ಭಾನುವಾರ, ಅಕ್ಟೋಬರ್ 2, 2022
28 °C
‘ಮಹಿಳೆ ಮತ್ತು ಕಾಯಕ-–ಕಾಣದ ಕೆಲಸ, ಕೇಳದ ಕಥೆ’ ಸಮಾವೇಶದಲ್ಲಿ ಆರ್ಥಿಕ ತಜ್ಞೆ ಜಯಾ ಮೆಹ್ತಾ ಅಭಿಪ್ರಾಯ

‘ಮಹಿಳೆಯರ ಆರ್ಥಿಕ ಪರಿಸ್ಥಿತಿ ಇನ್ನೂ ಚಿಂತಾಜನಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸದಂತಹ ಸಮಾಜ ನಿರ್ಮಾಣ ಆಗಬೇಕು’ ಎಂದು ಆರ್ಥಿಕ ತಜ್ಞೆ ಜಯಾ ಮೆಹ್ತಾ ತಿಳಿಸಿದರು.

ಪವಿತ್ರ ಆರ್ಥಿಕತೆಯ ಸತ್ಯಾಗ್ರಹದ ಅಂಗವಾಗಿ ಗ್ರಾಮ ಸೇವಾ ಸಂಘ ಹಾಗೂ ಸೆಂಟರ್ ಫಾರ್ ಬಜೆಟ್ ಅಂಡ್ ಪಾಲಿಸಿ ಸ್ಟಡೀಸ್ ಸಹಯೋಗದಲ್ಲಿ ‘ಮಹಿಳೆ ಮತ್ತು ಕಾಯಕ-ಕಾಣದ ಕೆಲಸ, ಕೇಳದ ಕಥೆ’ ಕುರಿತು ಶನಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಶಾಹಿನ್‌ಬಾಗ್‌ನ ಮುಸ್ಲಿಂ ಮಹಿಳೆಯರು ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಹೋರಾಡುತ್ತಾ ಇಡೀ ದೇಶವೇ ಮಾತನಾಡುವಂತೆ ಮಾಡಿದ್ದಾರೆ. ಆದರೆ, ದೇಶದಲ್ಲಿ ಮಹಿಳೆಯರ ಆರ್ಥಿಕ ಪರಿಸ್ಥಿತಿ ಇನ್ನೂ ಚಿಂತಾಜನಕ. ಮಹಿಳೆಯರಿಗೆ ತಮ್ಮ ಹಕ್ಕುಗಳು ಸಿಗದಂತೆ ಹುನ್ನಾರಗಳು ನಡೆಯುತ್ತಿವೆ. ಈ ವ್ಯವಸ್ಥೆ ಬದಲಾಗಬೇಕು’ ಎಂದರು.

‘ದೇಶದ ಆರ್ಥಿಕ ಪರಿಸ್ಥಿತಿ ಅಸಮಾನತೆ ತಂದೊಡ್ಡಿದೆ. ಶೇ 70ರಷ್ಟು ಆರ್ಥಿಕತೆ ಹಾಗೂ ಸಂಪನ್ಮೂಲ ಕೇವಲ ಶೇ 3ರಷ್ಟು ಜನರ ಕೈಯಲ್ಲಿದೆ. ಇವರು ರಾಜಕೀಯ, ಆರ್ಥಿಕತೆ, ಸಾಮಾಜಿಕತೆ ಹಾಗೂ ಮಾರುಕಟ್ಟೆ ವ್ಯವಸ್ಥೆ ನಿರ್ಧರಿಸಬಲ್ಲರು. ಬಡತನ ನಿರ್ಮೂಲನೆಗೆ ಇವರು ಯಾವುದೇ ಯೋಜನೆ ರೂಪಿಸುವುದಿಲ್ಲ’ ಎಂದು ದೂರಿದರು.

ಹಿರಿಯ ರಾಜಕಾರಣಿ ಮೋಟಮ್ಮ, ‘ಮಹಿಳೆಯರು ಎಲ್ಲ ರಂಗದಲ್ಲೂ ಇಂದು ಬಾನೆತ್ತರಕ್ಕೆ ಬೆಳೆದಿದ್ದಾರೆ. ಕೌಟುಂಬಿಕ ಹಾಗೂ ಸಾಮಾಜಿಕ ಹೊಣೆಗಾರಿಕೆ ಎಂಬ ಎರಡೂ ಪಾತ್ರಗಳನ್ನು ಸಮತೋಲಿತವಾಗಿ ತೂಗುತ್ತಾರೆ. ಆದರೂ, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಕೌಟುಂಬಿಕ ವ್ಯವಸ್ಥೆಯ ಭಾವನಾತ್ಮಕ ಬಲೆಯಲ್ಲಿ ಸಿಲುಕಿರುವ ಮಹಿಳೆಯರು, ಭಾವನೆಗಳನ್ನು ಬದಿಗಿಟ್ಟು, ಬಲೆಯಿಂದ ಹೊರಬರಬೇಕು’ ಎಂದರು.

ಲೇಖಕಿ ಎಚ್.ಎಸ್.ಅನುಪಮಾ, ‘ನಾವು ಹೆಣ್ಣಿಗೆ ಕಿರೀಟ ಮುಡಿಗೇರಿಸಿದ್ದೇವೆ. ಕಿರೀಟದೊಳಗಿನ ಮುಳ್ಳು ಚುಚ್ಚುತ್ತಿದ್ದರೂ, ಆ ದೌರ್ಜನ್ಯ ಯಾರ ಕಣ್ಣಿಗೂ ಕಾಣುವುದಿಲ್ಲ’ ಎಂದರು.

‘ರಾಕ್ಷಸ ಆರ್ಥಿಕತೆ’
‘ಉದಾರೀಕರಣದ ಬಳಿಕ ದೇಶದ ಆರ್ಥಿಕತೆಯ ಹಾದಿ ಮೊದಲಿಗೆ ಸುಗಮವಾದರೂ, ಇಂದು ರಾಕ್ಷಸ ರೂಪ ತಾಳಿದೆ. ವಿದೇಶಿ ಸಂಸ್ಥೆಗಳ ಹೂಡಿಕೆ ಮೇಲೆ ದೇಶ ಬಲವಾಗಿ ಅವಲಂಬಿಸಿದೆ. ಆಟೊಮೋಬೈಲ್ ಕ್ಷೇತ್ರ ಪೂರ್ಣ ನಲುಗಿದೆ. ಈ ದೈತ್ಯ ಆರ್ಥಿಕತೆ ಸಂಪೂರ್ಣ ಪುನರ್‌ರಚನೆಯಾಗಬೇಕು’ ಎಂದು ಜಯಾ ಮೆಹ್ತಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು