ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ಕೆರೆಗಳ ಅಭಿವೃದ್ಧಿಗೆ ಅಮೃತ ಸಿಂಚನ: ಅಭಿವೃದ್ಧಿಗೊಂಡ ಕೆರೆಗಳಲ್ಲಿ ಮತ್ತೆ ಕೆಲಸ!

₹200 ಕೋಟಿ ಅನುದಾನದಲ್ಲಿ ಬಾಕಿ ಕಾಮಗಾರಿಗೇ ಹೆಚ್ಚು ವ್ಯಯ l ಹೊಸ ಕೆರೆಗಳ ಆಯ್ಕೆಯಲ್ಲಿ ಗೊಂದಲ
Last Updated 6 ಅಕ್ಟೋಬರ್ 2022, 12:31 IST
ಅಕ್ಷರ ಗಾತ್ರ

ಬೆಂಗಳೂರು: ‘ಅಮೃತ್‌ ನಗರೋತ್ಥಾನ’ ಯೋಜನೆ ಅನುದಾನದಲ್ಲಿ ಬಿಬಿಎಂಪಿ ವ್ಯಾಪ್ತಿಯ 21 ಕೆರೆಗಳಿಗೆ ಪುನಶ್ಚೇತನದ ಭಾಗ್ಯ ಸಿಗಲಿದೆ. ಜೊತೆಗೆ ಈ ಹಿಂದೆ ಅಭಿವೃದ್ಧಿ ಕಂಡಿದ್ದು, ಬಾಕಿ ಉಳಿದಿರುವ ಕೆರೆಗಳ ಕಾಮಗಾರಿಗೂ ಹಣ ವೆಚ್ಚವಾಗಲಿದೆ. ಒಟ್ಟಾರೆ ₹200 ಕೋಟಿ ಪ್ರಥಮ ಹಂತದಲ್ಲೇ ವ್ಯಯವಾಗಲಿದೆ.

ಸಮಗ್ರ ಅಭಿವೃದ್ಧಿಗೆ ಬಹುತೇಕ ಕಡಿಮೆ ವ್ಯಾಪ್ತಿಯ ಕೆರೆಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸಮಗ್ರ ಅಭಿವೃದ್ಧಿಗೆ ₹97.3 ಕೋಟಿ ವ್ಯಯ ಮಾಡಲುಯೋಜನಾ ಪಟ್ಟಿ ತಯಾರಿಸಲಾಗಿದೆ. ಇನ್ನುಳಿದಂತೆ 47 ಕಾಮಗಾರಿಗಳಿಗೆ ಬಹುತೇಕ ₹103 ಕೋಟಿ ಹಣ ವೆಚ್ಚ ಮಾಡಲಾಗುತ್ತಿದೆ. ಕೆಲವು ಕಡೆ ಸಮಗ್ರ ಅಭಿವೃದ್ಧಿ ಮತ್ತು ಕೆಲವು ಕಡೆ ಅಭಿವೃದ್ಧಿ ಕಾಮಗಾರಿ ಎಂದು ಪಟ್ಟಿಯಲ್ಲಿ ಕಾಮಗಾರಿಗಳು ಪುನರಾವರ್ತನೆಯಾಗಿವೆ. ಎಷ್ಟು ಹೊಸ ಕೆರೆಗಳ ಪುನಶ್ಚೇತನ ಆಗುತ್ತದೆ ಎಂಬ ಗೊಂದಲವಿದೆ. ಹೀಗಾಗಿ, ಅಭಿವೃದ್ಧಿಯಾಗಿರುವ ಕೆರೆಗಳಿಗೇ ಮತ್ತಷ್ಟು ಹಣ ವ್ಯಯ ಮಾಡಲು ಮುಂದಾಗಿರುವುದು ಪರಿಸರ ಆಸಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಲವು ವರ್ಷಗಳ ಹಿಂದಷ್ಟೇ ಅಭಿವೃದ್ಧಿಯಾಗಿರುವ ಕೆರೆಗಳಲ್ಲಿಯೇ ಮತ್ತಷ್ಟು ಕಾಮಗಾರಿಗಳಿಗೆ ಕೋಟ್ಯಂತರ ವೆಚ್ಚ ಮಾಡಲಾಗುತ್ತಿದೆ. ಒಂದು ಕೆರೆ ಅಭಿವೃದ್ಧಿಯಾದರೆ 3ರಿಂದ 5 ವರ್ಷ ನಿರ್ವಹಣೆ ವೆಚ್ಚವೂ ಆ ಯೋಜನೆಯಲ್ಲಿ ಸೇರಿರುತ್ತದೆ. ಇಷ್ಟಾದರೂ ಅಂತಹ ಕೆರೆಗಳಿಗೆ ಅಭಿವೃದ್ಧಿ ಅಥವಾ ಬಾಕಿ ಕಾಮಗಾರಿ ಎಂದು ವೆಚ್ಚ ಮಾಡುತ್ತಿರುವುದು ಅಸಮಾಧಾನ ತರಿಸಿದೆ.

ಬಿಬಿಎಂಪಿ ಪ್ರಕಾರ, ನಗರದಲ್ಲಿ 210 ಕೆರೆಗಳಿವೆ. ಹಿಂದೆ 79 ಕೆರೆಗಳು ಹಾಗೂ 39 ಕೆರೆಗಳು ಸಮಗ್ರ ಅಭಿವೃದ್ಧಿ ಕಂಡಿವೆ. ಇನ್ನು ಇದೀಗ 21 ಕೆರೆಗಳು ನಗರೋತ್ಥಾನ ಅನುದಾನದಿಂದ ಪುನಶ್ಚೇತನವಾಗಲಿವೆ. ಅಂದರೆ ಒಟ್ಟಾರೆ, 139 ಕೆರೆಗಳು ಅಭಿವೃದ್ಧಿಯಾದಂತೆ. ಈ ಸಂಖ್ಯೆಗೆ ಸಂಪೂರ್ಣ ಒತ್ತುವರಿಯಾಗಿದ್ದು, ಬಳಕೆಗೆ ಯೋಗ್ಯವಲ್ಲದ 19 ಕೆರೆಗಳೂ ಸೇರಿಕೊಳ್ಳುತ್ತವೆ.

‘ಬಿಬಿಎಂಪಿ ಕೇಂದ್ರ ಭಾಗಕ್ಕಿಂತ ಹೊರ ಭಾಗದಲ್ಲಿರುವ ಕೆರೆಗಳಲ್ಲೇ ‘ಅಮೃತ್‌ ನಗರೋತ್ಥಾನ ಯೋಜನೆ’ ಅನುದಾನವನ್ನು ವೆಚ್ಚಮಾಡಲು ಯೋಜನೆ ಮಾಡಲಾಗಿದೆ. ಅಭಿವೃದ್ಧಿಯನ್ನೇ ಕಾಣದ ಇನ್ನೂ 81 ಕೆರೆಗಳು ಬಿಬಿಎಂಪಿ ವ್ಯಾಪ್ತಿಯಲ್ಲೇ ಇವೆ. ಆದರೆ ಅವುಗಳನ್ನು ಕನಿಷ್ಠ ನೀರು ಸಂಗ್ರಹಕ್ಕೆ ಯೋಗ್ಯವನ್ನಾಗಿ ಮಾಡದೆ, ಅಭಿವೃದ್ಧಿ ಮಾಡಿರುವ ಕೆರೆಗಳಿಗೇ ಕೋಟ್ಯಂತರ ವೆಚ್ಚ ಮಾಡುತ್ತಿರುವುದು ಸರಿಯಲ್ಲ’ ಎಂದು ಫ್ರೆಂಡ್ಸ್ ಆಫ್‌ ಲೇಕ್ಸ್‌ನ ರಾಮ್‌ಪ್ರಸಾದ್‌ ದೂರಿದರು.

‘₹80 ಕೋಟಿ ವೆಚ್ಚದಲ್ಲಿ ಮಲ್ಲತಹಳ್ಳಿ ಕೆರೆ ಅಭಿವೃದ್ಧಿ ಮಾಡಿ ಅಲ್ಲಿ ರೈಲು ಬಿಡುವ ಯೋಜನೆಗೆ ಈಗಾಗಲೇ ಮುಖ್ಯಮಂತ್ರಿಯವರೂ ಚಾಲನೆ ನೀಡಿದ್ದಾರೆ. ಅದೇ ಕೆರೆಗೆ ಮತ್ತೆ ₹15 ಕೋಟಿಯನ್ನು ಈ ಅನುದಾನದಲ್ಲೂ ನೀಡಲಾಗುತ್ತಿದೆ. ಇದರ ಅಗತ್ಯವೇ ಇಲ್ಲ. ನಗರದಲ್ಲಿ ಹಲವು ಕೆರೆಗಳು ಸಾಯುವ ಸ್ಥಿತಿಯಲ್ಲಿವೆ. ಅವುಗಳನ್ನು ಉಳಿಸಿಕೊಳ್ಳುವತ್ತ ನಾವು ಯೋಜಿಸಬೇಕಿದೆ’ ಎಂದರು.

‘ಕೆರೆಗಳ ಕಾಮಗಾರಿಗಳಲ್ಲಿ ಬಹುತೇಕ ಎಲ್ಲದರಲ್ಲೂ ಪಾದಚಾರಿ ಮಾರ್ಗ ಅಭಿವೃದ್ಧಿ ಎಂದೇ ಇದೆ. ಅಂದರೆ ಈ ಮೊದಲಿನ ಅಭಿವೃದ್ಧಿ ಕಾಮಗಾರಿಗಳಲ್ಲಿ ಇದ್ದ ಕಾಮಗಾರಿಯೇ ಇದಾಗಿದೆ. ಈಗ ಅದೇ ಮಾರ್ಗಕ್ಕೆ ವೈಜ್ಞಾನಿಕವಾಗಿ ಅಗತ್ಯವಿಲ್ಲದ ಕಲ್ಲುಗಳ ಹಾಸನ್ನು ಹಾಕಲಾಗುತ್ತಿದೆ. ಇದೆಲ್ಲ ಅಗತ್ಯವಿಲ್ಲ’ ಎಂಬುದು ಪರಿಸರಕ್ಕಾಗಿ ಕೆಲಸ ಮಾಡುತ್ತಿರುವ ಪವಿತ್ರಾ ಅವರ ಮಾತು.

ಕ್ಷೇತ್ರವಾರು ಹಂಚಿಕೆ: ಕೆರೆಗಳ ಅಭಿವೃದ್ಧಿಗಾಗಿ ಸರ್ಕಾರ ಅನುಮೋದಿಸಿರುವ ಹಣವನ್ನು ವಿಧಾನಸಭೆ ಕ್ಷೇತ್ರವನ್ನು ಹಂಚಿಕೆ ಮಾಡಿಕೊಂಡಿರುವುದು ಕೂಡ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರು ದಕ್ಷಿಣ, ಕೆ.ಆರ್‌. ಪುರ, ಯಶವಂತರಪುರ, ಬೊಮ್ಮನಹಳ್ಳಿ, ಮಹದೇವಪುರ ವಿಧಾನಸಭೆ ಕ್ಷೇತ್ರದ ಕೆರೆಗಳ ಕಾಮಗಾರಿಗೆ ಎಂದು ₹60 ಲಕ್ಷದಿಂದ ₹1 ಕೋಟಿವರೆಗೆ ಹಂಚಿಕೆಯಾಗಿದೆ. ಯಾವ ಕೆರೆಗಳು, ಯಾವ ಕಾಮಗಾರಿ ಎಂಬುದನ್ನು ತೋರಿಸಿಲ್ಲ. ಅದೂ ಅಲ್ಲದೆ, ನಗರೋತ್ಥಾನ ಅನುದಾನವನ್ನು ಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೆ ಮಾತ್ರ ಈ ರೀತಿ ಹಂಚಿಕೆ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಸೌಂದರ್ಯೀಕರಣಕ್ಕೆ ದುಂದುವೆಚ್ಚ

ಬೆಂಗಳೂರಿನಲ್ಲಿ ಕೆರೆಗಳ ಅಭಿವೃದ್ಧಿಗೆ ಹಣ ಇಲ್ಲ ಎಂಬ ಮಾತಿತ್ತು. ಇದೀಗ ಹೆಚ್ಚು ಹಣ ಬರುತ್ತಿದೆ. ಆದರೆ ಬೇಕಾದ ಕಾಮಗಾರಿಗೆ ಹಣ ವ್ಯಯ ಮಾಡದೆ, ಅಭಿವೃದ್ಧಿ ಕಂಡಿರುವ ಕೆರೆಗಳ ಸೌಂದರ್ಯ ಕಾಮಗಾರಿಗಳಿಗೇ ವೆಚ್ಚ ಮಾಡಲಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ದೂರುತ್ತಿದ್ದಾರೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿಯ ಕುರುಹನ್ನೇ ಕಾಣದಿರುವ ಕೆರೆಗಳಿವೆ. ಈಗ ಇವರು ಹೇಳುತ್ತಿರುವ 21 ಹೊಸ ಕೆರೆಗಳ ಅಭಿವೃದ್ಧಿ ಹೊರತಾಗಿಯೂ ಪುನಶ್ಚೇತನ ಕಾಣಬೇಕಿರುವ ಕೆರೆಗಳ ಸಂಖ್ಯೆ ಸಾಕಷ್ಟಿದೆ. ಕೆರೆಗಳ ಸೌಂದರ್ಯೀಕರಣ ಕಾಮಗಾರಿ ಮಾಡಲಿ, ಬೇಡ ಅನ್ನುವುದಿಲ್ಲ. ಆದರೆ, ಕೆರೆಗೆ ಬೇಕಿರುವ ಕನಿಷ್ಠ ಕಾಮಗಾರಿಗಳು ಇವರೇ ಗುರುತಿಸಿರುವ 210 ಕೆರೆಗಳಲ್ಲೂ ಆದ ಮೇಲೆ ಅಲಂಕಾರ ಸಾಮಗ್ರಿಗಳನ್ನು ತಂದಿಡಲಿ’ ಎನ್ನುತ್ತಾರೆ ಫ್ರೆಂಡ್ಸ್ ಆಫ್‌ ಲೇಕ್ಸ್‌ನ ರಾಮ್‌ಪ್ರಸಾದ್‌.

‘ಕೆರೆಗಳು ಮಳೆ ನೀರನ್ನು ಹಿಡಿದಿಟ್ಟುಕೊಳ್ಳಬೇಕು. ನೀರನ್ನು ಇಂಗಿಸಿಕೊಳ್ಳಬೇಕು. ಒಳಚರಂಡಿ ನೀರು ಹರಿಯಬಾರದು. ಬೇಲಿ ಕಾಣಬೇಕು. ಹೂಳು ಹೊರಹೋಗಬೇಕು. ಏರಿ ಭದ್ರಪಡಿಸಲಿ. ಇಷ್ಟು ಕೆಲಸವನ್ನು ಎಲ್ಲ ಕೆರೆಗಳಲ್ಲೂ ಮಾಡಿದ ಮೇಲೆ ನಂತರದ ಕಾಮಗಾರಿ ಮಾಡಲಿ’ ಎಂದರು.

ಎರಡು ತಿಂಗಳಲ್ಲಿ ಕಾಮಗಾರಿ ಆರಂಭ

ಅಮೃತ್‌ ನಗರೋತ್ಥಾನ ಅನುದಾನದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 68 ಕೆರೆ ಕಾಮಗಾರಿಗಳನ್ನು ಕೈಗೊಂಡಿದ್ದೇವೆ. ಇದರಲ್ಲಿ 21 ಕೆರೆಗಳನ್ನು ಹೊಸದಾಗಿ ಅಭಿವೃದ್ಧಿ ಮಾಡುತ್ತಿದ್ದೇವೆ. ಕೆರೆಗಳಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಹಾಗೂ ಅಂದಾಜು ವೆಚ್ಚ ತಯಾರಿಸಲಾಗುತ್ತಿದೆ. ಕೆಲವು ಕೆರೆಗಳ ಡಿಪಿಆರ್‌ ಸಿದ್ಧವಾಗಿದೆ. ಅದಕ್ಕೆ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಇಲಾಖೆ (ಕೆಎಲ್‌ಸಿಡಿಎ) ಅನುಮೋದನೆ ನೀಡಿದೆ. ಇನ್ನುಳಿದ ಕೆರೆಗಳ ಡಿಪಿಆರ್‌ ಅನ್ನು ನಾಗರಿಕರ ಸಲಹೆ ಪಡೆದು ಸಿದ್ಧಪಡಿಸುತ್ತೇವೆ. ನಂತರ ಟೆಂಡರ್‌ ಪ್ರಕ್ರಿಯೆಯನ್ನು ಒಂದು ತಿಂಗಳಲ್ಲಿ ಮುಗಿಸಿ, ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್‌ ಮೋಹನ್‌ಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT