ಗುರುವಾರ , ಅಕ್ಟೋಬರ್ 22, 2020
25 °C
ಲಾಕ್‌ಡೌನ್ ನಂತರ ಆರಂಭವಾಗದ ಕೆಲಸ: ಪ್ರಯಾಸದ ನಡುವೆ ವಾಹನ ಸಂಚಾರ

ಅಲ್ಲಲ್ಲೇ ನಿಂತ ವೈಟ್‌ಟಾಪಿಂಗ್ ಕಾಮಗಾರಿ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೈಟ್‌ಟಾಪಿಂಗ್ ರಸ್ತೆ ಕಾಮಗಾರಿಗಳು ಲಾಕ್‌ಡೌನ್ ಬಳಿಕ ಅಲ್ಲಲ್ಲೇ ಸ್ಥಗಿತಗೊಂಡಿವೆ. ಅರ್ಧಕ್ಕೆ ನಿಂತಿರುವ ಕಾಮಗಾರಿಗಳ ನಡುವೆ ವಾಹನ ಸವಾರರು ಪ್ರಯಾಸದಲ್ಲಿ ಸಂಚರಿಸುತ್ತಿದ್ದಾರೆ.

ಪ್ರತಿ ಕಿಲೋ ಮೀಟರ್‌ಗೆ ₹11 ಕೋಟಿ ವೆಚ್ಚದ ವೈಟ್‌ಟಾಪಿಂಗ್ ಕಾಮಗಾರಿಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭಿಸಲಾಯಿತು. ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲೂ ಅವುಗಳನ್ನು ಮುಂದುವರಿಸಲಾಯಿತು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ನಿರ್ದೇಶನ ನೀಡಿದರು.

ಬಳಿಕ ಪ್ರಗತಿಯಲ್ಲಿರುವ ಕಾಮಗಾರಿ ಗಳಿಗೆ ಮಾತ್ರ ಅನುಮತಿ ನೀಡಿ ಮೂರನೇ ಹಂತದ ಹೊಸ ಯೋಜನೆಗಳನ್ನು ತಡೆ ಹಿಡಿಯಲಾಗಿದೆ. ಲಾಕ್‌ಡೌನ್ ತನಕ ಕುಂಟುತ್ತಾ ಸಾಗಿದ್ದ ಕಾಮಗಾರಿಗಳು ಈಗ ಸಂಪೂರ್ಣ ಸ್ಥಗಿತಗೊಂಡಿವೆ.

ಪಶ್ಚಿಮ ಕಾರ್ಡ್ ರಸ್ತೆಯಲ್ಲಿನ ಮಹಾಲಕ್ಷ್ಮೀ ಲೇಔಟ್ ಮೆಟ್ರೊ ನಿಲ್ದಾಣದ ಬಳಿ, ಇಸ್ಕಾನ್ ದೇವಸ್ಥಾನದ ಎದುರು, ರಾಜಕುಮಾರ್ ಸಮಾಧಿ ರಸ್ತೆ (ಹೊರ ವರ್ತುಲ ರಸ್ತೆ), ಫೋರಂ ಮಾಲ್ ಎದುರಿನಲ್ಲಿ ಕೋರಮಂಗಲ ಕಡೆಗೆ ಹೋಗುವ 20ನೇ ಮುಖ್ಯರಸ್ತೆಗಳಲ್ಲಿ ಒಂದು ಬದಿ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೊಂದು ಬದಿಯಲ್ಲಿ ಹಾಗೇ ಉಳಿದಿದೆ.

ರಾಜಕುಮಾರ್ ಸಮಾಧಿ ರಸ್ತೆಯಲ್ಲಿ ನಾಯಂಡಹಳ್ಳಿಯಿಂದ ಗೊರಗುಂಟೆಪಾಳ್ಯದ ಕಡೆಗೆ ಹೋಗುವ ಮಾರ್ಗದಲ್ಲಿ ಸುಮನಹಳ್ಳಿ ದಾಟಿದ ನಂತರ ಒಂದು ಪಥದಲ್ಲಿ ಮಾತ್ರ ವೈಟ್‌ಟಾಪಿಂಗ್ ಕಾಮಗಾರಿ ನಡೆದಿದೆ. ಇನ್ನೊಂದು ಬದಿಯಲ್ಲಿ ಡಾಂಬರು ರಸ್ತೆ ಹಾಗೇ ಇದೆ. ಸರ್ವೀಸ್ ರಸ್ತೆಗೆ ಹೋಗಬೇಕಾದವರು ಆಕಸ್ಮಿಕವಾಗಿ ವೈಟ್‌ ಟಾಪಿಂಗ್ ರಸ್ತೆಗೆ ಹತ್ತಿದರೆ ಸರ್ವಿಸ್‌ ರಸ್ತೆಗೆ ಅಥವಾ ಲಗ್ಗೆರೆ ಕಡೆಗೆ ಹೋಗಲು ಸಾಧ್ಯವಾಗುವುದೇ ಇಲ್ಲ. ರಾಜಕುಮಾರ್ ಸಮಾಧಿ ನಂತರದ ಫ್ಲೈಓವರ್ ತನಕ ಹೋಗಿ ವಾಪಸ್ ಬರಬೇಕಾದ ಸ್ಥಿತಿ ಇದೆ. 

‘ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಮಹಾಲಕ್ಷ್ಮೀಲೇಔಟ್ ಬಳಿಯೂ ಕಾಮಗಾರಿ ಅರ್ಧಕ್ಕೆ ನಿಂತಿದೆ. ಒಂದು ಪಥ ನಿರ್ಮಿಸಿ ಇನ್ನೊಂದು ಪಥ ಹಾಗೇ ಬಿಡಲಾಗಿದೆ. ಅಲ್ಲಿರುವ ಕಬ್ಬಿಣದ ಸರಳುಗಳ ಮೇಲೆ ವಾಹನಗಳು ಹತ್ತಿದರೆ ಅಪಾಯ ಗ್ಯಾರಂಟಿ’ ಎಂದು ಸ್ಥಳೀಯರು ಹೇಳುತ್ತಾರೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ನಿಂತ ಕಾಮಗಾರಿ ಮತ್ತೆ ಆರಂಭವಾಗಿಯೇ ಇಲ್ಲ. ಬಿಬಿಎಂಪಿ ಅಧಿಕಾರಿಗಳು ಇದಕ್ಕೆ ತಲೆಕೆಡಿಸಿಕೊಂಡಿಲ್ಲ. ಪ್ರಯಾಸದ ನಡುವೆ ವಾಹನ ಸಂಚಾರ ಮಾಡುವುದು ತಪ್ಪಿಲ್ಲ’ ಎಂದು ನಂದಿನಿ ಲೇಔಟ್‌ ನಿವಾಸಿ ಮಂಜೇಗೌಡ ಹೇಳಿದರು.

ಹಣಕಾಸಿನ ತೊಡಕಿಲ್ಲ

ಮೂರನೇ ಹಂತದ ಕಾಮಗಾರಿಗಳನ್ನು ಮಾತ್ರ ಸರ್ಕಾರ ತಡೆ ಹಿಡಿದಿದೆ. ಪ್ರಗತಿಯಲ್ಲಿದ್ದ ಕಾಮಗಾರಿಗಳಿಗೆ ಹಣಕಾಸಿನ ತೊಂದರೆ ಇಲ್ಲ ಎಂದು ಬಿಬಿಎಂಪಿ ಯೋಜನೆಗಳ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.

‘ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ಮಿಕರ ಕೊರತೆ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಂಡಿತ್ತು. ಸದ್ಯ ನಗರದಲ್ಲಿ ನಾಲ್ಕೈದು ಕಡೆ ಮಾತ್ರ ಕಾಮಗಾರಿ ನಡೆಯುತ್ತಿದೆ. ಪೊಲೀಸರಿಂದ ಅನುಮತಿ ಸಿಗದೆ ಇರುವುದು ಸಹ ಕಾಮಗಾರಿ ಸ್ಥಗಿತಕ್ಕೆ ಕಾರಣ. ಕಾಮಗಾರಿ ಮುಂದುವರಿಸಲು ಬೇರಾವ ತೊಡಕು ಇಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು