ಬೆಂಗಳೂರು: ‘ಕಾಲದ ದಾಸರಾದ ಗಾಂಧಿವಾದಿಗಳು ಕಾಲಕ್ಕೆ ತಕ್ಕಂತೆ ಕುಣಿದರು. ಮಹಾಕಾಲ, ಭೈರವ ಮತ್ತು ಕಾಳಿಯ ಸಂತಾನದವರಾದ ಕ್ರಾಂತಿಕಾರಿಗಳು ಕಾಲವನ್ನು ಕುಣಿಸಿದವರು’ ಎಂದು ಲೇಖಕ ಜಿ.ಬಿ. ಹರೀಶ ಹೇಳಿದರು.
ದಿ ಮಿಥಿಕ್ ಸೊಸೈಟಿ ಹಾಗೂ ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್ ಸಹಯೋಗದಲ್ಲಿ ಭಾನುವಾರ ನಡೆದ ‘ಬಾಬು ಕೃಷ್ಣಮೂರ್ತಿ ಅವರು ಬರೆದಿರುವ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧರ ಪುಸ್ತಕಗಳ ಕುರಿತ ವಿಚಾರಸಂಕಿರಣ’ದಲ್ಲಿ ಅವರು ‘ರುಧಿರಾಭಿಷೇಕ’ ಪುಸ್ತಕದ ಕುರಿತು ಮಾತನಾಡಿದರು. ‘ಕಾಲ ಬರುವವರೆಗೂ ಕಾದರೆ ಗಾಂಧಿವಾದಿಗಳಾಗುತ್ತೀರ. ಕಾಲ ಬರುವುದಕ್ಕಿಂತ ಮುಂಚಿತವಾಗಿ ಬಂದೂಕು ಎತ್ತಿದರೆ ಕ್ರಾಂತಿಕಾರಿಗಳಾಗುತ್ತೀರ’ ಎಂದು ಹೇಳಿದರು.
‘ಭಾರತೀಯರ ಆವೇಶಗಳ, ಆಕ್ರೋಶಗಳನ್ನು ತಣಿಸಿ, ಅವರನ್ನು ಮಣಿಸಲು ಹುಟ್ಟು ಹಾಕಿದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. 1857ರ ಪ್ರಥಮ ಸ್ವಾತಂತ್ರ್ಯ ಹೋರಾಟದಲ್ಲಿ 100ಕ್ಕೂ ಹೆಚ್ಚಿನ ಸೈನಿಕರನ್ನು ಕೊಂದಿದ್ದೇನೆಂದು ಹೇಳಿಕೊಳ್ಳುತ್ತಿದ್ದ ಎ.ಒ. ಹ್ಯೂಮ್ ಈ ಕಾಂಗ್ರೆಸ್‌ನ ಸಂಸ್ಥಾಪಕ ಎಂದು ರುಧಿರಾಭಿಷೇಕ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ನಾವು ಕಲಿತ ಪಠ್ಯಪುಸ್ತಕಗಳಲ್ಲಿ ಎ.ಒ.ಹ್ಯೂಮ್ ಕಾಂಗ್ರೆಸ್ ಜನಕ ಎಂಬ ಮಾಹಿತಿ ಮಾತ್ರ ಇದೆ’ ಎಂದು ತಿಳಿಸಿದರು.
‘ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ರಕ್ತದಧಾರೆ ಮಾತ್ರ ಇದೆ. ಆದರೆ, ಮಂದಗಾಮಿಗಳು ಸ್ವಾತಂತ್ರ್ಯದ ಸಂಪೂರ್ಣ ಲಾಭವನ್ನು ಹೊಡೆದುಕೊಂಡರು. ಬಾಬು ಕೃಷ್ಣಮೂರ್ತಿ ಅವರು ರಕ್ತ ಹರಿಸಿ ಮತ್ತು ನೇಣುಗಂಬವನ್ನೇರಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಕ್ರಾಂತಿಕಾರಿಗಳ ಕುರಿತು ತಮ್ಮ ಪುಸ್ತಕಗಳಲ್ಲಿ ತಿಳಿಸಿದ್ದಾರೆ’ ಎಂದರು.
‘ಹುಲಿ ಚಿತ್ರ ಎದುರಿಗೆ ಬಂದಿದ್ದಕ್ಕೆ ಟಿಪ್ಪು ಸುಲ್ತಾನ್ ಪ್ರಸಿದ್ದಿಪಡೆದ. ಆದರೆ, ಹುಲಿಯನ್ನು ಕೊಂದಿದ್ದ ಬಾಘ ಜತೀನ್ ಪ್ರಸಿದ್ದಿಯಾಗಲು ಬಾಬು ಕೃಷ್ಣಮೂರ್ತಿ ಅವರ ರುಧಿರಾಭಿಷೇಕ ಬರುವವರೆಗೂ ಕಾಯಬೇಕಾಯಿತು’ ಎಂದರು.
ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಅವರು ಅಜೇಯ ಪುಸ್ತಕದ ಕುರಿತು ಮಾತನಾಡಿದರು. ಉಪನ್ಯಾಸಕ ಬೆಳವಾಡಿ ಮಂಜುನಾಥ ಅವರು ಅದಮ್ಯ ಪುಸ್ತಕದ ಕುರಿತು ಮಾತನಾಡಿದರು. ಲೇಖಕ ಬಾಬು ಕೃಷ್ಣಮೂರ್ತಿ, ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷ ವಿ. ನಾಗರಾಜ್ ಭಾಗವಹಿಸಿದ್ದರು.
‘ನಾನು ಗಾಂಧಿಯ ವಿರೋಧಿ’
‘1915ರವರೆಗೆ ಸ್ವಾತಂತ್ರ್ಯ ಹೋರಾಟ ಹಾಳಾಗಿರಲಿಲ್ಲ. ಯಾಕೆಂದರೆ ಗಾಂಧೀಜಿ ಅಲ್ಲಿಯವರೆಗೆ ಬಂದಿರಲಿಲ್ಲ. ನಾನು ಗಾಂಧಿಯ ವಿರೋಧಿಯಾಗಿದ್ದೇನೆ. ನನಗೆ ಗಾಂಧಿಯ ಬಗ್ಗೆ ಲವಲೇಶವೂ ಗೌರವವಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪುಸ್ತಕದ ಮೂಲಕ ತಿಳಿಸಲಾಗುವುದು’ ಎಂದು ಲೇಖಕ ಜಿ.ಬಿ. ಹರೀಶ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.