ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪ್‌ನಲ್ಲಿ ಮುಳುಗಿ ಬಾಲಕ ಸಾವು

Last Updated 19 ಅಕ್ಟೋಬರ್ 2021, 16:45 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ನೀರಿನ ಸಂಪ್‌ನಲ್ಲಿ ಮುಳುಗಿ ಚಂದ್ರು (14) ಎಂಬಾತ ಮೃತಪಟ್ಟಿದ್ದು, ಅದೇ ಸಂಪಿನಲ್ಲಿ ಬಿದ್ದಿದ್ದ ಮತ್ತೊಬ್ಬ ಬಾಲಕನನ್ನು ರಕ್ಷಿಸಲಾಗಿದೆ.

ಕಾಡುಗೊಂಡನಹಳ್ಳಿ (ಕೆ.ಜೆ.ಹಳ್ಳಿ) ಠಾಣೆ ವ್ಯಾಪ್ತಿಯ ಎಚ್.ಬಿ.ಆರ್ ಬಡಾವಣೆಯಲ್ಲಿ ಮಂಗಳವಾರ ಈ ಅವಘಡ ಸಂಭವಿಸಿದೆ.

‘ಪೋಷಕರ ಜೊತೆ ವಾಸವಿದ್ದ ಚಂದ್ರು, ನಾಲ್ವರು ಸ್ನೇಹಿತರ ಜೊತೆ ಆಟವಾಡಲೆಂದು ನಿರ್ಮಾಣ ಹಂತದ ಕಟ್ಟಡದ ಬಳಿ ಹೋಗಿದ್ದ. ಕಟ್ಟಡದ ನೆಲಮಹಡಿಯಲ್ಲಿ ಬಾಲಕರೆಲ್ಲರೂ ಆಟವಾಡುತ್ತಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕಟ್ಟಡದ ತಳ ಮಹಡಿಯಲ್ಲಿ (ಸೆಲ್ಲಾರ್‌) ಎರಡು ಅಡಿಯಷ್ಟು ನೀರು ನಿಂತುಕೊಂಡಿತ್ತು. ಸೆಲ್ಲಾರ್‌ ಮಧ್ಯದಲ್ಲೇ ನೀರಿನ ಸಂಪ್‌ ಸಹ ಇತ್ತು. ಅದು ಬಾಲಕರಿಗೆ ಗೊತ್ತಿರಲಿಲ್ಲ.’

‘ಚಂದ್ರು ಸೇರಿ ಮೂವರು ಆಡಲೆಂದು ತಳಮಹಡಿಯಲ್ಲಿ ನಿಂತಿದ್ದ ನೀರಿಗೆ ಇಳಿದಿದ್ದರು. ಆಡುತ್ತಲೇ ಚಂದ್ರು ಸಂಪ್‌ನಲ್ಲಿ ಬಿದ್ದು ಮುಳುಗಿದ್ದ. ಆತ ಕಾಣಿಸದಿದ್ದಾಗ ಗಾಬರಿಗೊಂಡ ಒಬ್ಬಾತ, ನೀರಿನಿಂದ ಮೇಲೆ ಬಂದು ರಕ್ಷಣೆಗಾಗಿ ಕೂಗಾಡಿದ್ದ. ಅಷ್ಟರಲ್ಲಿ, ಇನ್ನೊಬ್ಬ ಸಹ ಸಂಪಿನೊಳಗೆ ಮುಳುಗುತ್ತಿದ್ದ’ ಎಂದರು.

‘ಮುಳುಗುತ್ತಿದ್ದ ಬಾಲಕನನ್ನು ಸ್ಥಳೀಯರ ನೆರವಿನಲ್ಲಿ ರಕ್ಷಿಸಲಾಗಿದೆ. ಆದರೆ, ಚಂದ್ರು ಸಂಪ್‌ನಲ್ಲಿ ಮುಳುಗಿ ಮೃತಪಟ್ಟ. ಆತನ ಮೃತದೇಹವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ಅಧಿಕಾರಿ ಹೇಳಿದರು.

ಕಟ್ಟಡ ಮಾಲೀಕರ ವಿಚಾರಣೆ: ‘ಸೆಲ್ಲಾರ್‌ ಮಧ್ಯದಲ್ಲಿದ್ದ ನೀರಿನ ಸಂಪ್‌ನ ಮುಚ್ಚಳ ಮುಚ್ಚಿರಲಿಲ್ಲ. ಇದುವೇ ಅವಘಡಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಕಟ್ಟಡ ಮಾಲೀಕರನ್ನು ವಿಚಾರಣೆ ನಡೆಸಲಾಗುವುದು’ ಎಂದೂ ಪೊಲೀಸ್ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT