂದನ್ ಬಿ.ಜಿ, ‘ಪ್ರತಿ ವರ್ಷ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ ವೈರಾಣು ಜ್ವರಗಳು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಈ ಅವಧಿಯಲ್ಲಿ ಬಹುತೇಕ ಹಾಸಿಗೆಗಳು ಭರ್ತಿಯಾಗುತ್ತವೆ. ಈ ಬಾರಿ ಜ್ವರದ ತೀವ್ರತೆ ಹೆಚ್ಚಾಗಿ ಕಾಡಿದ್ದು, ಕೆಲ ಮಕ್ಕಳಿಗೆ ಆಮ್ಲಜನಕದ ಅಗತ್ಯವಿದೆ’ ಎಂದು ವಿವರಿಸಿದರು. 

ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಒಂದು ತಿಂಗಳಿಂದ ರೋಗಿಗಳ ಸಂಖ್ಯೆ ಹೆಚ್ಚಿದೆ. ಕೋವಿಡೇತರ ಎಲ್ಲ 460 ಹಾಸಿಗೆಗಳೂ ಭರ್ತಿಯಾಗಿದ್ದು, ಅರ್ಧದಷ್ಟು ರೋಗಿ ಗಳು ಉಸಿರಾಟ ಸಂಬಂಧಿ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಜ್ವರದ ಲಕ್ಷಣಗಳು

l ತೀವ್ರ ಆಯಾಸ, ದಣಿವು

l ಮೈ ಕೈ ನೋವು

l ತಲೆನೋವು

l ನೆಗಡಿ, ಜ್ವರ

l ಕೆಮ್ಮು

l ಮೂಗು ಕಟ್ಟುವುದು

l ಕಣ್ಣುಗಳಲ್ಲಿ ಅಸ್ವಸ್ಥತೆ

l ಗಂಟಲು ಉರಿ

ವೈದ್ಯರು ಸೂಚಿಸಿದ ಮುನ್ನೆಚ್ಚರಿಕೆ ಕ್ರಮಗಳು

l ತಾಜಾ ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು

l ನೀರಿನ ಶುದ್ಧತೆ ಬಗ್ಗೆ ಗಮನಹರಿಸಬೇಕು

l ಕಾಯಿಸಿ ಆರಿಸಿದ ನೀರನ್ನೇ ಕುಡಿಯುವುದು ಉತ್ತಮ

l ಊಟ–ತಿಂಡಿಗೆ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ

l ತೆರೆದಿಟ್ಟ ತಿನಿಸು ಮತ್ತು ಕತ್ತರಿಸಿಟ್ಟಿರುವ ಹಣ್ಣುಗಳ ಸೇವನೆ ಅಪಾಯ

l ರಸ್ತೆ ಬದಿಯಲ್ಲಿನ ಕ್ಯಾಂಟೀನ್‌ಗಳಲ್ಲಿ ಆಹಾರ ಸೇವಿಸುವ ಮುನ್ನ ಅಲ್ಲಿನ ಸ್ವಚ್ಛತೆ ಪರಿಶೀಲಿಸಿಕೊಳ್ಳಿ

l ಮನೆಯ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು