ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿ ವಿರುದ್ಧ ದೂರು: ಠಾಣೆ ಬಳಿಯೇ ಮಹಿಳೆ ಹತ್ಯೆ

Published 2 ಮೇ 2024, 19:24 IST
Last Updated 2 ಮೇ 2024, 19:24 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ಪತಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದ ಇಂದು (28) ಎಂಬುವವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಪತಿ ಮೈಕಲ್ ಫ್ರಾನ್ಸಿಸ್ (30) ವಿರುದ್ಧ ಪ್ರಕರಣ ದಾಖಲಾಗಿದೆ.

‘ಮಡಿವಾಳ ಬಳಿಯ ವೆಂಕಟಪುರದ ಇಂದು, ಕೋರಮಂಗಲದ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ವಿವೇಕನಗರದ ಮೈಕಲ್‌ನನ್ನು ಕೆಲ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ವಿವೇಕನಗರದಲ್ಲಿ ದಂಪತಿ ವಾಸವಿದ್ದರು. ಇತ್ತೀಚೆಗೆ ದಂಪತಿ ನಡುವೆ ಜಗಳ ಶುರುವಾಗಿತ್ತು. ಪತಿಯ ಕಿರುಕುಳದಿಂದ ಬೇಸತ್ತ ಇಂದು, ವೆಂಕಟಪುರದಲ್ಲಿರುವ ತವರು ಮನೆಗೆ ಬಂದು ವಾಸವಿದ್ದರು. ಕೋರಮಂಗಲದ ಮಾಲ್‌ನಲ್ಲಿ ಕೆಲಸಕ್ಕೆ ಹೋಗಿ, ಜೀವನ ಸಾಗಿಸುತ್ತಿದ್ದರು’ ಎಂದು ತಿಳಿಸಿದರು.

ಮಾಲ್ ಬಳಿ ಪತಿ ಗಲಾಟೆ: ‘ಪತ್ನಿ ಇಂದು ಮನೆ ಬಿಟ್ಟು ಹೋಗಿದ್ದರಿಂದ ಸಿಟ್ಟಾಗಿದ್ದ ಪತಿ, ವಾಪಸು ಬರುವಂತೆ ಹಲವು ಬಾರಿ ತಾಕೀತು ಮಾಡಿದ್ದರು. ಆದರೆ, ಪತ್ನಿ ಅದಕ್ಕೆ ಒಪ್ಪಿರಲಿಲ್ಲ. ಕೋರಮಂಗಲದಲ್ಲಿರುವ ಮಾಲ್ ಬಳಿ ಹೋಗಿದ್ದ ಆರೋಪಿ, ಪತ್ನಿ ಜೊತೆ ಜಗಳ ಮಾಡಿ ಹಲ್ಲೆ ಮಾಡಿದ್ದ’ ಎಂದು ಪೊಲೀಸರು ಹೇಳಿದರು.

‘ಪತಿಯ ವರ್ತನೆಯಿಂದ ಬೇಸತ್ತ ಪತ್ನಿ, ಗುರುವಾರ ಮಧ್ಯಾಹ್ನ ದೂರು ನೀಡಲು ಕೋರಮಂಗಲ ಠಾಣೆಗೆ ಬಂದಿದ್ದರು. ವಿಚಾರಣೆ ನಡೆಸಿದ್ದ ಸಿಬ್ಬಂದಿ, ಪತಿಗೆ ಕರೆ ಮಾಡಿ ಠಾಣೆಗೆ ಬರುವಂತೆ ಸೂಚಿಸಿದ್ದರು. ಆದರೆ, ಆತ ಸಂಜೆ ಬರುವುದಾಗಿ ಹೇಳಿ ಕಾಲಾವಕಾಶ ಪಡೆದುಕೊಂಡಿದ್ದ. ಹೀಗಾಗಿ, ಸಂಜೆ ಬರುವಂತೆ ಹೇಳಿ ಇಂದು ಅವರನ್ನು ಠಾಣೆಯಿಂದ ವಾಪಸು ಕಳುಹಿಸಲಾಗಿತ್ತು’ ಎಂದು ತಿಳಿಸಿದರು.

ಅಡ್ಡಗಟ್ಟಿ ಚಾಕುವಿನಿಂದ ಹಲ್ಲೆ: ‘ಠಾಣೆ ಹಾಗೂ ಈಶಾನ್ಯ ವಿಭಾಗದ ಡಿಸಿಪಿ ಕಚೇರಿಯಿಂದ ಅರ್ಧ ಕಿ.ಮೀ ದೂರದಲ್ಲಿರುವ ಕೋರಮಂಗಲ 6ನೇ ಹಂತದ 19ನೇ ಮುಖ್ಯರಸ್ತೆಯಲ್ಲಿ ಇಂದು ಹೊರಟಿದ್ದರು. ಅವರನ್ನು ಅಡ್ಡಗಟ್ಟಿದ್ದ ಆರೋಪಿ, ಜಗಳ ತೆಗೆದಿದ್ದ. ಚಾಕುವಿನಿಂದ ದೇಹದ ಹಲವು ಭಾಗಗಳಿಗೆ ಇರಿದು ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಂದು ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಪತ್ನಿಯ ಶೀಲ ಶಂಕಿಸಿ ಪತಿ ಪದೇ ಪದೇ ಜಗಳ ಮಾಡುತ್ತಿದ್ದನೆಂದು ಗೊತ್ತಾಗಿದೆ. ಇದೇ ಕಾರಣಕ್ಕೆ ಕೊಲೆ ನಡೆದಿರುವ ಅನುಮಾನವಿದೆ. ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT