ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಇಬ್ಬರು ಮಕ್ಕಳ ಕೊಲೆ: ಜೈಲಿನಲ್ಲಿ ತಾಯಿ ಆತ್ಮಹತ್ಯೆ

Published 14 ಏಪ್ರಿಲ್ 2024, 4:30 IST
Last Updated 14 ಏಪ್ರಿಲ್ 2024, 4:30 IST
ಅಕ್ಷರ ಗಾತ್ರ

ಬೆಂಗಳೂರು: ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದ ಆರೋಪದಡಿ ಬಂಧಿತರಾಗಿದ್ದ ತಾಯಿ ಗಂಗಾದೇವಿ (30) ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಜಾಲಹಳ್ಳಿಯ ಭೋವಿ ಕಾಲೊನಿಯ ಗಂಗಾದೇವಿ, ಏಪ್ರಿಲ್ 9ರಂದು ತಡರಾತ್ರಿ ತಮ್ಮ ಮಕ್ಕಳಾದ ಲಕ್ಷ್ಮಿ (7) ಹಾಗೂ ಗೌತಮ್‌ನನ್ನು (9) ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಮರುದಿನ ನಸುಕಿನಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಮಕ್ಕಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡು ಶರಣಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಗಂಗಾದೇವಿ ಅವರನ್ನು ಬಂಧಿಸಿದ್ದ ಜಾಲಹಳ್ಳಿ ಠಾಣೆ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಅಂದಿನಿಂದ ಗಂಗಾದೇವಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರು’ ಎಂದು ತಿಳಿಸಿದರು.

‘ಗಂಗಾದೇವಿ ಗುರುವಾರ ರಾತ್ರಿ ಶೌಚಾಲಯಕ್ಕೆ ಹೋಗಿದ್ದರು. ಅಲ್ಲಿಯೇ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತದೇಹ ನೋಡಿದ್ದ ಸಹ ಕೈದಿಗಳು ಜೈಲಿನ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಬಳಿಕ, ಜೈಲಿಗೆ ಹೋಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ’ ಎಂದು ಹೇಳಿದರು.

ಜೈಲಿನಲ್ಲಿದ್ದ ಪತಿ: ‘ಆಂಧ್ರಪ್ರದೇಶ ಗಂಗಾದೇವಿ, ನರೇಶ್ ಎಂಬುವವರನ್ನು 10 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಪುತ್ರಿಯ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಕಾರಣಕ್ಕೆ ಪತಿ ವಿರುದ್ಧವೇ ಗಂಗಾದೇವಿ ಪೊಲೀಸರಿಗೆ ದೂರು ನೀಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ (ಪೋಕ್ಸೊ) ಕಾಯ್ದೆಯಡಿ ನರೇಶ್‌ನನ್ನು ಬಂಧಿಸಲಾಗಿತ್ತು. ಸದ್ಯ ನರೇಶ್‌ನೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

‘ಪತಿ ಜೈಲು ಸೇರಿದ್ದರಿಂದ ಹಾಗೂ ಮಕ್ಕಳನ್ನು ಕೊಲೆ ಮಾಡಿದ್ದರಿಂದ ಗಂಗಾದೇವಿ ನೊಂದಿದ್ದರೆಂದು ಗೊತ್ತಾಗಿದೆ. ಆತ್ಮಹತ್ಯೆ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT