ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಕಡೆ, ಎಲ್ಲರಿಗೂ ಸಲ್ಲುವ ‘ವೀಲ್‌ಚೇರ್‌’ ವಿನ್ಯಾಸ

ಚೆನ್ನೈನ ನಿಯೊಮೋಷನ್‌ ಕಂಪನಿಯಿಂದ ಅಭಿವೃದ್ಧಿ
Last Updated 30 ಸೆಪ್ಟೆಂಬರ್ 2020, 20:10 IST
ಅಕ್ಷರ ಗಾತ್ರ

ಬೆಂಗಳೂರು: ವೀಲ್‌ಚೇರ್‌ ಬಗೆಗಿರುವ ಕಲ್ಪನೆ ಮತ್ತು ವಿನ್ಯಾಸಗಳನ್ನು ಬದಲಿಸಿರುವ ಚೆನ್ನೈನ ನಿಯೊಮೋಷನ್‌ ಕಂಪನಿ, ಅಂಗವಿಕಲರಿಗೆ ದೊಡ್ಡ ವಿಶ್ವಾಸವನ್ನು, ಪರಿಹಾರವನ್ನು ಒದಗಿಸುವಂತಹ ವೀಲ್‌ಚೇರ್‌ಗಳನ್ನು ಅಭಿವೃದ್ಧಿ ಪಡಿಸಿದೆ.

‘ಶಾಲೆ, ಕಾಲೇಜು ಅಥವಾ ಕಚೇರಿಗಳಲ್ಲಿ ವೀಲ್‌ಚೇರ್‌ ಬಳಸುವ ಅಂಗವಿಕಲರು ಇಲ್ಲವೇನೋ ಎನ್ನುವಷ್ಟು ಕಡಿಮೆ ಇದ್ದಾರೆ. ಅಂದರೆ, ಎಲ್ಲ ಕಡೆಗೆ, ಎಲ್ಲ ರೀತಿಯಲ್ಲಿ ಬಳಸುವ ವೀಲ್‌ಚೇರ್‌ಗಳ ಸಂಖ್ಯೆ ತುಂಬಾ ಕಡಿಮೆ. ಈ ಕೊರತೆಯನ್ನು ನಮ್ಮ ವೀಲ್‌ಚೇರ್‌ಗಳು ತುಂಬುತ್ತವೆ’ ಎನ್ನುತ್ತಾರೆ ಕಂಪನಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸ್ವಸ್ತಿಕ್‌ದಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲರಿಗೂಒಂದೇ ಗಾತ್ರದ ಅಥವಾ ಒಂದೇ ವಿನ್ಯಾಸದ ವೀಲ್‌ಚೇರ್‌ಗಳನ್ನು ಮಾಡಲಾಗಿರುತ್ತದೆ. ಇವುಗಳನ್ನು ಬಳಸುವಲ್ಲಿಯೂ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಎಲ್ಲರೂ ಒಂದೇ ಗಾತ್ರದ ಪಾದರಕ್ಷೆ ಅಥವಾ ಶೂಗಳನ್ನು ಬಳಸುವಂತಾದರೆ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಂಡರೆ, ಒಂದೇ ಗಾತ್ರದ ವೀಲ್‌ಚೇರ್‌ಗಳಿಂದ ಅಂಗವಿಕಲರು ಎಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಇದನ್ನು ಪರಿಗಣಿಸಿ, ಹೊಸ ತಂತ್ರಜ್ಞಾನದೊಂದಿಗೆ ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆಯಾ ದೇಹದ ಸ್ವರೂಪಕ್ಕೆ ಅನುಗುಣವಾಗಿ ವೀಲ್‌ಚೇರ್‌ ಮಾರ್ಪಡಿಸಿಕೊಳ್ಳಬಹುದಾಗಿದೆ’ ಎಂದು ಅವರು ಹೇಳಿದರು.

‘ಅಂಗವಿಕಲರು ಸ್ವತಂತ್ರವಾಗಿ ಚಲಾಯಿಸುವಂತಹ, ಅವರೊಬ್ಬರೇ ಅದನ್ನು ನಿಭಾಯಿಸುವಂತಹ ಸಾಧನಗಳನ್ನು ವೀಲ್‌ಚೇರ್‌ಗಳಲ್ಲಿ ಅಳವಡಿಸಲಾಗಿದೆ. ಇವುಗಳ ಮೂಲಕ ಮೆಟ್ಟಿಲುಗಳನ್ನೂ ಹತ್ತಬಹುದು’ ಎಂದು ಕಂಪನಿಯ ಸಹಸ್ಥಾಪಕಿ, ಸಲಹೆಗಾರರಾದ ಪ್ರೊ. ಸುಜಾತಾ ಶ್ರೀನಿವಾಸ ಹೇಳುತ್ತಾರೆ.

‘ನಿಯೊ ಫ್ಲೈ’ ಹಾಗೂ ‘ನಿಯೋಬೋಲ್ಟ್‌‌’ ಎಂಬ ಎರಡು ಬಗೆಯ ವೀಲ್‌ಚೇರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮನೆಯ ಒಳಗೆ ಮತ್ತು ಹೊರಗೆ ಎರಡೂ ಕಡೆಗಳಲ್ಲಿಯೂ ಇವುಗಳನ್ನು ಬಳಸಬಹುದು. ಗಂಟೆಗೆ ಗರಿಷ್ಠ 25 ಕಿ.ಮೀ. ವೇಗದಲ್ಲಿ ಚಲಿಸಬಹುದು. ಇವುಗಳು ಬ್ಯಾಟರಿಚಾಲಿತವಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ 30 ಕಿ.ಮೀ.ವರೆಗೆ ಸಾಗಬಹುದಾಗಿದೆ.

ವೀಲ್‌ಚೇರ್‌ಗಳ ಬೆಲೆ ಮತ್ತು ಇತರೆ ಮಾಹಿತಿಯನ್ನು, info@neomotion.co.in ಗೆ ಮೇಲ್‌ ಮಾಡಿ ತಿಳಿದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT