ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಯಾಲಿಸಿಸ್‌ ಕೇಂದ್ರ ನಿರ್ವಹಣೆಗೆ ಹೊಸ ಏಜೆನ್ಸಿ: ದಿನೇಶ್‌ ಗುಂಡೂರಾವ್‌

ದಾನಿಗಳು ಯಂತ್ರ ನೀಡಿದರೆ ತಂತ್ರಜ್ಞರ ಸೌಲಭ್ಯ
Published 7 ಡಿಸೆಂಬರ್ 2023, 16:20 IST
Last Updated 7 ಡಿಸೆಂಬರ್ 2023, 16:20 IST
ಅಕ್ಷರ ಗಾತ್ರ

ವಿಧಾನಸಭೆ: ರಾಜ್ಯದಾದ್ಯಂತ ಡಯಾಲಿಸಿಸ್‌ ಕೇಂದ್ರಗಳ ನಿರ್ವಹಣೆಗೆ ಹೊಸ ಏಜೆನ್ಸಿಯನ್ನು ನೇಮಿಸಲಾಗುತ್ತಿದೆ. ಮೂರು ಕಂದಾಯ ವಿಭಾಗಗಳ ಟೆಂಡರ್‌ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಬಿಜೆಪಿಯ ಯಶ್‌ಪಾಲ್‌ ಎ. ಸುವರ್ಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿ ಡಯಾಲಿಸಿಸ್‌ ಕೇಂದ್ರಗಳ ನಿರ್ವಹಣೆಗೆ ಈ ಹಿಂದೆ ನೇಮಿಸಿದ್ದ ಸಂಸ್ಥೆಯಿಂದ ಸಮಸ್ಯೆ ಉಂಟಾಗಿತ್ತು. ಈ ಕಾರಣದಿಂದ ಹಳೆಯ ಗುತ್ತಿಗೆಯನ್ನು ರದ್ದುಡಿಸಿ, ಹೊಸ ಏಜೆನ್ಸಿ ನೇಮಿಸಲಾಗುತ್ತಿದೆ. ಮುಂದಿನ ತಿಂಗಳಿನಿಂದಲೇ ಹೊಸ ಏಜೆನ್ಸಿಯು ಸೇವೆ ಒದಗಿಸಲಿದೆ’ ಎಂದರು.

ಬೆಂಗಳೂರು, ಮೈಸೂರು ಮತ್ತು ಬೆಳಗಾವಿ ಕಂದಾಯ ವಿಭಾಗಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಕಲಬುರಗಿ ವಿಭಾಗದಲ್ಲಿ ಮೊದಲ ಬಾರಿ ಟೆಂಡರ್‌ ಆಹ್ವಾನಿಸಿದಾಗ ಅರ್ಹ ಸಂಸ್ಥೆಗಳು ಬಿಡ್‌ ಸಲ್ಲಿಸಿಲ್ಲ. ಎರಡನೇ ಬಾರಿ ಬಿಡ್‌ ಆಹ್ವಾನಿಸಲಾಗುವುದು. ಶೀಘ್ರದಲ್ಲಿ ಈ ವಿಭಾಗಕ್ಕೂ ಏಜೆನ್ಸಿ ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ಈ ಹಿಂದೆ 168 ಡಯಾಲಿಸಿಸ್‌ ಕೇಂದ್ರಗಳಲ್ಲಿ 649 ಯಂತ್ರಗಳಿದ್ದವು. ಈಗ ಒಟ್ಟು 219 ಕೇಂದ್ರಗಳಲ್ಲಿ 800 ಯಂತ್ರಗಳನ್ನು ಒದಗಿಸಲಾಗಿದೆ. ಇದರಿಂದಾಗಿ ಹೆಚ್ಚು ಜನರಿಗೆ ಡಯಾಲಿಸಿಸ್‌ ಸೇವೆ ಒದಗಿಸಲು ಸಾಧ್ಯವಾಗಿದೆ ಎಂದರು.

ಹೊಸ ಏಜೆನ್ಸಿಯು ತಾನೇ ಡಯಾಲಿಸಿಸ್‌ ಯಂತ್ರಗಳನ್ನು ಅಳವಡಿಸಿ, ನಿರ್ವಹಣೆಯನ್ನೂ ಮಾಡಲಿದೆ. ಆರೋಗ್ಯ ಇಲಾಖೆಯು ನಿರ್ವಹಣಾ ವೆಚ್ಚ ಭರಿಸಲಿದೆ. ಏಕ ಬಳಕೆಯ ಡಯಲೈಸರ್‌ಗಳನ್ನು ಮಾತ್ರ ಬಳಸಲಾಗುತ್ತದೆ. ಇದರಿಂದ ಡಯಾಲಿಸಿಸ್‌ ಹಂತದಲ್ಲಿ ಸೋಂಕು ಹರಡುವುದನ್ನು ತಪ್ಪಿಸಲು ಸಾಧ್ಯವಾಗಿದೆ ಎಂದು ವಿವರಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಡಯಾಲಿಸಿಸ್‌ ಕೇಂದ್ರದ ಸಿಬ್ಬಂದಿಯ ಮುಷ್ಕರದಿಂದ ಸೈಯದ್‌ ಮಣ್ಣಾನವರ ಎಂಬವರು ಸಕಾಲಕ್ಕೆ ಚಿಕಿತ್ಸೆ ದೊರಕದೇ ಮೃತಪಟ್ಟ ಪ್ರಕರಣವನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ‘ಈ ರೀತಿಯ ಸಾವಿಗೆ ಕಾರಣರಾದವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ ಸೇರಿದಂತೆ ದಾನಿಗಳು ಡಯಾಲಿಸಿಸ್‌ ಯಂತ್ರ ಪೂರೈಸಿದರೆ, ಅವುಗಳಿಗೆ ಆರೋಗ್ಯ ಇಲಾಖೆಯಿಂದ ತಂತ್ರಜ್ಞರನ್ನು ನೇಮಿಸಬೇಕು ಎಂದು ಬಿಜೆಪಿಯ ವಿ. ಸುನಿಲ್‌ ಕುಮಾರ್‌ ಒತ್ತಾಯಿಸಿದರು.

‘ದಾನಿಗಳು ಕೊಡುಗೆಯಾಗಿ ನೀಡುವ ಡಯಾಲಿಸಿಸ್‌ ಯಂತ್ರಗಳ ನಿರ್ವಹಣೆಗೆ ತಂತ್ರಜ್ಞ ಸಿಬ್ಬಂದಿ ಮತ್ತು ನಿರ್ವಹಣಾ ವೆಚ್ಚವನ್ನು ಆರೋಗ್ಯ ಇಲಾಖೆಯಿಂದಲೇ ಭರಿಸಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ಆಯುಷ್ಮಾನ್‌ ಭಾರತ್‌– ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಸೇವೆ ಪಡೆಯಲು ಅವಕಾಶ ನೀಡಬೇಕೆಂಬ ಬೇಡಿಕೆ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಬಿಜೆಪಿಯ ಶೈಲೇಂದ್ರ ಬೆಲ್ದಾಳೆ, ಡಿ. ವೇದವ್ಯಾಸ ಕಾಮತ್‌, ಆರಗ ಜ್ಞಾನೇಂದ್ರ, ಕಾಂಗ್ರೆಸ್‌ನ ಎನ್‌.ಟಿ. ಶ್ರೀನಿವಾಸಯ್ಯ ಸೇರಿದಂತೆ ಹಲವರು ಡಯಾಲಿಸಿಸ್‌ ಕೇಂದ್ರಗಳ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು.

ದಂಡದ ಜತೆಗೆ ಕಪ್ಪುಪಟ್ಟಿಗೆ

‘ಹಿಂದೆ ಡಯಾಲಿಸಿಸ್‌ ಕೇಂದ್ರಗಳ ನಿರ್ವಹಣೆ ಗುತ್ತಿಗೆ ಪಡೆದಿದ್ದ ಸಂಸ್ಥೆಯು ಷರತ್ತುಗಳನ್ನು ಪಾಲಿಸಿಲ್ಲ. ಸದ್ಯ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಭವಿಷ್ಯನಿಧಿ ಕಾರ್ಮಿಕ ರಾಜ್ಯ ವಿಮಾ ನಿಗಮದ ವಂತಿಗೆಯನ್ನು ಈಗ ಸರ್ಕಾರವೇ ಭರಿಸಿದೆ. ಆದ್ದರಿಂದ ಸಿಬ್ಬಂದಿ ಮುಷ್ಕರ ಕೈಬಿಟ್ಟಿದ್ದಾರೆ’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು. ಆ ಸಂಸ್ಥೆಗೆ ದಂಡ ವಿಧಿಸುವ ಜತೆಯಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾಗುತ್ತಿದೆ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT