ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಾಪತ್ತೆಯಾಗಿದ್ದ ಮಕ್ಕಳು, ಮೊಬೈಲ್ ಕರೆ ಸುಳಿವಿನಿಂದ ಪತ್ತೆ

Published 28 ಜುಲೈ 2023, 15:54 IST
Last Updated 28 ಜುಲೈ 2023, 15:54 IST
ಅಕ್ಷರ ಗಾತ್ರ

ಬೆಂಗಳೂರು: ಶಾಲೆಯಿಂದ ಮನೆಗೆ ಹೋಗುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮಕ್ಕಳನ್ನು ವಿ.ವಿ.ಪುರ ಠಾಣೆ ಪೊಲೀಸರು ಪತ್ತೆ ಮಾಡಿ, ಪೋಷಕರ ಸುಪರ್ದಿಗೆ ಒಪ್ಪಿಸಿದ್ದಾರೆ.

ಠಾಣೆ ವ್ಯಾಪ್ತಿಯ ಶಾಲೆಯೊಂದರ ಮಕ್ಕಳು ನಾಪತ್ತೆಯಾದ ಬಗ್ಗೆ ದೂರು ಬರುತ್ತಿದ್ದಂತೆ ತ್ವರಿತ ಕಾರ್ಯಾಚರಣೆ ನಡೆಸಿದ್ದ 20 ಪೊಲೀಸರ ತಂಡ, ಮೂರು ಗಂಟೆಗಳಲ್ಲಿ ಮಕ್ಕಳನ್ನು ಹುಡುಕಿ ಕೊಟ್ಟಿದ್ದಾರೆ.

‘ಇಬ್ಬರು ಮಕ್ಕಳು ಶಾಲೆಯಿಂದ ಮನೆಗೆ ಆಟೊದಲ್ಲಿ ಹೊರಟಿದ್ದರು. ಮಾರ್ಗ ಮಧ್ಯೆ ಆಟೊ ನಿಲ್ಲಿಸಿದ್ದ ಚಾಲಕ, ಅಂಗಡಿಯೊಂದಕ್ಕೆ ಹೋಗಿದ್ದರು. ಅವರು ವಾಪಸ್‌ ಬರುವಷ್ಟರಲ್ಲಿ ಇಬ್ಬರು ಮಕ್ಕಳು ಆಟೊದಿಂದ ಇಳಿದು ಸ್ಥಳದಿಂದ ಹೊರಟು ಹೋಗಿದ್ದರು. ಚಾಲಕ ಎಷ್ಟೇ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ. ಮಕ್ಕಳು ನಾಪತ್ತೆಯಾದ ಸುದ್ದಿ ತಿಳಿದು ಪೋಷಕರು ಗಾಬರಿಗೊಂಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸ್ಯಾಟ್‌ಲೈಟ್‌ ಬಸ್ ನಿಲ್ದಾಣ ಬಳಿ ನಡೆದುಕೊಂಡು ಹೋಗಿದ್ದ ಮಕ್ಕಳು, ರಸ್ತೆಯಲ್ಲಿ ಯುವತಿಯೊಬ್ಬರನ್ನು ಮಾತನಾಡಿಸಿದ್ದರು. ‘ನಮ್ಮ ಮನೆ ಎಲ್ಲಿದೆ ಎಂಬುದು ಗೊತ್ತಾಗುತ್ತಿಲ್ಲ. ಭಯವಾಗುತ್ತಿದೆ’ ಎಂದು ಯುವತಿ ಬಳಿ ಅಳಲು ತೋಡಿಕೊಂಡು ಕಣ್ಣೀರು ಹಾಕಿದ್ದರು.’

‘ರಸ್ತೆಯಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಬಳಿ ಸಹಾಯ ಕೋರಿದ್ದ ಯುವತಿ, ಮಕ್ಕಳ ತಂದೆಗೆ ಕರೆ ಮಾಡುವಂತೆ ಕೇಳಿದ್ದರು. ಅದೇ ವ್ಯಕ್ತಿ, ಮಕ್ಕಳ ತಂದೆಗೆ ಕರೆ ಮಾಡಿದ್ದರು. ‘ನಿಮ್ಮ ಮಕ್ಕಳು ಸ್ಯಾಟ್‌ಲೈಟ್ ಬಸ್‌ ನಿಲ್ದಾಣ ಬಳಿ ಇದ್ದಾರೆ. ಬನ್ನಿ.’ ಎಂದು ಹೇಳಿ ಕರೆ ಕಡಿತಗೊಳಿಸಿ ಸ್ಥಳದಿಂದ ಹೊರಟು ಹೋಗಿದ್ದರು. ಇದಾದ ನಂತರ ಕರೆ ಸ್ವೀಕರಿಸಿರಲಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮೊಬೈಲ್ ಕರೆ ಸುಳಿವು ಆಧರಿಸಿ ಸ್ಯಾಟ್‌ಲೈಟ್ ಬಸ್ ನಿಲ್ದಾಣ ಬಳಿ ಹೋದಾಗ ಮಕ್ಕಳು ಇರಲಿಲ್ಲ. ನಿಲ್ದಾಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ 20 ಸಿಬ್ಬಂದಿ ಹುಡುಕಾಟ ನಡೆಸಿದ್ದರು. ನಿಲ್ದಾಣದಿಂದ 1 ಕಿ.ಮೀ ದೂರದಲ್ಲಿದ್ದ ಸ್ಥಳದಲ್ಲಿ ಮಕ್ಕಳು ಪತ್ತೆಯಾದರು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT