ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮೃತವರ್ಷಿಣಿ’ಯ ಜಲಕ್ರಾಂತಿ: ಬತ್ತಿಹೋದ ಕೊಳವೆಬಾವಿಗಳಲ್ಲಿ ಉಕ್ಕಿದ ‘ಗಂಗೆ’

ಬತ್ತಿಹೋದ ಕೊಳವೆಬಾವಿಗಳಲ್ಲಿ ಉಕ್ಕಿದ ‘ಗಂಗೆ’
Last Updated 21 ಮಾರ್ಚ್ 2023, 22:45 IST
ಅಕ್ಷರ ಗಾತ್ರ

ಬೆಂಗಳೂರು: ಪಾಳು ಬಿದ್ದ ಕೆರೆ, ಕಲ್ಯಾಣಿ, ಹೊಂಡ, ಗೋಕಟ್ಟೆಗಳ ದುರಸ್ತಿ, ಕೊಳವೆ ಹಾಗೂ ತೆರೆದ ಬಾವಿ, ಮನೆಗಳ ಚಾವಣಿ ಹಾಗೂ ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಿಸುವ ಕಾರ್ಯದ ಮೂಲಕ ಜಲಪಡೆಯೊಂದು ‘ಜಲಕ್ರಾಂತಿ’ ನಡೆಸುತ್ತಿದೆ.

ಕಣ್ಮರೆ ಆಗುತ್ತಿರುವ ಕೆರೆಗಳು, ತೆರೆದ ಬಾವಿಗಳಲ್ಲಿ ಬತ್ತಿ ಹೋಗುತ್ತಿರುವ ಅಂತರ್ಜಲ, ಅರೆಜೀವ ತಲುಪಿರುವ ಕಲ್ಯಾಣಿಗಳಿಗೆ ಆನೇಕಲ್‌ನ ‘ಅಮೃತ
ವರ್ಷಿಣಿ’ ಸಂಸ್ಥೆ ಮುಖ್ಯಸ್ಥ ಮಹೇಶ್‌ ತಂಡವು ಜೀವ ತುಂಬುತ್ತಿದೆ. ಇದರಿಂದ ಬತ್ತಿಹೋಗಿದ್ದ ಗಂಗೆಯು ಉಕ್ಕುತ್ತಿದೆ.

ಮಹೇಶ್‌ ತಮ್ಮ ಅಜ್ಜ ಹಾಗೂ ತಂದೆ ವೆಂಕಟಸ್ವಾಮಿ ಅವರ ಕೆಲಸದಿಂದ ಪ್ರೇರಣೆಗೊಂಡು ರಾಜ್ಯದಲ್ಲಿ ಮಳೆ ನೀರು ಸಂಗ್ರಹಿಸುವ ಕೆಲಸ ನಡೆಸುತ್ತಿದ್ದಾರೆ. 2010ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಸ್ಥೆ ಅಡಿಯಲ್ಲಿ ಇದುವರೆಗೂ ಹತ್ತಾರು ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಕೊಳವೆಬಾವಿ, ಎರಡು ಸಾವಿರಕ್ಕೂ ಹೆಚ್ಚು ಮನೆ ಹಾಗೂ ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದಾರೆ.

‘ಗ್ರಾಮೀಣ ಪ್ರದೇಶಗಳಲ್ಲಿ ಹಿರಿಯರು ಸಾಂಪ್ರದಾಯಿಕ ಜಲಮೂಲಗಳನ್ನು ಸಂರಕ್ಷಿಸುತ್ತಿದ್ದರು. ಅದೇ ನೀರನ್ನು ನಿತ್ಯದ ಬಳಕೆಗೂ ಉಪಯೋಗಿಸುತ್ತಿದ್ದರು. ಈಗ ಕಾಲ ಬದಲಾಗಿದೆ. ಮಳೆಗಾಲದಲ್ಲಿ ವ್ಯರ್ಥವಾಗಿ ನೀರು ಹರಿದು ಹೋಗುತ್ತಿದೆ. ಅದನ್ನು ಸಂಗ್ರಹಿಸಿ, ಮರು ಬಳಕೆ ಮಾಡುವವರ ಸಂಖ್ಯೆ ಕಡಿಮೆ. ನೀರು ಸಂಗ್ರಹಿಸಿ, ಮರು ಬಳಕೆ ಮಾಡುವ ಕುರಿತು ಸಂಸ್ಥೆಯಿಂದ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಮಹೇಶ್ ಹೇಳುತ್ತಾರೆ.

‘ರಾಜ್ಯದ ಕಲಬುರಗಿ, ವಿಜಯಪುರ, ಬೀದರ್, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ತಮಿಳುನಾಡು, ಆಂಧ್ರಪ್ರದೇಶದ ವಿವಿಧೆಡೆ ಕೆಲಸ ಮಾಡಿದ್ದೇವೆ. ಯಾವ ಸ್ಥಳಕ್ಕೆ ಕರೆದರೂ ಸ್ಥಳಕ್ಕೆ ತೆರಳಿ ತಂಡ ಕೆಲಸ ಮಾಡಲಿದೆ. ಭವಿಷ್ಯಕ್ಕೂ ಅಂತರ್ಜಲ ಉಳಿಸಬೇಕೆಂಬ ಏಕೈಕ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ. ಮಳೆ ನೀರು ಸಂಗ್ರಹಿಸಲು ಸಾಕಷ್ಟು ಪರಿಕರ ಬಳಸಬೇಕಿದೆ. ಕಾರ್ಮಿಕರ ಸಂಬಳ ಹಾಗೂ ಸಾಮಗ್ರಿಗೆ ಸೀಮಿತವಾಗಿ ಹಣ ಪಡೆಯುತ್ತಿದ್ದೇವೆ’ ಎಂದು ಹೇಳಿದರು.

‘ದೇವಸ್ಥಾನ ಹಾಗೂ ಗ್ರಾಮದ ಕಲ್ಯಾಣಿಗಳನ್ನು ಉಚಿತವಾಗಿ ಪುನರುಜ್ಜೀವಗೊಳಿಸುತ್ತಿದ್ದೇವೆ. ಮನೆಯೊಂದರಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿಕೊಳ್ಳಲು ರಿಂಗ್‌, ಜೆಲ್ಲಿ, ಮೆಷ್‌ ಬೇಕಿದೆ. ಕೆಲಸ ಮಾಡಿದ ಸ್ಥಳದಲ್ಲಿ ಶೇ 100ರಷ್ಟು ಯಶಸ್ಸು ಸಿಕ್ಕಿದೆ. ಅಂತರ್ಜಲ ವೃದ್ಧಿಗೊಂಡಿದೆ. ಇದೇ ನೀರನ್ನು ಬಳಸಿಕೊಂಡು ರೈತರು ಬೆಳೆ ಬೆಳೆಯುತ್ತಿದ್ದಾರೆ. ಕೈತೋಟಗಳಿಗೂ ಉಪಯೋಗಿಸುತ್ತಿದ್ದಾರೆ’ ಎಂದು ಸಂತಸದಿಂದ ಹೇಳಿದರು.

ಭೂಮಿ ಒಳಗಿನ ನೀರು ಹೆಚ್ಚು ಬಳಕೆ

ನೀರು ನೈಸರ್ಗಿಕವಾಗಿ ದೊರೆಯುವ ಅಮೃತ. ಹಿರಿಯರು ಬಾವಿ, ಕುಂಟೆ ಹಾಗೂ ಕೆರೆಗಳನ್ನು ನಿರ್ಮಿಸಿ ಮಳೆ ನೀರು ಸಂಗ್ರಹಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಮಳೆ ನೀರು ವ್ಯರ್ಥವಾಗುತ್ತಿದೆ. ಕೊಳವೆಬಾವಿ ಮೂಲಕ ಭೂಮಿ ಒಳಗಿನ ನೀರನ್ನು ಹೆಚ್ಚು ಬಳಸುತ್ತಿದ್ದೇವೆ. ಅಂತರ್ಜಲ ಬಳಕೆ ಕಡಿಮೆ ಮಾಡಬೇಕು. ಪ್ರತಿ ಮನೆಯಲ್ಲೂ ಮಳೆ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಳ್ಳಬೇಕಿದೆ’ ಎಂದು ಮಹೇಶ್‌ ಹೇಳುತ್ತಾರೆ.

***

ಮಳೆ ನೀರು ಸಂಗ್ರಹಿಸುವ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಇಲ್ಲವಾಗಿದೆ. ಅರಿವು ಬಂದರೆ ಜನರೇ ಮಳೆಗಾಲದಲ್ಲಿ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಳ್ಳುತ್ತಾರೆ.

- ಮಹೇಶ್, ಅಮೃತವರ್ಷಿಣಿ ಸಂಸ್ಥೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT