ಶುಕ್ರವಾರ, ಫೆಬ್ರವರಿ 26, 2021
22 °C

ಮೆದುಳು ಜ್ವರ ದಿನ: ಸರ್ಕಾರಿ ಕಟ್ಟಡಗಳ ಮೇಲೆ ರೆಡ್ ಅಲರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವ ಮೆದುಳು ಜ್ವರ ದಿನಾಚರಣೆ ಅಂಗವಾಗಿ ನಗರದ ಹಲವು ಕಟ್ಟಡಗಳು ಸೋಮವಾರ ರಾತ್ರಿ ಕೆಂಪು ಬಣ್ಣದ ದೀಪಗಳಿಂದ ಬೆಳಗಿದವು.

ನಿಮ್ಹಾನ್ಸ್ ಸಂಸ್ಥೆಯ ಏಳು ಕಟ್ಟಡಗಳ ಮೇಲೆ ಎಚ್ಚರಿಕೆಯ ಸಂಕೇತವಾದ ಕೆಂಪು ಬಣ್ಣದ ದೀಪಗಳನ್ನು ಬೆಳಗಿಸುವ ಮೂಲಕ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ನಿಮ್ಹಾನ್ಸ್‌ನ ವೈರಾಣು ತಜ್ಞ ಡಾ. ವಿ. ರವಿ ಹೇಳಿದರು.

ವಿಕಾಸಸೌಧ, ವಿಧಾನಸೌಧ, ಹೈಕೋರ್ಟ್, ಆರೋಗ್ಯಸೌಧ, ಬಿಬಿಎಂಪಿ ಕಚೇರಿ, ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡಗಳ ಮೇಲೆ ಕೆಂಪು ಬಣ್ಣದ ದೀಪಗಳನ್ನು ಬೆಳಗಿಸಲು ಕೋರಲಾಗಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ಕಳೆದ ವರ್ಷ 15 ಜನರಿಗೆ ಮೆದುಳು ಜ್ವರ ಕಾಣಿಸಿಕೊಂಡಿದ್ದು, ಯಾರೊಬ್ಬರೂ ಮೃತಪಟ್ಟಿಲ್ಲ. ಕೋವಿಡ್ ಲಾಕ್‌ಡೌನ್ ಇದ್ದ ಕಾರಣ ಈ ರೀತಿಯ ಸಾಂಕ್ರಾಮಿಕ ರೋಗಗಳು ಕಳೆದ ವರ್ಷ ಕಡಿಮೆ ವರದಿಯಾದವು. ಮಲೇರಿಯಾ, ಡೆಂಗೆ ರೀತಿ ಮೆದುಳು ಜ್ವರ ಕೂಡ ಸಾಂಕ್ರಾಮಿಕ ರೋಗ. ಕೋಲಾರ, ಬಳ್ಳಾರಿ, ಮಂಡ್ಯ, ತುಮಕೂರು ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಈ ಸೋಂಕಿಗೆ ತುತ್ತಾದವರು ಹೆಚ್ಚಾಗಿ ಇದ್ದಾರೆ’ ಎಂದು ಹೇಳಿದರು.

‘ಭತ್ತ ಬೆಳೆಯುವ ಪ್ರದೇಶದಲ್ಲಿ ಹೆಚ್ಚಾಗಿ ಈ ರೋಗ ಹರಡುತ್ತದೆ. ಭತ್ತದ ಬೆಳೆಯಲ್ಲಿ ನಿಲ್ಲುವ ನೀರಿನಲ್ಲಿ ಹೆಚ್ಚಾಗಿ ಈ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಕೇರಳದಲ್ಲಿ 1994ರ ತನಕ ಈ ರೋಗದ ಸುಳಿವೇ ಇರಲಿಲ್ಲ. ಆಣೆಕಟ್ಟೆ ಕಟ್ಟಿ ಭತ್ತ ಬೆಳೆಯಲು ಆರಂಭವಾದ ಬಳಿಕ ಈ ಕಾಯಿಲೆ ಆ ರಾಜ್ಯವನ್ನು ಕಾಡುತ್ತಿದೆ’ ಎಂದು ಹೇಳಿದರು.

‘ಈ ಕಾಯಿಲೆಗೆ ಲಸಿಕೆ ಲಭ್ಯವಿದ್ದು, ಈ ರೋಗದಿಂದ ಸಾವಿನ ಪ್ರಮಾಣ ದೇಶದಲ್ಲಿ ಶೇ 6ರಷ್ಟಿದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮೆದುಳು ಊತ, ಉರಿ ಕಾಣಿಸಿಕೊಂಡು ಮಕ್ಕಳು ಜ್ಞಾನ ತಪ್ಪುತ್ತವೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೆ ಅಪಾಯದಿಂದ ಪಾರು ಮಾಡಬಹುದು’ ಎಂದರು.

ಸೋಂಕಿನಿಂದ ಗುಣಮುಖರಾದರೂ ಅತೀವ ಸುಸ್ತು, ಮೂರ್ಚೆರೋಗ, ಮಾನಸಿಕ ತೊಂದರೆ, ಮರೆಗುಳಿತನ ಹೀಗೆ ಹಲವು ತೊಂದರೆಗಳು ಕಾಡುವ ಸಾಧ್ಯತೆಗಳಿವೆ ಎಂದು ಹೇಳಿದರು.

‘ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು 2014ರಿಂದ ಪ್ರತಿವರ್ಷ ಫೆಬ್ರುವರಿ 22ರಂದು ವಿಶ್ವ ಮೆದುಳು ಜ್ವರ ದಿನಾಚರಣೆ ಆಚರಿಸಲಾಗುತ್ತಿದೆ’ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.