ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸದ ಸ್ಥಳದಲ್ಲಿ ವಿಶ್ರಾಂತಿ ಕೊಠಡಿ ಅಗತ್ಯ: ಶಾಲಿನಿ ರಜನೀಶ್ ಅಭಿಮತ

ಮಹಿಳಾ ದಿನಾಚರಣೆ ಕಾರ್ಯಕ್ರದಲ್ಲಿ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್ ಅಭಿಮತ
Published 19 ಮಾರ್ಚ್ 2024, 15:31 IST
Last Updated 19 ಮಾರ್ಚ್ 2024, 15:31 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಲಸದ ಸ್ಥಳದಲ್ಲಿ ಮಹಿಳಾ ನೌಕರರು ವಿವಿಧ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅವರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಹಾಗೂ ಶೌಚಾಲಯ ನಿರ್ಮಿಸಿಕೊಡುವ ಕೆಲಸವಾಗಬೇಕು’ ಎಂದು ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್ ಹೇಳಿದರು. 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 

‘ಸರ್ಕಾರಿ ನೌಕರರಲ್ಲಿ ಶೇ 42ರಷ್ಟು ಮಂದಿ ಮಹಿಳೆಯರಿದ್ದಾರೆ. ಆದ್ದರಿಂದ ಅವರ ಸಮಸ್ಯೆಯನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಗರ್ಭಿಣಿಯರು, ಬಾಣಂತಿಯರು, ತಡರಾತ್ರಿ ಕೆಲಸ ಮಾಡುವ ಮಹಿಳೆಯರು ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲಸದ ಒತ್ತಡದಿಂದ ಹೊರಬರಲು ಪ್ರತ್ಯೇಕ ಶೌಚಾಲಯ ಹೊಂದಿದ ವಿಶ್ರಾಂತಿ ಕೊಠಡಿ ಸಹಕಾರಿಯಾಗಲಿದೆ. ಇಲ್ಲವಾದಲ್ಲಿ ಒತ್ತಡ ನಿರ್ವಹಿಸಲು ಸಾಧ್ಯವಾಗದೆ, ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳ ನೆರವಿನಿಂದ ವಿವಿಧ ಕಚೇರಿಗಳು ಹಾಗೂ ಉದ್ಯೋಗ ಸ್ಥಳದಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಲಾಗುತ್ತಿದೆ. ಅವುಗಳನ್ನು ಸಮಪರ್ಕಕವಾಗಿ ನಿರ್ವಹಿಸಬೇಕು’ ಎಂದು ಹೇಳಿದರು. 

‘ಭಾರತೀಯ ಆಡಳಿತಾತ್ಮಕ ಸೇವೆಗೆ (ಐಎಎಸ್) ನಾನು ಬರುವ ವೇಳೆಗೆ ಐಎಎಸ್ ಅಧಿಕಾರಿಗಳಲ್ಲಿ ಶೇ 10ರಷ್ಟು ಮಾತ್ರ ಮಹಿಳೆಯರಿದ್ದರು. ಈಗ ಕರ್ನಾಟಕದ ಐಎಎಸ್ ಅಧಿಕಾರಿಗಳಲ್ಲಿಯೇ ಶೇ 30ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರಲ್ಲಿ ಸಹಿಷ್ಣುತೆ, ಮಮತೆ, ಕರುಣೆಯಂತಹ ಗುಣಗಳು ಸ್ವಾಭಾವಿಕವಾಗಿ ಇರುತ್ತವೆ. ಇಂತಹ ಗುಣಗಳನ್ನು ಎಲ್ಲ ಸರ್ಕಾರಿ ನೌಕರರು ಅಳವಡಿಸಿಕೊಳ್ಳಬೇಕು. ಸರ್ಕಾರಿ ನೌಕರರೆಂದರೆ ಸೋಮಾರಿಗಳು, ಲಂಚ ಕೇಳುವವರು ಎಂಬ ಮನೋಭಾವ ಕೆಲವರಲ್ಲಿದೆ. ನೌಕರರಲ್ಲಿ ಕೆಲವರು ಮಾಡುವ ತಪ್ಪಿನಿಂದ ಇಡೀ ನೌಕರರ ಸಮಾಜಕ್ಕೆ ಕೆಟ್ಟ ಹೆಸರು ಬರಬಾರದು’ ಎಂದು ತಿಳಿಸಿದರು. 

ಆರ್ಥಿಕ ದೌರ್ಜನ್ಯ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತೆ ಬಿ.ಬಿ. ಕಾವೇರಿ, ‘ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಭ್ರೂಣ ಹತ್ಯೆಯಂತಹ ಕೃತ್ಯಗಳು ಈಗಲೂ ನಡೆಯುತ್ತಿರುವುದು ವಿಪರ್ಯಾಸ. ಆಸ್ತಿಯಲ್ಲಿ ಸಮಪಾಲನ್ನು ನೀಡದಿರುವುದು, ಮಹಿಳೆಯ ಹೆಸರಿನಲ್ಲಿ ಸಾಲ ಪಡೆದು ವಂಚಿಸುವುದೂ ಸೇರಿ ವಿವಿಧ ಆರ್ಥಿಕ ದೌರ್ಜನ್ಯಗಳನ್ನು ವಿರೋಧಿಸಬೇಕು. ಶಿಕ್ಷಕರು, ಅಂಗನವಾಡಿ ಹಾಗೂ ಬಿಸಿಯೂಟದ ನೌಕರರಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದರೂ ಅವರ ಸಮಸ್ಯೆಗಳ ಬಗ್ಗೆ ಈಗಲೂ ಪುರುಷರೇ ಬಂದು ಮಾತನಾಡುತ್ತಾರೆ. ಮಹಿಳೆಯರು ಸಂಘಟಿತರಾಗಬೇಕು’ ಎಂದು ಹೇಳಿದರು. 

ಪಂಚಾಯತ್ ರಾಜ್ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ‘ಬಟ್ಟೆ, ವೇತನ ಸೇರಿ ವ್ಯಕ್ತಿತ್ವದ ಬಗ್ಗೆ ನಮ್ಮದೇ ಚಿಂತನೆ ಮಾಡಿ, ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇರಬೇಕು. ಸರ್ಕಾರಿ ನೌಕರರು ಬೇರೆಯವರಿಗೆ ಮಾದರಿಯಾಗಿ ಕೆಲಸ ಮಾಡಬೇಕು. ಕೂಸಿನ ಮನೆಯಂತಹ (ಶಿಶುಪಾಲನಾ ಕೇಂದ್ರ) ಯೋಜನೆಗಳು ಸಮಾನತೆ ತರಲು ಸಹಕಾರಿಯಾಗಿವೆ’ ಎಂದು ತಿಳಿಸಿದರು. 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT