ಗುರುವಾರ , ಆಗಸ್ಟ್ 5, 2021
21 °C

ಕಾಮಗಾರಿ ನಡೆಸದೆಯೇ ಬಿಲ್‌ ಪಾವತಿ: ಬಿಜೆಪಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗಾಂಧಿನಗರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್‌ಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಅಕ್ರಮ ನಡೆದಿದೆ. ₹ 450 ಕೋಟಿಗಳಷ್ಟು ಸಾರ್ವಜನಿಕ ಹಣ ಲೂಟಿಯಾಗಿದೆ’ ಎಂದು ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲೆ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಆರೋಪಿಸಿದರು.

‘ಈ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ 2015-16 ರಿಂದ 2020ರ ನವೆಂಬರ್‌ವರೆಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಬಿಬಿಎಂಪಿಯ ವಿವಿಧ ಅನುದಾನಗಳಿಂದ ಒಟ್ಟು ₹ 640.23 ಕೋಟಿ ಬಿಡುಗಡೆಯಾಗಿದೆ. 2019-20ರಲ್ಲಿ ಮತ್ತು 2020-21ರ ಮೊದಲ ಆರು ತಿಂಗಳುಗಳಲ್ಲಿ ಗಾಂಧೀನಗರಕ್ಕೆ ₹ 252.23 ಕೋಟಿ ಬಿಡುಗಡೆ ಮಾಡಲಾಗಿದೆ. ಇಷ್ಟಾಗಿಯೂ ಎಲ್ಲ ಏಳು ವಾರ್ಡ್‌ಗಳಲ್ಲಿ ‌ಗರಿಷ್ಠ ₹ 150 ಕೋಟಿಗಳಷ್ಟು ಮೊತ್ತದ ಕಾಮಗಾರಿಗಳು ಪೂರ್ಣಗೊಂಡ ಕುರುಹುಗಳೂ ‌ಕಾಣಸಿಗುವುದಿಲ್ಲ.‌ ಬಹುತೇಕ ಕಾಮಗಾರಿಗಳನ್ನು ನಡೆಸಿಯೇ ಇಲ್ಲ. ಕೆಲವು ಕಾಮಗಾರಿಗಳಿಗೆ ಎರಡೆರಡು ಬಾರಿ ಬಿಲ್‌ ಪಾವತಿಸಲಾಗಿದೆ’ ಎಂದು ದೂರಿದರು. 

‘ಈ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರಗಳು, ಬಿ.ಆರ್‌. ಸಂಖ್ಯೆಯ ದಾಖಲೆಗಳು, ಗುಣಮಟ್ಟ ಪರಿಶೀಲನೆ ವರದಿಗಳು, ಎಂ.ಬಿ ಪುಸ್ತಕದ ದಾಖಲೆಗಳನ್ನು ಗಾಂಧಿನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಕಂಪ್ಯೂಟರ್‌ನಿಂದ ‌ಅಳಿಸಿ ಹಾಕಲಾಗಿದೆ. ಈ ಬಗ್ಗೆ ಅವರೇ ಲಿಖಿತ ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದರು. 

‘ಈ ವಿಭಾಗದ ಶೇ 75ರಷ್ಟು ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ ಮೂಲಕವೇ ನಿರ್ವಹಿಸಲಾಗಿದೆ. ಪಾಲಾಕ್ಷಪ್ಪ, ವೆಂಕಟೇಶ್ ಮತ್ತು ರಾಜು ಎಂಬುವರು ಕಾರ್ಯಪಾಲಕ ಎಂಜಿನಿಯರ್‌ (ಇಇ) ಆಗಿದ್ದಾಗ ಈ ಕಾಮಗಾರಿಗಳು ನಡೆದಿವೆ. ಇಇ ಕಚೇರಿಯಲ್ಲಿ ಚಿಕ್ಕಹೊನ್ನಯ್ಯ ಅವರು 20 ವರ್ಷಗಳಿಂದ ಸಿಬ್ಬಂದಿಯಾಗಿದ್ದಾರೆ. ಬಡ್ತಿಯನ್ನೂ ನಿರಾಕರಿಸಿ ಅವರು ಇಲ್ಲಿ ತಳವೂರಿದ್ದಾರೆ’ ಎಂದರು.   

‘ಬಿನ್ನಿಪೇಟೆ ವಾರ್ಡ್‌ನಲ್ಲಿ 2019-20 ರ ಅವಧಿಯಲ್ಲಿ ತಲಾ 1.25 ಕೋಟಿ ಮೊತ್ತದ ಎರಡು ಕಾಮಗಾರಿಗಳು ಮತ್ತು ₹ 96 ಲಕ್ಷ ಮೊತ್ತದ ಒಂದು ಕಾಮಗಾರಿಗೆ  ಸಂಬಂಧಿಸಿದ ಕಾಮಗಾರಿ ಪ್ರಮಾಣಪತ್ರಗಳು ಕಳೆದು ಹೋಗಿವೆ ಎಂದು ಬಿಂಬಿಸಿ ಅದರ ನಕಲನ್ನು ಪಡೆಯುವ ಪ್ರಯತ್ನ ನಡೆದಿತ್ತು. ಕಾಟನ್‌ಪೇಟೆ ವಾರ್ಡ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅನುದಾನದಲ್ಲಿ ಒಟ್ಟು ₹ 4 ಕೋಟಿ ಮೊತ್ತದ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ ಮೂಲಕ ನಿರ್ವಹಿಸಲು ಅನುಮತಿ ಪಡೆಯಲಾಗಿದೆ. ಕೆಲಸ ನಿರ್ವಹಿಸದೆಯೇ ಹಣ ಬಿಡುಗಡೆ ಮಾಡಿಸಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದರು.

ಈ ಅಕ್ರಮದ ತನಿಖೆಯನ್ನು ಸಿಐಡಿಗೆ ವಹಿಸಲು ಶಿಫಾರಸು ಮಾಡುವಂತೆ ಒತ್ತಾಯಿಸಿ ಅವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರಿಗೆ ಹಾಗೂ ಆಡಳಿತಾಧಿಕಾರಿ ರಾಕೇಶ್ ಸಿಂಗ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ದೂರಿನ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗೌರವ ಗುಪ್ತ, ‘ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಅಧಿಕಾರಿಗಳು ತಪ್ಪೆಸಗಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

‘ಯಡಿಯೂರು ವಾರ್ಡ್‌ ಕಾಮಗಾರಿ ಕೆಆರ್‌ಐಡಿಎಲ್‌ಗೆ ವಹಿಸಿದ್ದೇಕೆ’

‘ಗಾಂಧಿನಗರ ಕ್ಷೇತ್ರದ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ವಹಿಸಿದ್ದನ್ನು ಟೀಕಿಸುವ ಎನ್‌.ಆರ್‌.ರಮೇಶ್‌ ಅವರು ಅವರ ಶ್ರೀಮತಿಯವರು ಪ್ರತಿನಿಧಿಸಿದ್ದ ಯಡಿಯೂರು ವಾರ್ಡಿನ ಕಸ ನಿರ್ವಹಣೆ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ ಮೂಲಕ ಮಾಡಿಸಿದ್ದೇಕೆ. ರಾಜಾಜಿನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ರಾಜರಾಜೇಶ್ವರಿ ನಗರ ಕ್ಷೇತ್ರಗಳ ಕಾಮಗಾರಿಗಳನ್ನೂ ಈ ಸಂಸ್ಥೆಗೆ ವಹಿಸಲಾಗಿದೆಯಲ್ಲವೇ. ಅವೆಲ್ಲವೂ ಸರಿ ಇವೆಯೇ’ ಎಂದು ಕಾಂಗ್ರೆಸ್‌ ವಕ್ತಾರ ಎ.ಎನ್‌.ನಟರಾಜ ಗೌಡ ಪ್ರಶ್ನಿಸಿದ್ದಾರೆ.

‘ಕೆಆರ್‌ಐಡಿಎಲ್ ಸಂಸ್ಥೆಗೆ ಹೆಚ್ಚಿನ ಕಾಮಗಾರಿ ವಹಿಸಲು ಕೆಟಿಪಿಪಿ ಕಾಯ್ದೆಗೆ ಕೆಲವೇ ತಿಂಗಳುಗಳ ಹಿಂದೆ ಈಗಿನ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ನವನಗರೋತ್ಥಾನ ಯೋಜನೆಯ ಕಾಮಗಾರಿಗಳನ್ನೂ ಈ ಸಂಸ್ಥೆ ಮೂಲಕವೇ ನಿರ್ವಹಿಸಲು ಅವಕಾಶ ಕಲ್ಪಿಸಿದೆಯಲ್ಲವೇ. ಈ ಬಗ್ಗೆ ಏಕೆ ಸೊಲ್ಲೆತ್ತಿಲ್ಲ ಎಂದೂ ಕೇಳಿದ್ದಾರೆ.  

‘ಮುನಿರತ್ನ, ಎಸ್‌.ಟಿ.ಸೋಮಶೇಖರ್ ವಿರುದ್ಧವೂ ಅಕ್ರಮವಾಗಿ ಕಾಮಗಾರಿ ನಡೆಸಿದ ಆಪಾದನೆಯನ್ನು ಎನ್.ಆರ್.ರಮೇಶ್ ಮಾಡಿದ್ದರು. ಈಗ ಬಿಜೆಪಿ ನೇತೃತ್ವದ ಸರ್ಕಾರವೇ ಇದೆ. ಆ ಆಪಾದನೆಗಳ ತನಿಖೆಗಳು ಏನಾದವು ತಿಳಿಸುವಿರಾ. ಕೇವಲ ಗಾಂಧಿನಗರದ ಮಾತ್ರ ಏಕೆ ಕಾಣುತ್ತಿದೆ. ಪಕ್ಕದ ಮಲ್ಲೇಶ್ವರ ಕ್ಷೇತ್ರದಲ್ಲಿ ಎಲ್ಲವೂ ಸರಿ ಇವೆಯೇ’ ಎಂದೂ ಮಾಹಿತಿ ಕೇಳಿದ್ದಾರೆ.

‘2019-20ರಿಂದ ಮತ್ತು 2020-1ರ ಮೊದಲ ಆರು ತಿಂಗಳುಗಳಲ್ಲಿ ಗಾಂಧಿನಗರ ಕ್ಷೇತ್ರಕ್ಕೆ ಅಕ್ರಮವಾಗಿ ₹ 252.23 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ರಮೇಶ್‌ ಆರೋಪಿಸಿದ್ದಾರೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಮತ್ತು ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತವೇ ಇತ್ತು. ಅವರ ಆರೋಪ ಸರ್ಕಾರದ ವಿರುದ್ಧವೇ ಇರಬೇಕು’ ಎಂದರು.

‘ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರಗಳು, ಗುಣಮಟ್ಟ ಪರಿಶೀಲನೆ ವರದಿಗಳು ಸಂಬಂಧಪಟ್ಟ ಕಡತದಲ್ಲಿರುತ್ತವೆ. ಎಂ.ಬಿ ಪುಸ್ತಕ ಎಂಜಿನಿಯರ್‌ ಬಳಿ ಇರುತ್ತದೆ. ಬಿ.ಆರ್‌. ಸಂಖ್ಯೆ ಅದರ ರಿಜಿಸ್ಟರ್‌ನಲ್ಲಿರುತ್ತದೆ. ಇವುಗಳೆಲ್ಲವನ್ನೂ ಐಎಫ್‌ಎಂಎಸ್‌ ತಂತ್ರಾಂ‌ಶ ಮೂಲಕ ಸಾರ್ವಜನಿಕರೂ ನೋಡಬಹುದು’ ಎಂದ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು