ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ವೆಸ್ಟ್ ಕರ್ನಾಟಕ: ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಅದ್ಧೂರಿ ತೆರೆ

‘ಬ್ರಾಂಡ್ ಬೆಂಗಳೂರು’ ಜತೆ, ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಯನ್ನು ಯಶಸ್ವಿಯಾಗಿಸಿದೆ ‘ಜಿಮ್‌2022’
Last Updated 4 ನವೆಂಬರ್ 2022, 22:54 IST
ಅಕ್ಷರ ಗಾತ್ರ

ಜಾಗತಿಕ ಹೂಡಿಕೆದಾರರ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಈ ಬಾರಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ ಐದು ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಸರ್ಕಾರದ್ದಾಗಿತ್ತು.

ಆದರೆ, ವಿಶ್ವದ ಅಗ್ರಮಾನ್ಯ ಉದ್ಯಮಿಗಳು ರಾಜ್ಯದಲ್ಲಿ ಅತಿ ಹೆಚ್ಚು ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿರುವುದು ನಮ್ಮ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವ ಅಂದಾಜಿದ್ದು, ನಮ್ಮ ಕನ್ನಡಿಗರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸಿಗಲಿವೆ ಎಂಬುದೇ ಅತ್ಯಂತ ಸಂತಸದ ವಿಷಯ.

‘ಗ್ಲೋಬಲ್ ಇನ್ವೆಸ್ಟರ್ಸ್‌ಮೀಟ್‌’ ಕರ್ನಾಟಕದಲ್ಲಿ ನಡೆಯುತ್ತಿರುವ ಐದನೆಯ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಡಾ.ಮುರುಗೇಶ ಆರ್. ನಿರಾಣಿ ನೇತೃತ್ವದಲ್ಲಿ ನಡೆಯುತ್ತಿರುವ ಮೂರನೇ ಜಾಗತಿಕ ಹೂಡಿಕೆದಾರರ ಸಮಾವೇಶ.

ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫರೆನ್ಸ್‌ಮೂಲಕ ಸಮಾವೇಶವನ್ನು ಉದ್ಘಾಟನೆ ಮಾಡಿದ್ದೇ, ಈ ಬಾರಿಯ ಸಮಾವೇಶಕ್ಕೆ ವಿಶೇಷ ಮೆರಗು ತಂದುಕೊಟ್ಟಿತ್ತು.

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಡಾ. ಮುರುಗೇಶ ಆರ್ ನಿರಾಣಿ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಪಿಯೂಷ್ ಗೋಯಲ್, ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಬೆಂಗಳೂರಿನ ಅರಮನೆಯಲ್ಲಿ ನವೆಂಬರ್‌2ರಂದು ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಉದ್ಘಾಟನಾ ಸಮಾವೇಶದಲ್ಲಿ ಉಪಸ್ಥಿತರಿದ್ದರು.

ಅಗ್ರ ಕೈಗಾರಿಕೋದ್ಯಮಿಗಳಾದ ಜಿಂದಾಲ್ ಗ್ರೂಪ್ ಅಧ್ಯಕ್ಷ ಶ್ರೀ ಸಜ್ಜನ್ ಜಿಂದಾಲ್, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ ಶ್ರೀ ವಿಕ್ರಮ್ ಎಸ್ ಕಿರ್ಲೋಸ್ಕರ್, ವಿಪ್ರೋ ಅಧ್ಯಕ್ಷರು ರಿಷಾದ್ ಪ್ರೇಮ್‌ಜೀ, ಭಾರತಿ ಎಂಟರ್‌ಪ್ರೈಸಸ್‌ನ ಉಪಾಧ್ಯಕ್ಷ ರಾಜನ್ ಭಾರತಿ ಮಿತ್ತ, ಅದಾನಿ ಪೋರ್ಟ್ಸ್ ಮತ್ತು ಎಸ್‌ಇಝಡ್‌ನ ಸಿಇಒ ಕರಣ್ ಅದಾನಿ ಮತ್ತು ಸ್ಟೆರ್ಲೈಟ್ ಪವರ್ ಎಂಡಿ ಪ್ರತೀಕ್ ಅಗರ್ವಾಲ್ ಅವರು ಕರ್ನಾಟಕದಲ್ಲಿ ತಮ್ಮ ಉದ್ಯಮ ಅನುಭವವನ್ನು ಹಂಚಿಕೊಂಡರು ಜತೆಗೆ, ರಾಜ್ಯದಲ್ಲಿ ಇನ್ನೂ ಹೆಚ್ಚಿನ ಹೂಡಿಕೆ ಮಾಡುವ ಇಂಗಿತ ವ್ಯಕ್ತಪಡಿಸಿದರು.

ಎರಡನೇ ದಿನದ ಸಮಾವೇಶದಲ್ಲಿ ವನ್ಯಜೀವಿ ಚಲನಚಿತ್ರ ನಿರ್ಮಾಪಕರಾಗಿ ಮತ್ತು ಪ್ರಸಿದ್ಧ ನೈಸರ್ಗಿಕ ಇತಿಹಾಸಕಾರ ಹಂಟರ್‌ತಮ್ಮ ವೃತ್ತಿ ಬದುಕಿನ ರೋಚಕ ವಿಷಯಗಳನ್ನು ಹಂಚಿಕೊಂಡರು. ಜುಕರ್‌ಬರ್ಗ್‌ಮೀಡಿಯಾ ಸಂಸ್ಥಾಪಕಿ ರ‍್ಯಾಂಡಿ ಜುಕರ್‌ಬರ್ಗ್, ‘‘ಬೆಂಗಳೂರು ತಂತ್ರಜ್ಞಾನದ ತವರೂರು, ಇಡೀ ಜಗತ್ತಿಗೆ ಚಿರಪರಿಚಿತವಾದ ಹೆಸರು,’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘‘ಡ್ರೈವಿಂಗ್ ಇಂಡಿಯಾ ಇನ್ ದ ಫ್ಯೂಚರ್: ರೆವಲ್ಯೂಷನ್ ಇನ್ ಇಂಡಿಯಾಸ್ ಮೊಬಿಲಿಟಿ" - ಸೆಷನ್‌ನಲ್ಲಿ ಸನ್ ಮೊಬಿಲಿಟಿಯ ಸಹ ಸಂಸ್ಥಾಪಕ ಮತ್ತು ಅಧ್ಯಕ್ಷ ಚೇತನ್ ಮೈನಿ, ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಸಿಇಒ ಮತ್ತು ಎಂಡಿ ಅಸಿಮ್ ಕುಮಾರ್ ಮುಖೋಪಾಧ್ಯಾಯ ಮತ್ತು ಸ್ವಿಚ್ ಮೊಬಿಲಿಟಿಯ ಚೀಫ್‌ರೆವಿನ್ಯೂ ಅಧಿಕಾರಿ ಸಚಿನ್ ನಿಜವಾನ್ ಭಾಗವಹಿಸಿದ್ದರು.

ಇಂಧನ ಕ್ಷೇತ್ರ ಕುರಿತ ಸಂವಾದಲ್ಲಿ ಪಾಲ್ಗೊಂಡು ಮಾತನಾಡಿದ ವಿಜಯ್‌ನಿರಾಣಿ, ‘‘ಏಷ್ಯಾದಲ್ಲೇ ಅತಿ ಹೆಚ್ಚು ಎಥನಾಲ್ ಉತ್ಪಾದನೆ ಮಾಡುವ ರಾಜ್ಯ ಕರ್ನಾಟಕ. ಪವನ ಹಾಗೂ ಸೌರ ವಿದ್ಯುತ್‌ಉತ್ಪಾದನೆ ಯೋಜನೆಯನ್ನು ಅಭಿವೃದ್ಧಿಪಡಿಸಿ, ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದ ನವೀಕರಿಸಬಹುದಾದ ಇಂಧನದ ಸಾಮರ್ಥ್ಯವನ್ನು 10 ಪಟ್ಟು ಹೆಚ್ಚಿಸಲು ಯೋಜಿಸಲಾಗಿದೆ,’’ ಎಂದರು.

ಮೂರನೇ ದಿನದ ಸಮಾವೇಶದಲ್ಲಿ ಜೀವ್‌ಸೇಗ್ಲ್ - ಸಹ-ಸಂಸ್ಥಾಪಕ, ಸ್ಟಾರ್ಬಕ್ಸ್ ತಮ್ಮ ವೃತ್ತಿ ಬದುಕಿನ ಅನುಭವ ಹಂಚಿಕೊಂಡರು. ಕೊವಿಡ್‌ನಂಥ ಪರಿಸ್ಥಿತಿ ಎದುರಿಸುವ ಸನ್ನದ್ಧತೆ ಕುರಿತ ಸಮಾವೇಶದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌, ನಾರಾಯಣ ಹೆಲ್ತ್‌ನ ಸಂಸ್ಥಾಪಕ ಡಾ. ದೇವಿ ಶೆಟ್ಟಿ, ವಿಶ್ವ ಆರೋಗ್ಯ ಸಂಸ್ಥೆಯ ಡಾ. ಸೌಮ್ಯ ಸ್ವಾಮಿನಾಥನ್‌ಪಾಲ್ಗೊಂಡು ಅರ್ಥಪೂರ್ಣ ಚರ್ಚೆ ನಡೆಸಿದರು. ದಿ ಪ್ರಿಂಟ್‌ನ ಸಂಸ್ಥಾಪಕ ಶೇಖರ್‌ಗುಪ್ತ ಸಂವಾದ ನಡೆಸಿಕೊಟ್ಟರು.

ಕರ್ನಾಟಕದಲ್ಲಿ ಹೂಡಿಕೆ ಮಾಡಿರುವ ಉದ್ಯಮಿಗಳ ಯಶೋಗಾಥೆಗೆ ರಿಸಿಲಿಯಂಟ್‌ ಕರ್ನಾಟಕ ವೇದಿಕೆ ಸಾಕ್ಷಿಯಾಯಿತು.

ಬ್ರ್ಯಾಂಡ್ ಬೆಂಗಳೂರು ಜತೆಗೆ ಬಿಯಾಂಡ್‌ಬೆಂಗಳೂರು- ಯಶಸ್ವಿ

ಬ್ರಾಂಡ್ ಬೆಂಗಳೂರಿನ ಘನತೆ ಹೆಚ್ಚಿಸುವುದರೊಂದಿಗೆ ಬಿಯಾಂಡ್ ಬೆಂಗಳೂರು ಮೂಲಕ 2-3ನೇ ಹಂತದ ನಗರಗಳಿಗೆ ಕೈಗಾರಿಕೆಗಳನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯೊಂದಿಗೆ ಆರಂಭವಾದ ಈ ಸಮಾವೇಶ ತನ್ನ ಉದ್ದೇಶ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಬ್ಯುಲ್ಡ್ ಫಾರ್ ದಿ ವರ್ಲ್ಡ್ ಎಂಬ ಘೋಷವಾಕ್ಯದೊಂದಿಗೆ ನಡೆದ ಮೂರು ದಿನಗಳ ಸಮಾವೇಶದಲ್ಲಿ 10 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಅದರಲ್ಲಿ ಬಹುತೇಕ ಹೂಡಿಕೆಗಳು ಬೆಂಗಳೂರು ಅಲ್ಲದೇ ಟೈರ್ 2 ಮತ್ತು ಟೈರ್ 3 ನಗರ-ಪಟ್ಟಣಗಳು ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ಅನುಷ್ಠಾನಗೊಳ್ಳುವಂತಹದ್ದು.

ಮತ್ತೊಂದೆಡೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಂಗಳೂರಿನ ಸಾಧನೆ ಪರಿಗಣಿಸಿ ಈ ಕ್ಷೇತ್ರದ ಹೂಡಿಕೆಗಳು ಬೆಂಗಳೂರಿಗೆ ಭಾರೀ ಪ್ರಮಾಣದಲ್ಲಿ ಬರುವುದರೊಂದಿಗೆ ಬ್ರಾಂಡ್ ಬೆಂಗಳೂರು ಕೂಡ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.

ಹೂಡಿಕೆದಾರರ ಸಮಾವೇಶಗಳೆಂದರೆ ಅಲ್ಲಿ ಬೆಂಗಳೂರು ನಗರ ಮತ್ತು ಸುತ್ತಮುತ್ತ ಹಾಗೂ ಪ್ರಮುಖ ನಗರಗಳಿಗೆ ಮಾತ್ರ ಸೀಮಿತವಾಗಿರುತ್ತವೆ ಎಂಬ ಭಾವನೆಯನ್ನು ಈ ಬಾರಿಯ ಸಮಾವೇಶ ಖಂಡಿತವಾಗಿಯೂ ದೂರ ಮಾಡಿದೆ. ಬೆಂಗಳೂರಿನ ಆಚೆಗೂ ಅತಿ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಇನ್ವೆಸ್ಟ್ ಕರ್ನಾಟಕ- 2022 ಯಶಸ್ವಿಯಾಗಿದೆ.

ಬೆಂಗಳೂರಿನ ಹೊರಗೆ ಅಂದರೆ ಟೈರ್ 2 ಮತ್ತು 3 ನಗರಗಳಲ್ಲಿ ಅಂದರೆ ಮೈಸೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ, ಕೊಪ್ಪಳ, ವಿಜಯಪುರ ಹೀಗೆ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಆ ಭಾಗದಲ್ಲಿರುವ ಮಾನವ ಸಂಪನ್ಮೂಲವನ್ನು ಸ್ಥಳೀಯವಾಗಿ ಬಳಸಿಕೊಂಡು ಆ ಪ್ರದೇಶಗಳ ಆರ್ಥಿಕ ಬೆಳವಣಿಗೆಗೆ ಅವಕಾಶ ಕಲ್ಪಿಸುವ ಮೂಲಕ ರಾಜ್ಯದ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂಬುದು
ಸರಕಾರದ ಉದ್ದೇಶ.

ಅದರಲ್ಲೂ ಮುಖ್ಯವಾಗಿ ಗ್ರೀನ್ ಹೈಡ್ರೋಜನ್, ನವೀಕರಿಸಬಹುದಾದ ಇಂಧನ, ಏರೋಸ್ಪೇಸ್ ಮತ್ತು ರಕ್ಷಣೆ ಮುಂತಾದ ವಲಯಗಳಲ್ಲಿ ಆ ಭಾಗದಲ್ಲಿ ಸಾಕಷ್ಟು ಹೂಡಿಕೆ ಮಾಡಲು ಆಸಕ್ತಿ ತೋರಿರುವ ಕೈಗಾರಿಕೋದ್ಯಮಿಗಳು ಈ ಕುರಿತಂತೆ ಸರಕಾರದ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ.

ಬಿಯಾಂಡ್ ಬೆಂಗಳೂರಿಗಾಗಿ ಸರಕಾರ ಮೊದಲೇ ಸಿದ್ಧತೆ ಮಾಡಿಕೊಂಡಿತ್ತು. ವಿದೇಶಗಳು ಮತ್ತು ದೇಶದ ಪ್ರಮುಖ ನಗರಗಳಲ್ಲಿ ನಡೆದ ರೋಡ್ ಶೋ ವೇಳೆ ಈ ಕುರಿತು ಉದ್ಯಮಿಗಳ ಜತೆ ಮಾತುಕತೆ ನಡೆಸಲಾಗಿತ್ತು. ಅದಕ್ಕೂ ಮೊದಲು ನೂತನ ಕೈಗಾರಿಕಾ ನೀತಿ 2020-25ರಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಬೆಂಗಳೂರಿನಿಂದ ಹೊರಗೆ ಕೈಗಾರಿಕೆಗಳನ್ನು ವಿಸ್ತರಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಹಿಂದುಳಿದಿರುವ ಕೈಗಾರಿಕಾ ಅಭಿವೃದ್ಧಿಯನುಸಾರ ಬಂಡವಾಳ ಹೂಡಿಕೆಗಳಿಗೆ ರಿಯಾಯಿತಿ ಒದಗಿಸಲು ರಾಜ್ಯದ ಜಿಲ್ಲೆಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸಲಾಗಿತ್ತು.

ಬೆಂಗಳೂರು ಕೇಂದ್ರಿತ ಕೈಗಾರಿಕೆಗಳ ಸ್ಥಾಪನೆ ತಪ್ಪಿಸುವ ನಿಟ್ಟಿನಲ್ಲಿ ರೂಪಿಸಿರುವ ಒಂದು ಜಿಲ್ಲೆ ಒಂದು ಉತ್ಪಾದನೆ ಕಾರ್ಯಕ್ರಮದಡಿ ಕೊಪ್ಪಳದಲ್ಲಿಆಟಿಕೆ ಕ್ಲಸ್ಟರ್‌, ಹುಬ್ಬಳ್ಳಿ ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌, ಯಾದಗಿರಿಯ ಜಿಲ್ಲೆಯಲ್ಲಿ ಫಾರ್ಮಾ ಕ್ಲಸ್ಟರ್‌, ಕಲಬುರ್ಗಿಯಲ್ಲಿ ಜವಳಿ, ಜ್ಯವೆಲ್ಲರಿ ಪಾರ್ಕ್, ಹುಬ್ಬಳ್ಳಿ-ಧಾರವಾಡದಲ್ಲಿ ಐಟಿ ಪಾರ್ಕ್ ಅಭಿವೃದ್ಧಿಪಡಿಸಲಾಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ, ಅದರಲ್ಲಿಯೂ ಕೃಷಿ ಆಧಾರಿತ ಟೆಕ್‌ಸ್ಟೈಲ್ ಹಾಗೂ ಫುಡ್ ಪ್ರೊಸೆಸ್ಸಿಂಗ್ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಸಲಾಗಿತ್ತು. ತುಮಕೂರು ಮಷಿನ್‌ಟೂಲ್ಸ್‌ಪಾರ್ಕ್, ಫುಡ್‌ಪಾರ್ಕ್, ಜಪಾನೀಸ್‌ಕೈಗಾರಿಕಾ ಪ್ರದೇಶ ಹೀಗೆ ಹಲವಾರು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT