ಭಾನುವಾರ, ಮಾರ್ಚ್ 29, 2020
19 °C
ಸ್ಪೇನ್‌ನ ವೆಲೆನ್ಸಿಯಾ ನಗರದ ಜೊತೆ ಪೈಪೋಟಿ

‘ಜಾಗತಿಕ ವಿನ್ಯಾಸ ರಾಜಧಾನಿ’ ಆಗಲಿದೆಯೇ ಬೆಂಗಳೂರು?

ಪ್ರವೀಣ್‌ ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜಾಗತಿಕ ವಿನ್ಯಾಸ ರಾಜಧಾನಿ’ ಎಂಬ ಶ್ರೇಯಕ್ಕೆ ಪಾತ್ರವಾಗುವ ಸುವರ್ಣಾವಕಾಶ ಬೆಂಗಳೂರು ನಗರದ ಪಾಲಿಗೆ ಒದಗಿ ಬಂದಿದೆ.

ವಿಶ್ವ ವಿನ್ಯಾಸ ಸಂಘಟನೆ ವತಿಯಿಂದ (ಡಬ್ಲ್ಯುಡಿಒ) ನೀಡಲಾಗುವ ‘ಜಾಗತಿಕ ವಿನ್ಯಾಸ ರಾಜಧಾನಿ’ (ಡಬ್ಲ್ಯುಡಿಸಿ) ಎಂಬ ಶ್ರೇಯಕ್ಕೆ ಪಾತ್ರವಾಗಲು ಬಿಬಿಎಂಪಿ ಭರದ ಸಿದ್ಧತೆ ನಡೆಸಿದೆ. 2022ನೇ ಸಾಲಿನಲ್ಲಿ ಈ ಶ್ರೇಯ ಪಡೆಯಲು ಆಯ್ಕೆಯಾಗಿರುವ ನಗರಗಳ ಪಟ್ಟಿಯಲ್ಲಿ ಸ್ಪೇನ್‌ನ ವೆಲೆನ್ಸಿಯಾ ನಗರದ ಜೊತೆ ಬೆಂಗಳೂರು ಕೂಡ ಸ್ಥಾನ ಪಡೆದಿದೆ.

ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಹಾಗೂ ಪರಿಸರ ಅಭಿವೃದ್ಧಿಗೆ ಪೂರಕವಾಗಿ ಪರಿಣಾಮಕಾರಿ ವಿನ್ಯಾಸ ರೂಪಿಸುವ ನಗರಗಳಿಗೆ ಡಬ್ಲ್ಯುಡಿಸಿಯು ಎರಡು ವರ್ಷಗಳಿಗೊಮ್ಮೆ ‘ಜಾಗತಿಕ ವಿನ್ಯಾಸ ರಾಜಧಾನಿ’ ಮನ್ನಣೆ ನೀಡುತ್ತದೆ. ಈ ಗೌರವಕ್ಕೆ ಪಾತ್ರವಾಗಬೇಕಾದರೆ ನಗರದ ಆಡಳಿತವು ತನ್ನ ಉತ್ತಮ ಸಂಪ್ರದಾಯಗಳನ್ನು ಬಿಂಬಿಸುವ ಹಾಗೂ ಜನ ಜೀವನ ಸುಧಾರಿಸುವ ಆವಿಷ್ಕಾರಗಳನ್ನು ಒಳಗೊಂಡ ಸುಸ್ಥಿರ ನಗರಾಭಿವೃದ್ಧಿ ನೀತಿಯನ್ನು ಹೊಂದಿರಬೇಕು. ಈ ಶ್ರೇಯ ಪಡೆಯಲು ಆಯ್ಕೆಯಾದ ಬಳಿಕ ವರ್ಷ ಪೂರ್ತಿ ಹಮ್ಮಿಕೊಳ್ಳುವ ವಿವಿಧ ಕಾರ್ಯಕ್ರಮಗಳಲ್ಲಿ ಅದನ್ನು ಸಾದರಪಡಿಸಬೇಕು.

ಕರ್ನಾಟಕ ಸರ್ಕಾರ ಹಾಗೂ ಬೆಂಗಳೂರಿನ ವಿನ್ಯಾಸಗಾರರ ಸಮುದಾಯದ ಪ್ರತಿನಿಧಿಗಳು 2019ರ ಮಾರ್ಚ್‌ನಲ್ಲಿ ಸಭೆ ಸೇರಿದ, ಬೆಂಗಳೂರು ನಗರಕ್ಕೆ 2022ರ ಜಾಗತಿಕ ವಿನ್ಯಾಸ ರಾಜಧಾನಿ ಪಟ್ಟ ದಕ್ಕಿಸಿಕೊಳ್ಳಲು ಪೈಪೋಟಿ ನಡೆಸುವ ಕುರಿತು ಸಮಾಲೋಚನೆ ನಡೆಸಿದ್ದರು. ಈ ಮನ್ನಣೆ ಪಡೆಯಲು ಅಗತ್ಯವಿರುವಂತೆ ನಗರದ ವಿನ್ಯಾಸ ರೂಪಿಸುವ ಬಗ್ಗೆ ಕಾರ್ಯಾಗಾರವನ್ನೂ ಹಮ್ಮಿಕೊಳ್ಳಲಾಗಿತ್ತು. ಭಾರತೀಯ ವಿನ್ಯಾಸಗಾರರ ಸಂಸ್ಥೆಯ (ಎಡಿಐ) ಪ್ರತಿನಿಧಿಗಳು ಹಾಗೂ ಪಾಲಿಕೆ ಅಧಿಕಾರಿಗಳು ಸೇರಿ ಬೆಂಗಳೂರು ನಗರವೂ ಈ ಮನ್ನಣೆ ಪಡೆಯಲು ಅಗತ್ಯವಿರುವ ಪರಿಕಲ್ಪನೆಗಳನ್ನು ಸಿದ್ಧಪಡಿಸಿದ್ದರು.

ಈ ಪರಿಕಲ್ಪನೆಗಳ ಜಾರಿಗೆ 2018–19ನೇ ಸಾಲಿನಿಂದ 2022–23ನೇ ಸಾಲಿನವರೆಗೆ ಪಾಲಿಕೆ ಬಜೆಟ್‌ನಲ್ಲಿ ಒಟ್ಟು ₹ 190 ಕೋಟಿ ಮೊತ್ತವನ್ನು ಒದಗಿಸಬೇಕಾಗುತ್ತದೆ. ಪ್ರವೇಶ ಶುಲ್ಕ ಪಾವತಿ, ಸಚಿವಾಲಯ ಕಚೇರಿ ಸ್ಥಾಪನೆ, ವಿನ್ಯಾಸ ಆಧರಿತ ಯೋಜನೆಗಳಿಗೆ ಹಾಗೂ 8 ಕಾರ್ಯಕ್ರಮಗಳ ಅನುಷ್ಠಾನಕ್ಕೆ ಈ ಮೊತ್ತ ಬಳಕೆ ಆಗಲಿದೆ.

ಈ ಗೌರವಕ್ಕೆ ಪಾತ್ರವಾಗಲು ಬಿಬಿಎಂಪಿ ನಡೆಸಿರುವ ಸಿದ್ಧತೆಗಳ ಕುರಿತು ಆಯುಕ್ತರು 2019ರ ಮಾರ್ಚ್‌ನಲ್ಲಿ ವಿಶ್ವ ವಿನ್ಯಾಸ ಸಂಘಟನೆಗೆ ಪ್ರಸ್ತಾವ ಸಲ್ಲಿಸಿದ್ದರು.

‘ಈ ಶ್ರೇಯ ಪಡೆಯಲು ಬೆಂಗಳೂರು ಆಯ್ಕೆಯಾಗಿದೆ ಎಂದು ಡಬ್ಲ್ಯುಡಿಒ ಜೂನ್‌ 12ರಂದು ಮಾಹಿತಿ ನೀಡಿದೆ. ಈ ಶ್ರೇಯ ಪಡೆಯಲು ಸರಣಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಕುರಿತಾದ ‘ಆತಿಥೇಯ ನಗರ ಒಪ್ಪಂದ’ಕ್ಕೆ (ಎಚ್‌ಸಿಎ) ಪಾಲಿಕೆ ಸಹಿ ಹಾಕಬೇಕಿದೆ. 2022 ಒಳಗೆ ನಾವು ಒಟ್ಟು ಎಂಟು ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗುತ್ತದೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಡಬ್ಲ್ಯುಡಿಒ ಸಂಘಟನಾ ಸಮಿತಿಯಿಂದ 2 ದಿನ ನಗರ ಪ್ರವಾಸ

‘ಡಬ್ಲ್ಯುಡಿಒದ ಸಂಘಟನಾ ಸಮಿತಿಯು ಇದೇ 16 ಹಾಗೂ 17ರಂದು ನಗರದ ಪ್ರವಾಸ ಕೈಗೊಳ್ಳಲಿದ್ದು, ಜಾಗತಿಕ ವಿನ್ಯಾಸ ರಾಜಧಾನಿ ಮನ್ನಣೆ ಪಡೆಯಲು ನಡೆದಿರುವ ಸನ್ನದ್ಧತೆಗಳನ್ನು ಪರಿಶೀಲನೆ ನಡೆಸಲಿದೆ’ ಎಂದು ಆಯುಕ್ತರು ತಿಳಿಸಿದರು.

‘ಸಮಿತಿಯು ಚರ್ಚ್‌ಸ್ಟ್ರೀಟ್‌, ಕಬ್ಬನ್‌ ಪಾರ್ಕ್‌, ಆರ್ಟ್‌ ಇನ್ ಟ್ರಾನ್ಸಿಟ್‌, ಬುಲೆವಾರ್ಡ್‌, ರಂಗೋಲಿ ಕಲಾಕೇಂದ್ರ, ಚಿಕ್ಕಪೇಟೆಯ ಹೂವಿನ ಮಾರುಕಟ್ಟೆ ಪ್ರದೇಶಗಳಿಗೆ ಸಮಿತಿಯ ಪ್ರತಿನಿಧಿಗಳು ಭೇಟಿ ನೀಡಲಿದ್ದಾರೆ’ ಎಂದರು.

‘ಆರು ನಗರಗಳಿಗೆ ಸಿಕ್ಕಿದೆ ಗೌರವ’

ಈ ಹಿಂದೆ ಇಟಲಿಯ ಟೊರಿನೊ, ದಕ್ಷಿಣ ಕೊರಿಯಾದ ಸೋಲ್‌, ಫಿನ್ಲೆಂಡ್‌ನ ಹೆಲ್ಸಿಂಕಿ, ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌, ಚೀನಾದ ತೈಪೆ ನಗರಗಳು ಈ ಗೌರವಕ್ಕೆ ಪಾತ್ರವಾಗಿವೆ. ಫ್ರಾನ್ಸ್‌ನ ಲಿಲ್ಲಿ ಮೆಟ್ರೊಪೋಲ್‌ ನಗರವು 2020ರಲ್ಲಿ ಈ ಮನ್ನಣೆ ಪಡೆಯಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು