ಶುಕ್ರವಾರ, ಫೆಬ್ರವರಿ 28, 2020
19 °C

ಅಂಧಶ್ರದ್ಧೆಯ ನಡುವೆ ವೀರರು ನೇಪಥ್ಯಕ್ಕೆ..

ಚಿತ್ರಾ ಫಾಲ್ಗುಣಿ Updated:

ಅಕ್ಷರ ಗಾತ್ರ : | |

Prajavani

ಕಾಷಾಯಾಂಬರದ ವಿವಿಧ ರೂಪಗಳ ಬಗೆಗಿನ ಶಂಕರಾಚಾರ್ಯರ ಮಾತು, ನೋಡಿಯೂ ಕುರುಡಾಗಿರುವ ಅವಸ್ಥೆಯ ಬಗೆಗಿನ ಮಾತು, ಈವತ್ತಿನ ದಿನಗಳಲ್ಲಿ ಸೂಕ್ತವೆನಿಸುವಂಥದು. ಇಂತಹ ಸಾಮಾಜಿಕ ವಿಷಯದ ಬಗೆಗಿರುವ ಯಕ್ಷಗಾನ ಪ್ರಸಂಗ 'ಶತಮಾನಂ ಭವತಿ' ಕುತೂಹಲಕಾರಿ. ಪ್ರಸಂಗವನ್ನು ಇತ್ತೀಚೆಗೆ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರು, ಮೇಳದವರು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಸ್ತುತ ಪಡಿಸಿದರು. 

ಕಥೆ ಖದೀಮರ ಸುತ್ತಲೇ ಹೆಣೆಯಲ್ಪಟ್ಟಿದೆ. ಅನುಚಿತ ವರ್ತನೆಯ ಅಸ್ಥಾನಿಕ ದುಂದುಭಿ, 'ಭಿಕ್ಷುಕರ ಸಂಘ'ದ ಪದಾಧಿಕಾರಿಗಳಿಬ್ಬರು, ರಾಜ ಭೀಮರಥನ ಮನ ಗೆದ್ದು ಗದ್ದುಗೆಯೇರುವ ಗಂಧವತಿ, ಆಸ್ಥಾನಿಕನಾಗುವ ಚಾಂಡಾಲ ಅಮರಬಾಹು, ಮುಖ್ಯವಾಗಿ ಕಾವಿಯುಟ್ಟುಕೊಂಡು ಸೇಡು, ಗದ್ದುಗೆಗೆ ಹಾತೊರೆವ ಮನಸ್ಥಿತಿ ಮತ್ತು ಕಾಮತೃಷೆ, ಸ್ವಾರ್ಥವನ್ನು ಕಾಷಾಯದೊಳಗೆ ಹುದುಗಿರಿಸಿಕೊಂಡಿರುವ ಸನ್ಯಾಸಿ ಅಪರಂಪರನಿದ್ದಾನೆ. ಈ ಬದಿಗೆ ವೀರ, ನಿಷ್ಠುರ, ನ್ಯಾಯಪರ ಸೈನಿಕರೂ ಇದ್ದಾರೆ. ಹೆಜ್ಜೆ ಹೆಜ್ಜೆಗೂ ಅವರು ಖಳರನ್ನು ತಡೆದರೂ, ಕಾವಿಯ ಬಗೆಗಿನ ಅಂಧಭಕ್ತಿಯಿಂದಾಗಿ ರಾಜನಿಗೆ ಸತ್ಯದ ಅರಿವಾಗುವಷ್ಟರಲ್ಲಿ ಸಾಕಷ್ಟು ವೀರರು ನೇಪಥ್ಯಕ್ಕೆ ಸರಿದಿರುತ್ತಾರೆ.

ರಾಜನ ತಂಗಿ ಹರಿಣಿ ವೀರ ಸೈನಿಕ ಸೂರ್ಯಸೇನನ ಪ್ರೀತಿಸಿ ವರಿಸುತ್ತಾಳೆ, ಗಂಡನ ಮನಸ್ಸು ಮಾತ್ರ ಸೈನಿಕನ ಕರ್ತವ್ಯದೆಡೆಗಿದೆ. 
ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ಪ್ರಸನ್ನ ಭಟ್ ಬಾಳ್ಕಲ್ ಇವರ ಭಾಗವತಿಕೆ ಉತ್ತಮವಾಗಿದೆ. ಚೆಂಡೆ-ಮದ್ದಳೆಗಾರರು ಒಳ್ಳೆಯ ಸಾಥ್ ಕೊಟ್ಟಿದ್ದಾರೆ. ಮುಖ್ಯ ಪಾತ್ರಗಳ ಕೆಲವು ಹಾಡುಗಳು ಸ್ವಲ್ಪ ಗಿಡ್ಡವಾದಂತೆ ಅನ್ನಿಸಿ, ಕಲಾವಿದರಿಗೆ ಕುಣಿದು ಅಭಿನಯಿಸಲು ಸಮಯ ಕಡಿಮೆಯಾದಂತೆ ತೋರಿತು. ಕೆಲವು ಹಾಡುಗಳು ಖಳರಿಗೇ ಮೀಸಲು. ಭಾಗವತರ ಹಾಡಿಗೆ ಕಲಾವಿದರು ಸೊಗಸಾದ ಕುಣಿತ-ಅಭಿನಯ ನೀಡಿದ್ದಾರೆ.

ಯಕ್ಷಗಾನದ ಶೈಲಿಗೆ ತಕ್ಕಂತೆ ರಂಗಸ್ಥಳದ ಮೇಲೆ ರಕ್ತಪಾತ ತೋರಿಸದಿದ್ದರೂ ಕೆಲವೊಂದು ಪಾತ್ರಗಳ ಸಾವಿಗೆ ಕಾರಣ ಸೂಕ್ತವೆನಿಸಲಿಲ್ಲ. ಸನ್ಯಾಸಿ ಖದೀಮನೆಂಬ ವಿಷಯವನ್ನು ಬೆಳಕಿಗೆ ತರಲು ಇಷ್ಟೆಲ್ಲಾ ಜನರು ಸಾಯಬೇಕಿತ್ತೆ ಎನ್ನುವ ಪ್ರಶ್ನೆ ಮೂಡುತ್ತದೆ.

ಮುಖ್ಯವಾಗಿ ಇಂತಹ ಸಾಮಾಜಿಕ ಅನ್ವಯತೆಯ ವಿಷಯದ ಬಗೆಗಿನ ಕಥಾನಕದ ರಸ ಅತಿಯಾದ ಹಾಸ್ಯದಲ್ಲಿ ಸ್ವಲ್ಪ ನಿಸ್ಸಾರಗೊಂಡಂತೆ ತೋರುತ್ತದೆ. 'ಶತಮಾನಂ ಭವತಿ' ಪ್ರಸಂಗದಲ್ಲಿ ಖಳರಿಗೆ, ಹಾಸ್ಯಗಾರರಿಗೆ ಮೆರೆಯಲು ಸಾಕಷ್ಟು ಅವಕಾಶ ಸಿಕ್ಕಿದೆ, ಆದರೆ, ವೀರರ, ಸಕಾರಾತ್ಮಕ ಪಾತ್ರಗಳ ವಿಸ್ತಾರದಲ್ಲಿ, ಸೂಕ್ಷ್ಮದಲ್ಲಿ ಕೊರತೆಯುಂಟಾದಂತೆ ಕಾಣುತ್ತದೆ. ಅಂಧಶ್ರದ್ಧೆಯ ವಿವಿಧ ರೂಪಗಳ ಮೇಲೆ ಹೆಚ್ಚು ಬೆಳಕು ಚೆಲ್ಲಿದ್ದು ಗಮನಾರ್ಹ. ಹಾಸ್ಯ, ಶೃಂಗಾರ ರಸಗಳು ಹೆಚ್ಚು ಪ್ರಾಶಸ್ತ್ಯ ಪಡೆದಿರುವುದರಿಂದ ಪ್ರಸಂಗ ಯಕ್ಷಗಾನಕ್ಕಿಂತಲೂ ಹೆಚ್ಚಾಗಿ ಹಾಸ್ಯ-ಪ್ರೇಮಪ್ರಧಾನ ನೃತ್ಯರೂಪಕದಂತಾಗಿದೆ.

ಕಪಟಸನ್ಯಾಸಿಯ ಪಾತ್ರ ಅತ್ಯುತ್ತಮವಾಗಿ ಮೂಡಿದೆ. ಥಂಡಿಮನೆ ಶ್ರೀಪಾದ ಭಟ್ಟರು ಅಪರಂಪರನ ಪಾತ್ರವನ್ನು ಸಮರ್ಥರಾಗಿ ನಿರ್ವಹಿಸಿದ್ದಾರೆ. ಅವರೊಂದಿಗೆ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರು ಪ್ರೇಮದಲ್ಲಿ, ನಿರಾಶೆಯನುಭವಿಸುವ ಹರಿಣಿಯ ಪಾತ್ರದಲ್ಲಿ ಹಾಗೂ ಬೀಜಮಕ್ಕಿ ವಿಜಯ ಗಾಣಿಗರು ಕುಯುಕ್ತಿಯ ರಾಣಿ ಗಂಧವತಿಯ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ.

ರವೀಂದ್ರ ದೇವಾಡಿಗರು, ರಮೇಶ ಭಂಡಾರಿಯವರು ಹಾಗೂ ಪುರಂದರ ಮೂಡ್ಕಣಿಯವರು ಸಭ್ಯ, ನಿಯಂತ್ರಿತ ಹಾಸ್ಯ ನೀಡಿದ್ದಾರೆ. ರಾಜನ ಅಂಧಶ್ರದ್ಧೆಯನ್ನು ಅಣ್ಣಪ್ಪ ಗೌಡರು ಚೆನ್ನಾಗಿ ತೋರಿಸಿದ್ದಾರೆ. ವಿದ್ಯಾಧರ ರಾವ್ ಜಲವಳ್ಳಿಯವರು ಸೂರ್ಯಸೇನನಾಗಿ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ವೀರನ ಪಾತ್ರಕ್ಕೆ ಪೌರುಷ ಸ್ವಲ್ಪ ಕಡಿಮೆಯೆನಿಸಿತು. ಹಿರಿಯ ಕಲಾವಿದರಾದ ಗೋಪಾಲ ಆಚಾರ್ಯ ತೀರ್ಥಹಳ್ಳಿಯವರು ಸೂರ್ಯಸೇನನ ಎರಡನೆಯ ರೂಪಕ್ಕೆ ಹೆಚ್ಚು ಹುರುಪು ತುಂಬಿದ್ದಾರೆ. ಪ್ರಕಾಶ್ ಮೊಗವೀರ ಕಿರಾಡಿಯವರ ಅಮರಬಾಹು ಚಾಂಡಾಲನಿಂದ ಆಸ್ಥಾನಿಕನಾಗಿ ಬೆಳೆಯುವ ರೀತಿ ಕುತೂಹಲಕಾರಿಯಾಗಿದೆ. ಯಲಗುಪ್ಪರ ಹರಿಣಿಯ ಪಾತ್ರದೊಂದಿಗೆ ಅವರ ಅಮರಬಾಹುವಿನ 'ಕೆಮಿಸ್ಟ್ರೀ’ ಚೆನ್ನಾಗಿದೆ. ಮುಖ್ಯ ಪಾತ್ರಧಾರಿಗಳ ನಡುವೆ ಇದರ ಕೊರತೆಯಿದೆ.

ಇಂತಹ ಸಾಮಾಜಿಕ ವಿಷಯದ ಬಗ್ಗೆ ಕಥೆಯೊಂದನ್ನು ಹೆಣೆದಿರುವುದು ಪ್ರಶಂಸನೀಯವೇ. ಆದರೆ, ಒಟ್ಟಾರೆ ಪ್ರಸಂಗ ಕೆಲವು ಸುಧಾರಣೆಗಳನ್ನು ಬಯಸುತ್ತದೆ. ಪಾತ್ರಗಳ ಸೂಕ್ಷ್ಮ ವಿವರಣೆಯ ಕಡೆ ಗಮನ ಕೊಡಬೇಕೆನಿಸುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)