ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಚಿತ್ರೋತ್ಸವದಲ್ಲಿ ಮಹಿಳಾ ಧ್ವನಿ

Published 26 ಫೆಬ್ರುವರಿ 2024, 23:30 IST
Last Updated 26 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಫೆ.29ರಂದು ಉದ್ಘಾಟನೆಗೊಳ್ಳಲಿದ್ದು, ಈ ಬಾರಿಯ ಚಿತ್ರೋತ್ಸವದಲ್ಲಿ ಮಹಿಳಾ ಧ್ವನಿಗೆ ಆದ್ಯತೆ ದೊರಕಿದೆ. ಚಿತ್ರ ನಿರ್ಮಾಣದಲ್ಲಿ ಮಹಿಳೆಯರ ಶಕ್ತಿ ವಿಭಾಗದಡಿ ಮಹಿಳೆಯರು ನಿರ್ದೇಶಿಸಿದ 10 ಸಿನಿಮಾಗಳು ಈ ಬಾರಿ ಪ್ರದರ್ಶನಗೊಳ್ಳಲಿವೆ. ನಿರ್ದೇಶಕಿಯರ ಜೊತೆಗೆ ಲೇಖಕಿಯರ ಸಂಘದ ಸಂವಾದ, ಚರ್ಚೆಯೂ ಈ ವರ್ಷದ ವಿಶೇಷಗಳಲ್ಲಿ ಒಂದಾಗಿದೆ.    

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿತ್ರೋತ್ಸವ ಸಮಿತಿಯ ಅಧ್ಯಕ್ಷ ಕೆ.ವಿ. ತ್ರಿಲೋಕ್‌ ಚಂದ್ರ, ‘ವಿಧಾನಸೌಧದ ಮುಂಭಾಗ ಫೆ.29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ‘ಸಿಂಹಾಸನ್‌’, ‘ಸಾಮ್ನಾ’, ‘ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌’ ಸಿನಿಮಾ ಖ್ಯಾತಿಯ ನಿರ್ದೇಶಕ ಜಬ್ಬಾರ್‌ ಪಟೇಲ್‌, ನಟ ಶಿವರಾಜ್‌ಕುಮಾರ್‌, ಬಾಂಗ್ಲಾದೇಶದ ನಟಿ ಅಜಮೇರಿ ಬಂದೋನ್‌ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಬಾರಿ 50ಕ್ಕೂ ಅಧಿಕ ದೇಶಗಳ 185 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕನ್ನಡ ಚಿತ್ರರಂಗ 90 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮತ್ತು ಕರ್ನಾಟಕದ 50 ವರ್ಷಗಳ ಸಂಭ್ರಮದಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ 30 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ’ ಎಂದು ಮಾಹಿತಿ ನೀಡಿದರು.

‘ಈ ಋತುವಿನ ಭಾರತದ ಯಾವುದೇ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣದ 30ಕ್ಕೂ ಅಧಿಕ ಭಾರತೀಯ ಸಿನಿಮಾಗಳು ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಾಣಲಿವೆ. ಈ ಬಾರಿಯ 21 ತೀರ್ಪುಗಾರರ ಪೈಕಿ 9 ಮಹಿಳೆಯರಿದ್ದರು. ಇವರಲ್ಲಿ ಹಲವರು ವಿದೇಶದವರು. ಜೊತೆಗೆ ಈ ಬಾರಿಯ ವಿಚಾರ ಸಂಕಿರಣಗಳು, ಸಂವಾದ, ಉಪನ್ಯಾಸ, ಕಾರ್ಯಾಗಾರಗಳಲ್ಲಿ ಸಿನಿಮಾ ರಂಗದಲ್ಲಿ ಇರುವ 52ಕ್ಕೂ ಅಧಿಕ ಮಹಿಳೆಯರು ಭಾಗವಹಿಸಲಿದ್ದಾರೆ. ‘ಭಾರತೀಯ ಸಾಂವಿಧಾನಿಕ ಮೌಲ್ಯಗಳು ಮತ್ತು ಭಾರತೀಯ ಸಿನಿಮಾ’ ಎಂಬ ವಿಷಯದಡಿ ನಿರ್ದೇಶಕ ಜಬ್ಬಾರ್‌ ಪಟೇಲ್‌ ಉಪನ್ಯಾಸ ನೀಡಲಿದ್ದಾರೆ’ ಎಂದು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್‌.ವಿದ್ಯಾಶಂಕರ್‌ ತಿಳಿಸಿದರು. 

‘ಈಗಾಗಲೇ 2 ಸಾವಿರ ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದು, ಒರಾಯನ್‌ ಮಾಲ್‌, ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಡಾ.ರಾಜ್‌ಕುಮಾರ್‌ ಭವನ ಹಾಗೂ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಸಿನಿಮಾ ಅಕಾಡೆಮಿಯಲ್ಲಿ ಸಿನಿಮಾ ಪ್ರದರ್ಶನಗಳು ನಡೆಯಲಿವೆ’ ಎಂದು ಸಮಿತಿಯ ಉಪಾಧ್ಯಕ್ಷ ಹೇಮಂತ ಎಂ. ನಿಂಬಾಳ್ಕರ್‌ ತಿಳಿಸಿದರು.    

ತಲಾ 12 ಚಿತ್ರಗಳು: ಚಿತ್ರೋತ್ಸವದಲ್ಲಿ ಏಷ್ಯನ್‌, ಚಿತ್ರಭಾರತಿ ಹಾಗೂ ಕನ್ನಡ ಸಿನಿಮಾ ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳಿದ್ದು, ಪ್ರತಿ ವಿಭಾಗದಲ್ಲಿ 12 ಚಿತ್ರಗಳು ನಾಮನಿರ್ದೇಶನಗೊಂಡಿವೆ. ಈ ಪೈಕಿ ಸುಮಂತ್‌ ಭಟ್‌ ನಿರ್ದೇಶನದ ‘ಮಿಥ್ಯ’ ಏಷ್ಯನ್‌ ವಿಭಾಗದಲ್ಲಿ ಹಾಗೂ ಶಿಶಿರ್‌ ರಾಜಮೋಹನ್‌ ನಿರ್ದೇಶನದ ‘ಆಬ್ರಕಡಾಬ್ರ’ ಸಿನಿಮಾ ಚಿತ್ರಭಾರತಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.    


  • ಚಿತ್ರೋತ್ಸವದ ವಿಶೇಷಗಳು 

  •  ಉದ್ಘಾಟನೆಗೆ ಮೊದಲು ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್‌ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ 

  •  ಉದ್ಘಾಟನಾ ಚಿತ್ರವಾಗಿ ಸ್ವಿಡ್ಜರ್ಲೆಂಡ್‌ನಲ್ಲಿನ ಅಧಿಕೃತ ಭಾಷೆಗಳ ಕುರಿತು ನಿರ್ಮಿಸಲಾಗಿರುವ ಹಾಸ್ಯಮಯ ಚಿತ್ರ ‘ಬೋಂಜೂರ್‌ ಸ್ವಿಡ್ಜರ್ಲೆಂಡ್‌’ ಪ್ರದರ್ಶನ

  •  ಜರ್ಮನಿಯ ಹೆಚ್ಚಿನ ಚಿತ್ರಗಳ ಪ್ರದರ್ಶನ 

  • ತುಳು, ಕೊಡವ, ಬಂಜಾರ, ಅರೆಭಾಷೆ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳ 9 ಸಿನಿಮಾಗಳ ಪ್ರದರ್ಶನ 

  •  ಲೀಲಾವತಿ, ಭಗವಾನ್‌, ಸಿ.ವಿ.ಶಂಕರ್‌, ವಾಣಿ ಜಯರಾಂ ಗೌರವಾರ್ಥ ಅವರ ಚಲನಚಿತ್ರಗಳ ಪ್ರದರ್ಶನ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT