ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿಯ ಮೊಬೈಲ್‌ ಕರೆ ವಿವರ ಸಂಗ್ರಹಿಸಿದ ಆರೋಪ; ಪೊಲೀಸ್ ಇಲಾಖೆಯ ಮೂವರು ಅಮಾನತು

Last Updated 25 ಫೆಬ್ರುವರಿ 2023, 4:33 IST
ಅಕ್ಷರ ಗಾತ್ರ

ಬೆಂಗಳೂರು: ಯುವತಿಯೊಬ್ಬರ ಮೊಬೈಲ್‌ ಕರೆಗಳ ವಿವರವನ್ನು (ಸಿಡಿಆರ್) ಅಕ್ರಮವಾಗಿ ಸಂಗ್ರಹಿಸಿ ದುರುಪಯೋಗಪಡಿಸಿಕೊಂಡು ಕರ್ತವ್ಯಲೋಪ ಎಸಗಿದ್ದ ಪೊಲೀಸ್ ಇಲಾಖೆಯ ಮೂವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಬೆಂಗಳೂರು ಕೇಂದ್ರ ವಿಭಾಗದ ಸೂಪರಿಂಟೆಂಡೆಂಟ್ ಸುರೇಶ್, ಪೂರ್ವ ವಿಭಾಗದ ತಾಂತ್ರಿಕ ಘಟಕದ ಹೆಡ್‌ ಕಾನ್‌ಸ್ಟೆಬಲ್ ಸೋಮಶೇಖರ್ ಹಾಗೂ ಕಾನ್‌ಸ್ಟೆಬಲ್ ನಾಗರಾಜ್ ಅಮಾನತಾದವರು. ಯುವತಿ ನೀಡಿದ್ದ ದೂರಿನಡಿ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, ಮೂವರ ವಿರುದ್ಧ ಕಮಿಷನರ್ ಪ್ರತಾಪ್ ರೆಡ್ಡಿ ಅವರಿಗೆ ವರದಿ ಸಲ್ಲಿಸಿದ್ದರು. ಅದನ್ನು ಆಧರಿಸಿ ಮೂವರನ್ನೂ ಅಮಾನತುಗೊಳಿಸಿ, ಇತ್ತೀಚೆಗೆ ಆದೇಶ ಹೊರಡಿಸಲಾಗಿದೆ.

ಖಾಸಗಿ ವ್ಯಕ್ತಿಗಳ ಕೈಗೆ ಸಿಡಿಆರ್‌: ‘ಅಪರಾಧ ಚಟುವಟಿಕೆ ಮೇಲೆ ನಿಗಾ ಇರಿಸಲು ಹಾಗೂ ಕಾನೂನು ಪಾಲನೆ ಉದ್ದೇಶದಿಂದ ಆರೋಪಿತರ ಮೊಬೈಲ್ ಕರೆಗಳ ವಿವರಗಳನ್ನು (ಸಿಡಿಆರ್) ಸಂಗ್ರಹಿಸಲು ಬೆಂಗಳೂರಿನ ಎಲ್ಲ ವಿಭಾಗಗಳಲ್ಲಿ ಪ್ರತ್ಯೇಕ ತಾಂತ್ರಿಕ ಘಟಕವಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸೂಪರಿಂಟೆಂಡೆಂಟ್ ಸುರೇಶ್, ಈ ಹಿಂದೆ ಮಾಜಿ ಗೃಹ ಸಚಿವರೊಬ್ಬರ ಬಳಿ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು. ಖಾಸಗಿ ವ್ಯಕ್ತಿಯೊಬ್ಬರು ಯುವತಿಯೊಬ್ಬರ ಕರೆಗಳ ವಿವರ ಸಂಗ್ರಹಿಸಲು ಮುಂದಾಗಿದ್ದರು. ಇದಕ್ಕಾಗಿ ಸುರೇಶ್ ಅವರನ್ನು ಸಂಪರ್ಕಿಸಿದ್ದರು. ಆಪ್ತರಾಗಿದ್ದ ಸೋಮಶೇಖರ್ ಹಾಗೂ ನಾಗರಾಜ್‌ ಅವರಿಗೆ ವಿಷಯ ತಿಳಿಸಿದ್ದ ಸುರೇಶ್, ಸಿಡಿಆರ್‌ ನೀಡುವಂತೆ ಹೇಳಿದ್ದರು.’

‘ಸುರೇಶ್ ಮಾತಿಗೆ ಒಪ್ಪಿದ್ದ ಇಬ್ಬರೂ ಅಕ್ರಮವಾಗಿ ಸಿಡಿಆರ್ ತೆಗೆದು ಕೊಟ್ಟಿದ್ದರು. ಅದನ್ನೇ ಸುರೇಶ್, ಖಾಸಗಿ ವ್ಯಕ್ತಿಗೆ ನೀಡಿದ್ದರು. ಅದು ಗೊತ್ತಾಗುತ್ತಿದ್ದಂತೆ ಯುವತಿ, ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದರ ತನಿಖೆಯನ್ನು ಸಿಸಿಬಿಗೆ ವಹಿಸಲಾ
ಗಿತ್ತು. ಮೂವರ ಮೇಲಿನ ಆರೋಪ ಸಾಬೀತಾಗಿತ್ತು’ ಎಂದೂ ತಿಳಿಸಿದರು.

‘ತಾಂತ್ರಿಕ ಸಿಬ್ಬಂದಿ ಮೇಲೆ ನಿಗಾ’
‘ಪೊಲೀಸ್ ಇಲಾಖೆಯ ತಾಂತ್ರಿಕ ಘಟಕಗಳಲ್ಲಿ ಕೆಲಸ ಮಾಡುವ ಕೆಲವರು, ಅಕ್ರಮವಾಗಿ ಸಿಡಿಆರ್ ಸಂಗ್ರಹಿಸಿ ಬೇರೆಯವರಿಗೆ ಕೊಡುತ್ತಿರುವ ಮಾಹಿತಿ ಇದೆ. ಕೆಲವರು ಹಣಕ್ಕಾಗಿ ಈ ಕೃತ್ಯ ಎಸಗುತ್ತಿರುವುದು ಗೊತ್ತಾಗಿದೆ. ಸಿಬ್ಬಂದಿ ಮೇಲೆ ನಿಗಾ ಇರಿಸಲಾಗಿದೆ. ಸಿಕ್ಕಿಬಿದ್ದರೆ, ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT