ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಕೇಶ್‌ ಸಾವಿನ ಬಗ್ಗೆ ಏಕೆ ತನಿಖೆಯಾಗಿಲ್ಲ: ಎಚ್‌ಡಿಕೆ

Published 25 ಮೇ 2024, 15:26 IST
Last Updated 25 ಮೇ 2024, 15:26 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ರಾಕೇಶ್‌ ವಿದೇಶಕ್ಕೆ ಹೋಗಿ, ಅಲ್ಲಿಯೇ ಮೃತಪಟ್ಟ ಕುರಿತು ಏಕೆ ತನಿಖೆಯಾಗಿಲ್ಲ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

‘ಅತ್ಯಾಚಾರದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರೇ ವಿದೇಶಕ್ಕೆ ಕಳಿಸಿದ್ದಾರೆ’ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಅವರ ಮಗ ಯಾವ ಕೆಲಸಕ್ಕಾಗಿ ವಿದೇಶಕ್ಕೆ ಹೋಗಿದ್ದರು? ಯಾರ ಅನುಮತಿ ಪಡೆದಿದ್ದರು? ರಾಕೇಶ್‌ ಜತೆ ಆಗ ಯಾರ‍್ಯಾರು ಇದ್ದರು’ ಎಂದು ಕೇಳಿದರು.

‘ಮಕ್ಕಳು ಎಲ್ಲವನ್ನೂ ತಂದೆ, ತಾಯಿ, ಕುಟುಂಬದವರ ಬಳಿ ಹೇಳಿಯೇ ಹೋಗುತ್ತಾರಾ? ಯಾರಿಗೆ ಆದರೂ ನೋವು ನೋವೆ. ನೋವಿನಲ್ಲೂ ರಾಜಕೀಯ ಮಾಡಬಾರದು’ ಎಂದರು.

‘ರಾಜತಾಂತ್ರಿಕ ಪಾಸ್ ಪೋರ್ಟ್ ಬಗ್ಗೆ ಇವರೆಲ್ಲರೂ ಮಾತನಾಡುತ್ತಿದ್ದಾರೆ. ಆದರೆ ಇವರಿಗೆ ಕಾನೂನಿನ ತಿಳಿವಳಿಕೆಯೇ ಇಲ್ಲ. ಈಗ ಪ್ರಜ್ವಲ್ ವಾಪಸ್ ಕರೆದುಕೊಂಡು ಬರಲು ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡುವಂತೆ ಕೋರಿ ಪತ್ರ ಬರೆದಿದ್ದಾರೆ. ತಕ್ಷಣಕ್ಕೆ ಅದು ಸಾಧ್ಯವಿಲ್ಲ’ ಎಂದು ಹೇಳಿದರು.

‘ಈ ಪ್ರಕ್ರಿಯೆಗಳು ತಡ ಆಗಬಹುದು ಎನ್ನುವ ಕಾರಣಕ್ಕೆ ತಕ್ಷಣ ವಾಪಸ್‌ ಬಂದು ತನಿಖೆಗೆ ಹಾಜರಾಗುವಂತೆ ಪ್ರಜ್ವಲ್‌ಗೆ ಸಂದೇಶ ಕೊಟ್ಟಿದ್ದೇವೆ. ದೇವೇಗೌಡರು ಕೂಡ ಕೊನೆಯ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ದೇವೇಗೌಡರು ಮಾಧ್ಯಮದ ಮೂಲಕ ನೀಡಿದ ಎಚ್ಚರಿಕೆ ಕುರಿತು ಸಿದ್ದರಾಮಯ್ಯ‌ ಹಗುರವಾಗಿ ಮಾತನಾಡಿದ್ದಾರೆ. ದೀರ್ಘ ಕಾಲ ದೇವೇಗೌಡರ ಜತೆ ಇದ್ದ ಸಿದ್ದರಾಮಯ್ಯ ಅವರಿಗೆ ಅವರು ಏನು ಎಂಬುದು ಗೊತ್ತಿಲ್ಲವೆ’ ಎಂದು ಪ್ರಶ್ನಿಸಿದರು.

'ದಲ್ಲಾಳಿ ಜತೆ ಮಾತನಾಡಿದ್ದು ಏಕೆ?’

‘ಸಿ.ಡಿ ಶಿವು ತನ್ನ ಪಾತ್ರ ಇಲ್ಲ ಎನ್ನುತ್ತಾರೆ. ಆದರೆ, ದಲ್ಲಾಳಿ ಶಿವರಾಮೇಗೌಡ ಜತೆ ಮಾತನಾಡಿದ್ದು ಏಕೆ? ದೇವರಾಜೇಗೌಡ, ಶಿವರಾಮೇಗೌಡ, ಡಿ.ಕೆ. ಶಿವಕುಮಾರ್‌ ಏಕೆ ಮಾತನಾಡಿದರು. ತನ್ನ ಪಾತ್ರವೇ ಇಲ್ಲ ಎನ್ನುವವರು ಏನಾದರೂ ಸಾಕ್ಷ್ಯ ಇದೆಯಾ ಎಂದು ಕೇಳಿದ್ದು ಏಕೆ’ ಎಂದು ಹರಿಹಾಯ್ದರು.

ರಾಕೇಶ್‌ ಸಿದ್ದರಾಮಯ್ಯ ತಪ್ಪು ಮಾಡಿ ವಿದೇಶಕ್ಕೆ ಹೋಗಿರಲಿಲ್ಲ. ರಾಕೇಶ್‌ ಪ್ರಕರಣವನ್ನು ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಹೋಲಿಸಬೇಡಿ.
ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ

‘ಎಕ್ಸ್‌’ನಲ್ಲೂ ವಾಗ್ದಾಳಿ: ‘ಪೆನ್‌ ಡ್ರೈವ್‌ ಹಂಚಿದ್ದು ದೊಡ್ಡ ಅಪರಾಧವಾ’ ಎಂಬ ಸಿದ್ದರಾಮಯ್ಯ ಪ್ರಶ್ನೆ ಕುರಿತು ‘ಎಕ್ಸ್‌’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ‘ಮೊದಲು ಕಾನೂನು ಓದಿ. ನಿಮ್ಮದೇ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡದ ಪತ್ರಿಕಾ ಪ್ರಕಟಣೆಯನ್ನು ಗಮನಿಸಿ. ದಯವಿಟ್ಟು ವಕೀಲಿಕೆ ಮಾಡುವುದನ್ನು ಬಿಟ್ಟುಬಿಡಿ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಎಚ್‌ಡಿಕೆ ಪೆನ್‌ಡ್ರೈವ್‌ ಪಿತಾಮಹ’  

‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರೇ ಪೆನ್ ಡ್ರೈವ್ ಪಿತಾಮಹ. ಮೊದಲು ಜೇಬಿನಿಂದ ಪೆನ್ ಡ್ರೈವ್ ತೆಗೆದು ತೋರಿಸಿದ್ದವರೇ ಅವರು’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು ‘ಪೆನ್ ಡ್ರೈವ್ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಕುಮಾರಸ್ವಾಮಿ ಅವರಿಂದಲೇ ಕಲಿಯಬೇಕು’ ಎಂದರು. ‘ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ವಿಡಿಯೊಗಳಿದ್ದ ಪೆನ್ ಡ್ರೈವ್ ಹಂಚಿದ್ದು ದೊಡ್ಡ ಅಪರಾಧ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ಶಾಸಕ ರಮೇಶ ಜಾರಕಿಹೊಳಿಗೆ ಸಂಬಂಧಿಸಿದ ವಿಡಿಯೊ ಹಂಚಿದವರ ವಿರುದ್ಧ ಏಕೆ ಕ್ರಮ ಆಗಲಿಲ್ಲ? ಆ ವಿಡಿಯೊದಲ್ಲಿ ದಲಿತ ಹೆಣ್ಣು ಮಗಳಿದ್ದಳು ಅಲ್ಲವೆ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT