ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಡಿನಲ್ಲಿ ರಸ್ತೆ ವಿಸ್ತರಣೆಗೆ ಅನುಮೋದನೆ ಏಕೆ?’

ಅರಣ್ಯ ಇಲಾಖೆಗೆ ವೈಲ್ಡ್‌ ಲೈಫ್‌ ಫಸ್ಟ್‌ ಸಂಸ್ಥೆ ಪತ್ರ
Last Updated 31 ಆಗಸ್ಟ್ 2020, 14:12 IST
ಅಕ್ಷರ ಗಾತ್ರ

ಬೆಂಗಳೂರು: ‘ವನ್ಯಜೀವಿಗಳು ಇರುವಲ್ಲಿ ಅಥವಾ ರಾಷ್ಟ್ರೀಯ ಉದ್ಯಾನ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಅಥವಾ ವಿಸ್ತರಣೆಗೆ ಅನುಮೋದನೆ ನೀಡಲಾಗುತ್ತಿದೆ. ತಳಮಟ್ಟದಲ್ಲಿಯೇ ಇಂತಹ ಅರ್ಜಿಗಳನ್ನು ತಿರಸ್ಕರಿಸುವ, ಕೂಲಂಕಷವಾಗಿ ಪರಿಶೀಲಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಗಮನ ಹರಿಸಬೇಕು’ ಎಂದು ವೈಲ್ಡ್‌ಲೈಫ್ ಸಂಘಟನೆಯು ಅರಣ್ಯ ಇಲಾಖೆಗೆ ಪತ್ರ ಬರೆದಿದೆ.

ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ ದವೆ, ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಸಂಜಯ್‌ ಮೋಹನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಅಜಯ್‌ ಮಿಶ್ರಾ ಅವರಿಗೆ ಈ ಪತ್ರ ಬರೆಯಲಾಗಿದೆ.

‘ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಥವಾ ವನ್ಯಜೀವಿ ಪ್ರದೇಶದಲ್ಲಿ ರಸ್ತೆಗಳ ನಿರ್ಮಾಣಕ್ಕೆ, ಕಾಲುವೆ, ವಿದ್ಯುತ್‌ ಸಂಪರ್ಕ ಕಲ್ಪಿಸಲು ಅನುಮೋದನೆ ನೀಡಲಾಗುತ್ತಿದೆ. ಇಂತಹ ಪ್ರದೇಶದಲ್ಲಿ ಹೊಸ ರಸ್ತೆಗಳು ಆಗಬಾರದು ಎಂದು ಕೇಂದ್ರ ಸರ್ಕಾರದ ನೀತಿ–ನಿರೂಪಣೆಗಳಲ್ಲಿ, ಸುಪ್ರೀಂ ಕೋರ್ಟ್‌ ಮಟ್ಟದಲ್ಲಿಯೇ ಹಲವು ಪ್ರಕರಣಗಳಲ್ಲಿ ತೀರ್ಮಾನವಾಗಿದೆ. ಆದರೂ, ರಸ್ತೆ ವಿಸ್ತರಣೆಗೆ ಅನುಮತಿ ನೀಡಲಾಗುತ್ತಿದೆ’ ಎಂದು ಸಂಘಟನೆಯ ಟ್ರಸ್ಟಿ ಪ್ರವೀಣ್ ಭಾರ್ಗವ್ ಪತ್ರದಲ್ಲಿ ಹೇಳಿದ್ದಾರೆ.

‘ನಗರದೊಳಗೆ ನಾಲ್ಕುಪಥದ ರಸ್ತೆಯನ್ನು ನಿರ್ಮಾಣ ಮಾಡಬೇಕು ಎಂದರೆ, ಅದು ಸಾಧ್ಯವಾಗದೆ ಊರ ಹೊರಗೆ ‘ಬೈಪಾಸ್’ ರಸ್ತೆ ಮಾಡುತ್ತಾರೆ. ಆದರೆ, ಅರಣ್ಯ ಪ್ರದೇಶದೊಳಗೆ ಮಾತ್ರ ರಸ್ತೆ ವಿಸ್ತರಣೆಯಂತಹ ಕಾರ್ಯ ಕೈಗೆತ್ತಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.

‘ಈ ಕುರಿತು ಪರಿಶೀಲನೆ ನಡೆಸಲು, ಅರ್ಜಿ ತಿರಸ್ಕರಿಸಲು, ಕಿರುರಸ್ತೆಗಳ ಅಗತ್ಯ ಪರಿಗಣಿಸುವುದಕ್ಕೆ ಸಂಬಂಧಿಸಿದಂತೆ ಪರಿವೇಶ್‌ ಎಂಬ ಪೋರ್ಟಲ್ ಮಾಡಲಾಗಿದೆ. ವಿವಿಧ ಇಲಾಖೆಗಳವರು ಇದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಈ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಇದು ಏಕಗವಾಕ್ಷಿ ವ್ಯವಸ್ಥೆ. ಆದರೆ, ಪ್ರಾರಂಭಿಕ ಹಂತದಲ್ಲಿಯೇ ಅನುಮೋದನೆ ಕೊಡುವ ಕೆಲಸವಾಗುತ್ತಿದೆ’ ಎಂದು ಅವರು ದೂರಿದ್ದಾರೆ.

‘ಕೇಂದ್ರಸರ್ಕಾರ, ಸುಪ್ರೀಂ ಕೋರ್ಟ್‌ ಮಟ್ಟದಲ್ಲಿಯೇ ತೀರ್ಮಾನವಾಗಿದೆ ಎಂದ ಮೇಲೆ ಸ್ಥಳೀಯ ಜನಪ್ರತಿನಿಧಿಗಳು ರಸ್ತೆ ನಿರ್ಮಾಣಕ್ಕೆ, ವಿಸ್ತರಣೆಗೆ ಅರ್ಜಿ ಸಲ್ಲಿಸಲೇಬಾರದು. ಆದರೆ, ರಸ್ತೆ ನಿರ್ಮಾಣಕ್ಕೆ ಮಂಜೂರಾಗುವ ಕೋಟ್ಯಂತರ ರೂಪಾಯಿ ಹಣ ಇಂತಹ ಅರ್ಜಿಗಳು ಹೆಚ್ಚಲು ಕಾರಣವಾಗಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT