ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರಿಗೆ ಪ್ರತಿ ಎಕರೆಗೆ ₹ 25 ಸಾವಿರ ಪರಿಹಾರ ಕೊಡಿ: ಆರ್‌. ಅಶೋಕ

ಬರಗಾಲದ ಕುರಿತು ಚರ್ಚೆ
Published 7 ಡಿಸೆಂಬರ್ 2023, 16:15 IST
Last Updated 7 ಡಿಸೆಂಬರ್ 2023, 16:15 IST
ಅಕ್ಷರ ಗಾತ್ರ

ವಿಧಾನಸಭೆ: ತೀವ್ರ ಬರಗಾಲದಿಂದ ಬೆಳೆ ನಷ್ಟಕ್ಕೀಡಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪ್ರತಿ ಎಕರೆಗೆ ₹25,000 ಪರಿಹಾರ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಸರ್ಕಾರವನ್ನು ಆಗ್ರಹಿಸಿದರು.

ಬರಗಾಲ ಕುರಿತು ಮುಂದುವರಿದ ಚರ್ಚೆಯಲ್ಲಿ ಗುರುವಾರ ಮಾತನಾಡಿದ ಅವರು, ‘ಹಿಂದೆ ನಾವು ಅಧಿಕಾರದಲ್ಲಿ ಇದ್ದಾಗಲೂ ಪ್ರಕೃತಿ ವಿಕೋಪದಿಂದ ಬೆಳೆ ಹಾನಿ ಸಂಭವಿಸಿತ್ತು. ಆಗ ಕೇಂದ್ರದ ಕಡೆ ಬೆರಳು ತೋರಿಸುತ್ತಾ ಕೈಕಟ್ಟಿ ಕುಳಿತಿರಲಿಲ್ಲ. ರಾಜ್ಯ ಸರ್ಕಾರವೇ ಸ್ವಯಂಪ್ರೇರಿತವಾಗಿ ಪರಿಹಾರ ವಿತರಿಸಿತ್ತು. ಈಗಿನ ಸರ್ಕಾರಕ್ಕೆ ಪರಿಹಾರ ನೀಡಲು ಏನು ಸಮಸ್ಯೆಯಾಗಿದೆ’ ಎಂದು ಪ್ರಶ್ನಿಸಿದರು.

ಹಿಂದೆ ಅತಿವೃಷ್ಟಿಯಿಂದ ಬೆಳೆಹಾನಿ ಆದಾಗ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಮಾರ್ಗಸೂಚಿಯ ದುಪ್ಪಟ್ಟು ಪರಿಹಾರವನ್ನು ವಿತರಿಸಲಾಗಿತ್ತು. ಈಗಿನ ಸರ್ಕಾರ ರೈತರಿಗೆ ₹2,000 ಪರಿಹಾರ ವಿತರಣೆಗೆ ನಿರ್ಧರಿಸಿದೆ. ಈ ಸರ್ಕಾರ ರೈತರನ್ನು ಯಾವ ರೀತಿ ನೋಡುತ್ತಿದೆ ಎಂಬುದಕ್ಕೆ ಇದು ಸಾಕ್ಷಿ ಎಂದರು.

‘ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ ಎಂಬ ಅನುಮಾನ ಕಾಡುತ್ತಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಹಾಲಿನಿಂದ ಮದ್ಯದವರೆಗೆ ಆರು ರೀತಿಯ ತೆರಿಗೆಗಳನ್ನು ರಾಜ್ಯದ ಜನರ ಮೇಲೆ ಹೇರಲಾಗಿದೆ. ಆದರೆ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ ಎಂದರೆ ಹೇಗೆ? ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಬೇಕು’ ಎಂದು ಅಶೋಕ ಆಗ್ರಹಿಸಿದರು.

ತೆಲಂಗಾಣದ ಚುನಾವಣೆಗೆ ಸಮಯ ವ್ಯಯಿಸುವವರಿಗೆ ಬರ ನಿರ್ವಹಣೆಗೆ ಕೆಲಸ ಮಾಡಲು ಪುರಸೊತ್ತಿಲ್ಲ. ಕುಡಿಯುವ ನೀರು ಪೂರೈಕೆ, ಜಾನುವಾರುಗಳಿಗೆ ಮೇವಿನ ಖರೀದಿ ಮತ್ತು ದಾಸ್ತಾನು, ಆಹಾರದ ಕೊರತೆ ನಿಭಾಯಿಸಲು ಸರ್ಕಾರ ಯಾವ ಸಿದ್ಧತೆಯನ್ನೂ ಮಾಡಿಲ್ಲ ಎಂದು ಟೀಕಿಸಿದರು.

‘ಪ್ರತಿಯೊಬ್ಬ ಜಾಣನಿಗೂ ಅಹಂಕಾರ ಇದ್ದೇ ಇರುತ್ತದೆ, ತಾನೊಬ್ಬ ಕೋಣನೆಂದು ತಿಳಿಯುವವರೆಗೂ’ ಎಂದು ಸಾಹಿತಿ ಬೀಚಿಯವರು ಹೇಳಿದ್ದರು. ಈ ಸರ್ಕಾರದಲ್ಲಿನ ಸಚಿವರ ಪರಿಸ್ಥಿತಿಯೂ ಹಾಗೆಯೇ ಇದೆ ಎಂದರು. 

ಪ್ರಮುಖ ಒತ್ತಾಯಗಳು

* ಶಾಸಕರ ಅಧ್ಯಕ್ಷತೆಯ ಕಾರ್ಯಪಡೆಗಳಿಗೆ ತಲಾ ₹ 5 ಕೋಟಿ ಬಿಡುಗಡೆ ಮಾಡಬೇಕು

* ಕಾರ್ಮಿಕರು ರೈತರು ಗುಳೆ ಹೋಗುವುದನ್ನು ತಪ್ಪಿಸಲು ಆಹಾರದ ಕಿಟ್‌ ವಿತರಿಸಬೇಕು

* ರೈತ ವಿದ್ಯಾನಿಧಿ ಯೋಜನೆಯನ್ನು ಪುನರಾರಂಭ ಮಾಡಬೇಕು

* ಫ್ರೂಟ್ಸ್‌ ತಂತ್ರಾಂಶದ ಆಧಾರದಲ್ಲಿ ಬರ ಪರಿಹಾರ ವಿತರಣೆ ನಿರ್ಧಾರ ಕೈಬಿಡಬೇಕು

* ಕಿಸಾನ್‌ ಸಮ್ಮಾನ್‌ ನಿಧಿಯಡಿ ರಾಜ್ಯ ಸರ್ಕಾರದಿಂದ ನೆರವು ನೀಡುವುದನ್ನು ಪುನರಾರಂಭಿಸಬೇಕು

* ಕುಡಿಯುವ ನೀರು ಪೂರೈಕೆಗೆ ಹೊಸ ಕೊಳವೆ ಬಾವಿ ಕೊರೆಯಲು ಅವಕಾಶ ನೀಡಬೇಕು

* ಗರ್ಭಿಣಿಯರು ಬಾಣಂತಿಯರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಬೇಕು

‘ಕುಡಿಯುವ ನೀರಿಗೆ ಪ್ರತ್ಯೇಕ ಅನುದಾನ’

‘ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಸಲು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮೂಲಕ ಪ್ರತಿ ಜಿಲ್ಲೆಗೆ ತಲಾ ₹1 ಕೋಟಿ  ಪ್ರತ್ಯೇಕ ಅನುದಾನ ಒದಗಿಸಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

‘ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಯೋಜನೆ ರೂಪಿಸಲಾಗುತ್ತಿದೆ. ಜಲ ಮೂಲಗಳನ್ನು ಗುರುತಿಸುವುದು ಮತ್ತು ನೀರಿನ ಪೂರೈಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಈ ಕುರಿತು ಅಧ್ಯಯನ ನಡೆಸಲು ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ತಜ್ಞರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ‘ಜಲ ಆಡಿಟ್‌ ಸಮಿತಿ’ ರಚಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT