ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಿಗೇಹಳ್ಳಿ ಬಂಡೆಯಲ್ಲಿ ತ್ಯಾಜ್ಯ ವಿಲೇವಾರಿ

ಒತ್ತುವರಿ ತೆರವುಗೊಳಿಸಿ ಸರ್ಕಾರಿ ಭೂಮಿ ಸಂರಕ್ಷಿಸಲು ಆಗ್ರಹ
Last Updated 7 ಏಪ್ರಿಲ್ 2021, 23:15 IST
ಅಕ್ಷರ ಗಾತ್ರ

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಸಂಪಿಗೇಹಳ್ಳಿ-ಚೊಕ್ಕನಹಳ್ಳಿ ಬಂಡೆಪ್ರದೇಶದ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದನ್ನು ತಡೆಗಟ್ಟುವುದೂ ಸೇರಿದಂತೆ ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸಿ, ಈ ಐತಿಹಾಸಿಕ ಸ್ಥಳ ಸಂರಕ್ಷಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಖಾಸಗಿ ವ್ಯಕ್ತಿಗಳು ತ್ಯಾಜ್ಯ ಮಣ್ಣನ್ನು ತಂದು ಅಕ್ರಮವಾಗಿ ಇಲ್ಲಿ ಸುರಿಯುವ ಮೂಲಕ ಭೂಮಿಯನ್ನು ಸಮತಟ್ಟು ಮಾಡಲು ಪ್ರಯತ್ನಿಸುತ್ತಿದ್ದು, ನಂತರ ಈ ಜಾಗವನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಅಲ್ಲದೆ ಬಿಬಿಎಂಪಿಯವರೂ ಈ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯ ನಿವಾಸಿಗಳು, ಇದೊಂದು ಐತಿಹಾಸಿಕ ಸ್ಥಳವಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಅಕ್ರಮ ಚಟುವಟಿಕೆಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದ್ದಾರೆ.

ಖಾಸಗಿಯವರು ಈ ಜಾಗವನ್ನು ಕಬಳಿಸುವ ಉದ್ದೇಶದಿಂದ ಇಲ್ಲಿ ಕಸಸುರಿಯುತ್ತಿರಬಹುದೆಂಬ ಸಂಶಯ
ವ್ಯಕ್ತವಾಗಿದೆ. ಕೆರೆ ಮತ್ತು ಬಂಡೆಪ್ರದೇಶದಸುತ್ತಮುತ್ತಲಿನ ಸರ್ಕಾರಿ ಜಾಗವು ಒತ್ತುವರಿಯಾಗಿ ಭೂಗಳ್ಳರ ಪಾಲಾಗುತ್ತಿದೆ ಎಂದು ದೂರಿದ ಸ್ಥಳೀಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ನಿವಾಸಿ ಶೈಲಜಾ, ’ಕೂಡಲೇ ಇದನ್ನು ತಡೆಗಟ್ಟುವುದರ ಜೊತೆಗೆ ಈ ಸ್ಥಳಕ್ಕೆ ವಾಹನಗಳು ಬರದಂತೆ ತಡೆಗೋಡೆ ನಿರ್ಮಿಸಬೇಕು. ಬಂಡೆಯ ಪಕ್ಕದಲ್ಲಿ 7 ಎಕರೆ ವಿಸ್ತೀರ್ಣದಲ್ಲಿರುವ ವೆಂಕಟೇಶಪುರ ಕೆರೆಯನ್ನು ಅಭಿವೃದ್ಧಿಪಡಿಸಿದರೆ ಈ ಸ್ಥಳದ ಸ್ವರೂಪವೇ ಬದಲಾಗಲಿದೆ‘ ಎಂದು ತಿಳಿಸಿದರು.

ಬಂಡೆಯ ಪಕ್ಕದಲ್ಲಿ 50 ಅಡಿಗಳಷ್ಟು ಆಳವಿರುವ ದೊಡ್ಡ ಹಳ್ಳವಿದ್ದು, ಇದರಲ್ಲಿ 20 ಅಡಿಗಳಷ್ಟು ಕೊಳಚೆನೀರು ಸಂಗ್ರಹವಾಗಿದೆ. ನೀರಿನ ಮೇಲೆ ಕಳೆ ಗಿಡಗಳು ಅವರಿಸಿಕೊಂಡಿರುವುದರಿಂದ ನೀರು ಸಂಗ್ರಹವಾಗಿರುವುದು ಗೋಚರಿಸದ ಪರಿಣಾಮ, ಜನರು ಹಾಗೂ ಪ್ರಾಣಿಗಳು ಈ ಹಳ್ಳಕ್ಕೆ ಬೀಳುವ ಸಂಭವ ಹೆಚ್ಚಾಗಿದ್ದು, ಈ ಸ್ಥಳವು ಅಪಾಯಕ್ಕೆ ಎಡೆಮಾಡಿಕೊಟ್ಟಿದೆ. ಆದ್ದರಿಂದ ಕೂಡಲೇ ತಡೆಗೋಡೆಯನ್ನು ನಿರ್ಮಿಸಬೇಕು ಎಂದು ಸ್ಥಳೀಯ ನಿವಾಸಿ ಶಿವಂ ಒತ್ತಾಯಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬಂಡೆಪ್ರದೇಶದ ಜಾಗದ ಸರ್ವೆ ನಡೆಸಿ, ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸಿ, ಗಡಿರೇಖೆಯನ್ನು ಗುರುತಿಸಬೇಕು. ನಂತರ ಆ ಭೂಮಿಯನ್ನು ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿರಿಸುವುದರ ಜೊತೆಗೆ ಈ ಐತಿಹಾಸಿಕ ’ಸಂಪಿಗೇಹಳ್ಳಿ ಸರ್ವೆ ಪಾಯಿಂಟ್‘ ಸ್ಥಳವನ್ನು ಅಭಿವೃದ್ಧಿಪಡಿಸಿ, ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

**
ಅನುದಾನ ವಾಪಸ್‌

ಕೆರೆಗಳು ಮತ್ತು ರಾಜಕಾಲುವೆಗಳ ಅಭಿವೃದ್ಧಿಗಾಗಿ ಜೆಡಿ(ಎಸ್) ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಬಿಡುಗಡೆಯಾಗಿದ್ದ ಅನುದಾನವನ್ನು ಬಿಜೆಪಿ ಸರ್ಕಾರ ಕಿತ್ತುಕೊಂಡ ನಂತರ ವೆಂಕಟೇಶಪುರ ಕೆರೆ ಸೇರಿದಂತೆ ಹಲವು ಕೆರೆಗಳು ಮತ್ತು ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ಹಣ ಬಿಡುಗಡೆಗಾಗಿ ಮುಖ್ಯಮಂತ್ರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಂಪಿಗೇಹಳ್ಳಿ ಬಂಡೆಪ್ರದೇಶದ ಸುತ್ತಮುತ್ತಲಿನ ಜಾಗ ಒತ್ತುವರಿಯಾಗಿದ್ದರೆ ತೆರವುಗೊಳಿಸಲು ಹಾಗೂ ಕಸ ಹಾಕುವುದನ್ನು ತಡೆಗಟ್ಟಲು ಅಧಿಕಾರಿಗಳಿಗೆ ಸೂಚಿಸಲಾಗುವುದು.
-ಕೃಷ್ಣಬೈರೇಗೌಡ, ಶಾಸಕ

**
ಒತ್ತುವರಿ ತೆರವು ಶೀಘ್ರ
ಶೀಘ್ರದಲ್ಲೇ ಸಂಪಿಗೇಹಳ್ಳಿ ಬಂಡೆಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಸರ್ವೆ ನಡೆಸಿ, ಒತ್ತುವರಿಯಾಗಿದ್ದರೆ ತೆರವುಗೊಳಿಸಿ, ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು. ಅಲ್ಲದೆ ಈ ಜಾಗವನ್ನು ಬಿಬಿಎಂಪಿಗೆ ಹಸ್ತಾಂತರಿಸುವ ಸಂಬಂಧ ಶಿಫಾರಸು ಮಾಡಲಾಗುವುದು.
-ಕೆ.ನರಸಿಂಹಮೂರ್ತಿ, ತಹಶೀಲ್ದಾರ್, ಯಲಹಂಕ ತಾಲ್ಲೂಕು

**
ಪ್ರವಾಸಿ ತಾಣವಾಗಿ ಅಭಿವೃದ್ಧಿಗೆ ಕ್ರಮ

ಬೆಂಗಳೂರು ಹೊರಹೊಲಯದ ಕೆಲವು ಸರ್ಕಾರಿ ಜಾಗಗಳನ್ನು ತಹಶೀಲ್ದಾರ್ ಅವರು ಇನ್ನೂ ಬಿಬಿಎಂಪಿಗೆ ಹಸ್ತಾಂತರಿಸಿಲ್ಲ. ಸಂಪಿಗೇಹಳ್ಳಿ ಬಂಡೆಯ ಸುತ್ತಮುತ್ತಲ ಸರ್ಕಾರಿ ಜಾಗ ಒತ್ತುವರಿಯಾಗಿದ್ದರೆ ತಹಶೀಲ್ದಾರ್‌ ಅವರು ನೋಟಿಸ್ ನೀಡಿ, ತೆರವುಗೊಳಿಸುವುದಾದರೆ ಸಂಪೂರ್ಣ ಸಹಕಾರ ನೀಡಲಾಗುವುದು. ಜಮೀನನ್ನು ಬಿಬಿಎಂಪಿಗೆ ಹಸ್ತಾಂತರಿಸಿದರೆ ಬೇಲಿ ನಿರ್ಮಿಸಿ, ನಾಮಫಲಕ ಅಳವಡಿಸಲಾಗುವುದು. ನಂತರ ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಲಾಗುವುದು.
-ಡಾ.ಅಶೋಕ್, ಜಂಟಿ ಆಯುಕ್ತ, ಬಿಬಿಎಂಪಿ ಯಲಹಂಕ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT