ಪತ್ನಿ ಕೊಲೆಗೆ ಯತ್ನ: ಕೆಎಎಸ್ ಅಧಿಕಾರಿ ವಿರುದ್ಧ ಎಫ್ಐಆರ್
ಬೆಂಗಳೂರು: ಮಾತ್ರೆ ಬೆರೆಸಿದ್ದ ನೀರು ಕುಡಿಸಿ ಪತ್ನಿ ಕೊಲೆಗೆ ಯತ್ನಿಸಿರುವ ಆರೋಪದಡಿ ಕೆಎಎಸ್ ಅಧಿಕಾರಿ ಜಿ.ಟಿ. ದಿನೇಶ್ಕುಮಾರ್ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಗರದ ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುವ ಸ್ಥಳೀಯ ನಿವಾಸಿಯೂ ಆದ ಕೆ.ಪಿ.ದೀಪ್ತಿ ಅವರು ದೂರು ನೀಡಿದ್ದಾರೆ. ಅವರ ಪತಿ ದಿನೇಶ್ಕುಮಾರ್ ಹಾಗೂ ಅವರ ಸಹೋದರನ ಪತ್ನಿ ರಮ್ಯಾ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಚಿತ್ರದುರ್ಗ ಜಿಲ್ಲೆಯ ಸಂತೆಬೆನ್ನೂರು ನಿವಾಸಿ ದಿನೇಶ್ಕುಮಾರ್ ಅವರನ್ನು 2015ರಲ್ಲಿ ಮದುವೆಯಾಗಿದ್ದೇನೆ. 1 ಕೆ.ಜಿ ಚಿನ್ನಾಭರಣ ಹಾಗೂ 4 ಕೆ.ಜಿ ಬೆಳ್ಳಿ ಸಾಮಗ್ರಿಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ನಮಗೀಗ ಇಬ್ಬರು ಮಕ್ಕಳಿದ್ದಾರೆ. ಮಕ್ಕಳು ಹಾಗೂ ನನ್ನನ್ನು ಪತಿಯು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ’ ಎಂದು ದೂರಿನಲ್ಲಿ ದೀಪ್ತಿ ಆರೋಪಿಸಿದ್ದಾರೆ.
‘ಕೆಲ ತಿಂಗಳುಗಳಿಂದ ನನಗೆ ಹಾಗೂ ನನ್ನ ಮಕ್ಕಳಿಗೆ ಪತಿಯು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆ. ಪುನಃ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ. ಸದ್ಯ ಪತಿಯು ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ನಾನು ರಾಜರಾಜೇಶ್ವರಿನಗರದ ಮನೆಗೆ ಬಂದಿದ್ದೆ.’
‘ಜ. 22ರಂದು ರಾತ್ರಿ ಮನೆಗೆ ಬಂದಿದ್ದ ಪತಿ, ವರದಕ್ಷಿಣೆ ತಂದಿದ್ದೀಯಾ ಎಂದು ಕೇಳಿದ್ದರು. ಅದರಿಂದ ನೊಂದ ನಾನು ಮಲಗುವ ಕೊಠಡಿಗೆ ಹೋಗಿ ಕುಳಿತಿದ್ದೆ. ಸಾಕಷ್ಟು ಸುಸ್ತಾಗಿತ್ತು. ಕೊಠಡಿಗೆ ಬಂದಿದ್ದ ಪತಿ, ಯಾವುದೋ ಔಷಧಿ ಬೆರೆಸಿದ್ದ ನೀರು ಕುಡಿಸಿದ್ದರು. ಸುಸ್ತು ಹೋಗುವುದಾಗಿ ಹೇಳಿದ್ದರು’ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ನೀರು ಕುಡಿದ ಅರ್ಧ ಗಂಟೆ ನಂತರ ತಲೆ ಸುತ್ತು ಬಂತು. ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದೆ. ಮನೆಗೆ ಬಂದಿದ್ದ ಚಿಕ್ಕಮ್ಮ ಅವರೇ ನನ್ನನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಪತಿಯು ಮಾತ್ರೆಗಳನ್ನು ಬೆರೆಸಿದ್ದ ನೀರು ಕುಡಿಯಲು ಕೊಟ್ಟಿದ್ದರು ಎಂಬುದು ವೈದ್ಯರಿಂದ ತಿಳಿಯಿತು. ಪತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದೂ ದೀಪ್ತಿ ಒತ್ತಾಯಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.