ಕಂದಾಯ ನಿವೇಶನ ಸಕ್ರಮಕ್ಕೆ ಚಿಂತನೆ: ವಿಶ್ವನಾಥ್

ಯಲಹಂಕ: ‘ಬೆಂಗಳೂರು ಸುತ್ತಮುತ್ತಲಿನ ಕಂದಾಯ ನಿವೇಶನಗಳನ್ನು ಅಕ್ರಮ-ಸಕ್ರಮ ಯೋಜನೆಯಡಿಯಲ್ಲಿ ಸಕ್ರಮಗೊಳಿಸುವ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ’ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.
ಕಡತನಮಲೆ ಗ್ರಾಮದಲ್ಲಿ ಆಯೋಜಿಸಿದ್ದ ಅರಕೆರೆ ಗ್ರಾಮಪಂಚಾಯ್ತಿಯ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ‘ಕಂದಾಯ ನಿವೇಶನಗಳನ್ನು ಖರೀದಿಸಿ ಮನೆಗಳನ್ನು ನಿರ್ಮಿಸಿಕೊಂಡು ಪಂಚಾಯ್ತಿಯಿಂದ ಮೂಲಸೌಕರ್ಯಗಳನ್ನು ಪಡೆದುಕೊಂಡಿರುವವರಿಗೆ ಪಂಚಾಯ್ತಿಯಿಂದ ಖಾತಾ ದೊರೆಯುತ್ತಿಲ್ಲ. ಇದರಿಂದ ಮಾರಾಟ ಮತ್ತು ಖರೀದಿಮಾಡಲು ಆಗುತ್ತಿಲ್ಲ’ ಎಂದರು.
‘ಮನೆಗಳ ಮಾಲೀಕರಿಗೆ ಶುಲ್ಕವಿಧಿಸಿ, ಸಕ್ರಮ ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಕುರಿತು ಅಂತಿಮ ತೀರ್ಮಾನವಾದರೆ ಗ್ರಾಮಠಾಣಾ ಸುತ್ತಮುತ್ತ ಮನೆಗಳನ್ನು ನಿರ್ಮಿಸಿಕೊಂಡಿರುವವರಿಗೆ ಅನುಕೂಲವಾಗಲಿದೆ. ಅಲ್ಲದೆ ಸರ್ಕಾರ ಮತ್ತು ಪಂಚಾಯ್ತಿಗೆ ಆದಾಯವೂ ಬರಲಿದೆ’ ಎಂದರು.
‘ಅರಕೆರೆ ಪಂಚಾಯ್ತಿಯು ಕೋವಿಡ್ ಸಂದರ್ಭದಲ್ಲಿಯೂ 3 ತಿಂಗಳ ಅವಧಿಯಲ್ಲಿ ₹1.90 ಕೋಟಿ ತೆರಿಗೆ ಸಂಗ್ರಹಿಸಿರುವುದು ಶ್ಲಾಘನೀಯ. ಗ್ರಾಮಸ್ಥರೇ ಸೇರಿಕೊಂಡು ಕಡತನಮಲೆ ಕೆರೆಯ ಹೂಳು ತೆಗೆದು ಅಭಿವೃದ್ಧಿ ಕಾರ್ಯ ಕೈಗೊಂಡು, ಬಹುತೇಕ ಪೂರ್ಣಗೊಳಿಸಿದ್ದಾರೆ. ಇದೇ ಮಾದರಿಯಲ್ಲಿ ಎಲ್ಲ ಪಂಚಾಯ್ತಿಗಳು ಕೆರೆಗಳನ್ನು ಅಭಿವೃದ್ಧಿಗೊಳಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.
ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ವೆಂಕಟೇಶ್, ಗ್ರಾಮಪಂಚಾಯ್ತಿ ಅಧ್ಯಕ್ಷ ಕೆ.ಆರ್. ತಿಮ್ಮೇಗೌಡ, ಉಪಾಧ್ಯಕ್ಷೆ ಮಂಜುಳಮ್ಮ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಾಗರಾಜ್, ಮುಖಂಡರಾದ ಸತೀಶ್ ಕಡತನಮಲೆ, ಮುನಿದಾಸಪ್ಪ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.