ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ವಿರುದ್ಧ ಮಹಿಳೆಯರ ಪ್ರತಿಭಟನೆ

Last Updated 24 ಜನವರಿ 2020, 22:47 IST
ಅಕ್ಷರ ಗಾತ್ರ

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ವಿರೋಧಿಸಿ ನಗರದಲ್ಲಿ ನಡೆಯುತ್ತಿರುವ ಹೋರಾಟಗಳು ಮುಂದುವರಿದಿವೆ. ಮುಸ್ಲಿಂ ಸಮುದಾಯದ ನೂರಾರು ಮಹಿಳೆಯರು ಶುಕ್ರವಾರ ಬೃಹತ್ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಫ್ರೇಜರ್ ಟೌನ್‌ನ ಎಂ.ಎಂ. ರಸ್ತೆಯಲ್ಲಿ ಗುರುವಾರ ರಾತ್ರಿಯಿಂದಲೇ ಮಹಿಳೆಯರು ಪ್ರತಿಭಟನೆ ಆರಂಭಿಸಿದ್ದರು. ಶುಕ್ರವಾರ ಮತ್ತಷ್ಟು ಮಹಿಳೆಯರು ಪ್ರತಿಭಟನೆಗೆ ಸಾಥ್ ನೀಡಿದರು.

‘ಸಿಎಎ ಹಾಗೂ ಎನ್‌ಆರ್‌ಸಿ ಬೇಡವೇ ಬೇಡ’, ‘ಸಿಎಎ ತಿರಸ್ಕರಿಸಿ’, ‘ಸಂವಿಧಾನ ರಕ್ಷಿಸಿ’ ಹಾಗೂ ‘ದೇಶ ಒಡೆಯಬೇಡಿ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

‘ಸರ್ವ ಜನಾಂಗದ ಶಾಂತಿಯುತ ದೇಶ ನಮ್ಮದು. ಕೇಂದ್ರ ಸರ್ಕಾರ ಕಾಯ್ದೆ ತರುವ ಮೂಲಕ ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಿಸಲು ಹೊರಟಿದೆ’ ಎಂದು ಮಹಿಳೆಯರು ಆರೋಪಿಸಿದರು.

‘ಕಾಯ್ದೆ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ವಕೀಲರು, ಉದ್ಯಮಿಗಳು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸುತ್ತಿದ್ದಾರೆ. ಅಷ್ಟಾದರೂ ಕೇಂದ್ರ ಸರ್ಕಾರ ಕಾಯ್ದೆಯನ್ನು ಹಿಂಪ‍ಡೆಯುತ್ತಿಲ್ಲ. ಇದರ ಹಿಂದೆ ದೇಶವನ್ನು ಒಡೆದು ಆಳುವ ವ್ಯವಸ್ಥಿತ ಸಂಚು ಇರುವಂತೆ ಕಾಣುತ್ತಿದೆ’ ಎಂದು ಆರೋಪಿಸಿದರು.

‘ದೇಶವನ್ನು ಉಳಿಸಲು ಹಾಗೂ ಸಂವಿಧಾನವನ್ನು ರಕ್ಷಿಸಿ ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದೇವೆ. ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದರು.

‘ಸಿಎಎ: ಅರ್ಜಿ ಪರಿಗಣಿಸಿ’
ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸಲು ಅನುಮತಿ ಕೋರಿರುವ ‘ಬಿಡುಗಡೆಯ ಚಿರತೆಗಳು ಕರ್ನಾಟಕ ಸಂಘಟನೆ’ ಅರ್ಜಿಯನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸಿ ಎಂದು ಹೈಕೋರ್ಟ್, ನಗರ ಪೊಲೀಸರಿಗೆ ಸೂಚಿಸಿದೆ.

ಈ ಕುರಿತಂತೆ ಸಂಘಟನೆಯ ಕಾರ್ಯಾಧ್ಯಕ್ಷ ನಜೀಬ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಅರ್ಜಿದಾರರು ಪ್ರತಿಭಟನೆಗೆ ಅನುಮತಿ ಕೋರಿ ಇದೇ 20ರಂದು ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ’ ಎಂದು ಆಕ್ಷೇಪಿಸಿದರು.

ಇದಕ್ಕೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ, ‘ಗಣರಾಜ್ಯೋತ್ಸವ ಪ್ರಯುಕ್ತ ನಗರೆದೆಲ್ಲೆಡೆ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಅಂತೆಯೇ, ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನವೂ ನಡೆಯುತ್ತಿದೆ. ಹೀಗಾಗಿ ಜನಸಂದಣಿ ಪ್ರದೇಶಕ್ಕೆ ಹೊಂದಿರುವ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದರೆ ತೊಂದರೆ ಎದುರಾಗುವ ಸಾಧ್ಯತೆ ಇದೆ’ ಎಂದರು.

‘ಪೊಲೀಸರು ಅರ್ಜಿದಾರರ ಮನವಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT