ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗೆ ಡಾಂಬರು ಹಾಕುವುದು ಒಳ್ಳೆಯದೇ, ವೈಟ್‌ಟಾಪಿಂಗ್‌ ಮಾಡುವುದು ಸೂಕ್ತವೇ?

ರಸ್ತೆಗಳ ಕಾಮಗಾರಿ ಆಯ್ಕೆಗೆ ನೆರವಾಗಲಿದೆ ತಜ್ಞರ ಸಮಿತಿಯ ಸೂತ್ರ
Last Updated 29 ಅಕ್ಟೋಬರ್ 2019, 5:08 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆಗೆ ಡಾಂಬರು ಹಾಕುವುದು ಒಳ್ಳೆಯದೇ ಅಥವಾ ವೈಟ್‌ಟಾಪಿಂಗ್‌ ಮಾಡುವುದು ಉತ್ತಮವೇ. ಈ ಜಿಜ್ಞಾಸೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಆರ್‌.ಆರ್‌. ದೊಡ್ಡಿಹಾಳ್‌ ನೇತೃತ್ವದ ಸಮಿತಿ ಮಾಡಿದೆ.

ವಿವಿಧ ಅಂಶಗಳನ್ನು ಪರಿಗಣಿಸಿ ಹೇಳುವುದಾದರೆ, ಕೆಲವೊಂದು ರಸ್ತೆಗಳಿಗೆ ವೈಟ್‌ಟಾಪಿಂಗ್‌ ಸೂಕ್ತವಾದರೆ ಇನ್ನೂ ಕೆಲವು ರಸ್ತೆಗಳಿಗೆ ಡಾಂಬರೀಕರಣವೇ ಸೂಕ್ತ ಎಂಬುದು ಸಮಿತಿಯ ಸ್ಪಷ್ಟ ಅಭಿಪ್ರಾಯ.

ಕಾಂಕ್ರೀಟ್‌ ಕ್ಯೂರಿಂಗ್‌ಗೆ ಹೆಚ್ಚು ಸಮಯ ಬೇಕು. ವೈಟ್‌ ಟಾಪಿಂಗ್‌ ಕಾಮಗಾರಿ ವಿಳಂಬವಾದಷ್ಟೂ ವಾಹನಗಳ ಓಡಾಟದ ಮೇಲೂ ಪರಿಣಾಮ ಉಂಟಾಗುತ್ತದೆ. ಕಾಮಗಾರಿ ನಡೆಯುವ ರಸ್ತೆ ಬಳಸುವ ವಾಹನಗಳು ಅಕ್ಕಪಕ್ಕದ ರಸ್ತೆಗಳನ್ನು ಬಳಸಬೇಕಾಗಿ ಬರುವುದರಿಂದ ಆ ರಸ್ತೆಗಳ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ. ಸಂಚಾರ ದಟ್ಟಣೆ ತೀವ್ರವಾಗಿರುವ ರಸ್ತೆಯಲ್ಲಿ 14 ದಿನ ಕ್ಯೂರಿಂಗ್‌ ಮಾಡುವುದು ಸುಲಭವಲ್ಲ. ಕಾಮಗಾರಿ ಸಂದರ್ಭದಲ್ಲಿ ಸಂಚಾರ ನಿರ್ವಹಣೆ ಪೊಲೀಸರಿಗೂ ನಿಜಕ್ಕೂ ಸವಾಲಿನ ಕೆಲಸ.

ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಸಮಯ ಹೆಚ್ಚು ಬೇಕು. ಆದರೆ, ಅವುಗಳ ವೆಚ್ಚ ಶೇ 25ರಿಂದ 45ರಷ್ಟು ಹೆಚ್ಚು. ಸುಮಾರು 20 ವರ್ಷ ಅವು ಬಾಳಿಕೆ ಬರುತ್ತವೆ. ಅಂದರೆ ಅವುಗಳ ಬಾಳಿಕೆ ಅವಧಿ ಶೇ 45ರಿಂದ ಶೇ 65ರಷ್ಟು ಹೆಚ್ಚು. ವೈಟ್‌ಟಾಪ್‌ ರಸ್ತೆಗಳ ನಿರ್ವಹಣಾ ವೆಚ್ಚ ಕಡಿಮೆ. ವಯಸ್ಸಾದರೂ ದೃಢತೆ ಕಡಿಮೆ ಆಗುವುದಿಲ್ಲ. ಹಾಗಾಗಿ, ಹೆಚ್ಚು ಸುರಕ್ಷಿತ ಎಂದು ಕ್ಯಾ.ಆರ್‌.ಆರ್.ದೊಡ್ಡಿಹಾಳ್‌ ಸಮಿತಿ ಅಭಿಪ್ರಾಯ‍ಪಟ್ಟಿದೆ.

3,500 ಟನ್‌ ಜಲ್ಲಿ ಬೇಕು: ಡಾಂಬರು ರಸ್ತೆಯನ್ನು ತ್ವರಿತವಾಗಿ ನಿರ್ಮಿಸಬಹುದಾದರೂ, ಮಳೆಯಿಂದ ಅದು ಹಾಳಾಗುವ ಸಾಧ್ಯತೆ ಜಾಸ್ತಿ. ಆರಂಭಿಕ ವೆಚ್ಚ ಕಡಿಮೆಯಾದರೂ ಅವುಗಳ ನಿರ್ವಹಣಾ ವೆಚ್ಚ ಹೆಚ್ಚು. ಅವುಗಳಿಗೆ ಪ್ರತಿ 3ರಿಂದ 5 ವರ್ಷಗಳಿಗೊಮ್ಮೆ ಮರು ಡಾಂಬರೀಕರಣ ಮಾಡಬೇಕು. 1 ಕಿ.ಮೀ. ಉದ್ದದ 7.5 ಮೀ ಅಗಲದ ಡಾಂಬರು ರಸ್ತೆಗೆ 20 ವರ್ಷಗಳಲ್ಲಿ 3,500 ಟನ್‌ ಜಲ್ಲಿ ಹಾಗೂ 150 ಟನ್‌ ಡಾಂಬರು ಬೇಕಾಗುತ್ತದೆ. ರಸ್ತೆಯ ಎತ್ತರ ಹೆಚ್ಚು ಆಗುವುದರಿಂದ ಅದರ ಮಟ್ಟ ಪಾದಚಾರಿ ಮಾರ್ಗದ ಮಟ್ಟದವರೆಗೆ ತಲುಪಬಹುದು. ಇದರಿಂದ ಸುರಕ್ಷತೆ ಮತ್ತು ಮಳೆ ನೀರು ಹರಿವಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸ ಬಹುದು. ವೈಟ್‌ಟಾಪಿಂಗ್‌ ರಸ್ತೆಗಳಲ್ಲಿ ರಸ್ತೆಯ ಮಟ್ಟ ಒಂದೇ ಇರುತ್ತದೆ ಎಂದು ಸಮಿತಿ ಹೇಳಿದೆ.

ಕೆಲವೊಂದು ರಸ್ತೆಗಳಿಗೆ ಡಾಂಬರನ್ನು ಕೆರೆದು ತೆಗೆದು ನಂತರ ಮರುಡಾಂಬರೀಕರಣ ಮಾಡಬಹುದು. ಆದರೆ, ಕೆರೆದು ತೆಗೆದ ತ್ಯಾಜ್ಯದ ವಿಲೇವಾರಿ ಇನ್ನೊಂದು ಪರಿಸರಾತ್ಮಕ ಸಮಸ್ಯೆಯನ್ನುಂಟು ಮಾಡುತ್ತದೆ. ಅದನ್ನು ಸಣ್ಣ ರಸ್ತೆಗಳ ಡಾಂಬರೀಕರಣಕ್ಕೆ ಬಳಸಬಹುದು ಎಂದು ಸಮಿತಿ ಸಲಹೆ ನೀಡಿದೆ.

ಡಾಂಬರು ರಸ್ತೆಯ ಕೆಳಗಿರುವ ಮೂಲಸೌಕರ್ಯ ಕೊಳವೆಗಳ ಬದಲು ರಸ್ತೆಯಂಚಿನ ಮೀಸಲು ಪ್ರದೇಶದಲ್ಲಿ ಅಥವಾ ಪಾದಚಾರಿ ಮಾರ್ಗದ ಅಡಿಯಲ್ಲಿ ಹೊಸ ಕೊಳವೆ ಅಳವಡಿಸಬೇಕು.

ವೈಟ್‌ಟಾಪಿಂಗ್‌ ರಸ್ತೆ ಆಯ್ಕೆಗೆ ಸೂತ್ರ

ಯಾವ ರಸ್ತೆಗಳನ್ನು ವೈಟ್‌ಟಾಪಿಂಗ್‌ಗೆ ಆಯ್ಕೆ ಮಾಡಬೇಕು ಎಂಬ ಬಗ್ಗೆ ಬಿಬಿಎಂಪಿ ಬಳಿ ನಿರ್ದಿಷ್ಟ ಮಾನದಂಡಗಳಿರಲಿಲ್ಲ. ಅನೇಕ ಸಂದರ್ಭಗಳಲ್ಲಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ರಸ್ತೆಗಳನ್ನು ವೈಟ್‌ಟಾಪಿಂಗ್‌ಗೆ ಆಯ್ಕೆ ಮಾಡುತ್ತಿದ್ದರು. ಆಯ್ಕೆ ವೇಳೆ ರಸ್ತೆಯ ಅಗಲ ಅಥವಾ ಸಂಚಾರದಟ್ಟಣೆ ಮಾನದಂಡ ಮಾಡುವ ಬಗ್ಗೆಯೂ ಜಿಜ್ಞಾಸೆಗಳಿದ್ದವು. ಈ ಗೊಂದಲಗಳನ್ನು ಬಗೆಹರಿಸಲು ಪರಿಹಾರ ಸೂತ್ರವನ್ನು ಸಮಿತಿ ಒದಗಿಸಿದೆ.

ರಸ್ತೆಗಳ ವೈಟ್‌ಟಾಪಿಂಗ್‌ಗೆ ಮುನ್ನ ಎಂಜಿನಿಯರಿಂಗ್‌ ಮತ್ತು ಆಡಳಿತಾತ್ಮಕವಾದ ನಿರ್ದಿಷ್ಟ, ಅಳತೆಗೆ ನಿಲುಕುವ ಹಾಗೂ ಸ್ಪಷ್ಟವಾಗಿ ಗೋಚರಿಸುವ ಕೆಲವು ಮಾನದಂಡಗಳನ್ನು ಅನುಸರಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.

ಇದಕ್ಕೆ ಪಟ್ಟಿಯನ್ನು ಸಿದ್ಧಪಡಿಸಿರುವ ಸಮಿತಿ ಹೆಚ್ಚು ಅಂಕ ಪಡೆಯುವ ರಸ್ತೆಯನ್ನು ವೈಟ್‌ಟಾಪಿಂಗ್‌ಗೆ ಆಯ್ಕೆ ಮಾಡಬಹುದು ಎಂದು ಶಿಫಾರಸು ಮಾಡಿದೆ.

ಡಾಂಬರೀಕರಣಕ್ಕೆ ರಸ್ತೆ ಆಯ್ಕೆ ಪ್ರಮುಖ ಮಾನದಂಡ

ಕನಿಷ್ಠ 100 ಮೀಟರ್‌ ಉದ್ದಕ್ಕೆ ರಸ್ತೆಯ ಉದ್ದ ಇಳಿಜಾರು ಶೇ 3.5ಕ್ಕಿಂತ ಹೆಚ್ಚು ಇರುವುದು, ಸುಸಜ್ಜಿತ ಮಳೆನೀರು ಚರಂಡಿ ವ್ಯವಸ್ಥೆ ಹೊಂದಿರುವುದು ಹಾಗೂ ರಸ್ತೆ ಅಡಿಯಲ್ಲಿ ಮೂಲಸೌಕರ್ಯ ಕೊಳವೆಗಳು ಇಲ್ಲದಿರುವುದನ್ನು ಆಧರಿಸಿ ಡಾಂಬರೀಕರಣಕ್ಕೆ ರಸ್ತೆಯನ್ನು ಆಯ್ಕೆ ಮಾಡಬೇಕು. ಹೆಚ್ಚು ಅಂಕ ಪಡೆದ ರಸ್ತೆಯ ಡಾಂಬರೀಕರಣಕ್ಕೆ ಆದ್ಯತೆ ಸಿಗಬೇಕು ಎಂದು ಸಮಿತಿ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT