ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶವಂತಪುರ ರಸ್ತೆ ವಿಸ್ತರಣೆಗೆ ಕ್ರಮ: ಡಾ.ಸಿ.ಎನ್.ಅಶ್ವತ್ಥನಾರಾಯಣ

6 ತಿಂಗಳಲ್ಲಿ ಶೇ 50ರಷ್ಟು ಕಾಮಗಾರಿ ಪೂರ್ಣಗೊಳಿಸಲು ಸಚಿವರ ಸೂಚನೆ
Last Updated 1 ಸೆಪ್ಟೆಂಬರ್ 2021, 21:47 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರಗಳ ಗಡಿ ಭಾಗದಲ್ಲಿರುವ ಯಶವಂತಪುರದ ವಿವಿಧ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ತೋಟಗಾರಿಕೆ ಸಚಿವ ಮುನಿರತ್ನ ಅವರು ಈ ಭಾಗದಲ್ಲಿನ ಸಂಚಾರ ದಟ್ಟಣೆಗೆ ಪರ್ಯಾಯ ಮಾರ್ಗಗಳ ಬಗ್ಗೆ ಪರಿಶೀಲಿಸಿದರು.

ಜನರ ಅನುಕೂಲಕ್ಕಾಗಿ ಕೆಲವು ಯೋಜನೆಗಳನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣ ಮಾಡಬೇಕು ಎಂದು ತಾಕೀತು ಮಾಡಿದರು.

‘ಯಶವಂತಪುರ ವೃತ್ತದಿಂದ ಆರ್‌ಟಿಒ ಕಚೇರಿ ಮುಂಭಾಗದಲ್ಲಿ ಸಾಗುವ ರಸ್ತೆಯ ವಿಸ್ತರಣೆಗೆ ಕೂಡಲೇ ಕ್ರಮ ವಹಿಸಬೇಕು. ಆರು ತಿಂಗಳಲ್ಲಿ ಶೇ 50ರಷ್ಟು ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಸಚಿವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರಿಗೆ ಸೂಚನೆ ನೀಡಿದರು.

ಇದಕ್ಕೆ ಸ್ಪಂದಿಸಿದ ಆಯುಕ್ತರು, ‘ಕೂಡಲೇ ಈ ಕಾಮಗಾರಿ ಕೈಗೆತ್ತಿಕೊಂಡು ರಸ್ತೆಯನ್ನು ವಿಸ್ತರಣೆ ಮಾಡಲಾಗುವುದು. ವಿಶಾಲ ಪಾದಚಾರಿ ಮಾರ್ಗ ನಿರ್ಮಾಣದ ಜತೆಗೆ, ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದರು.

ಯಶವಂತಪುರ ಸರ್ಕಲ್‌ನಿಂದ ಮಾರುಕಟ್ಟೆವರೆಗೆ ಸಿಗ್ನಲ್ ಫ್ರೀ ಕಾರಿಡಾರ್ ಮಾಡುವ ಪ್ರಸ್ತಾವನೆ ಇದೆ. ಸಂಚಾರ ದಟ್ಟಣೆ ತಪ್ಪಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಮುನಿರತ್ನ ಹೇಳಿದರು.

ಯಶವಂತಪುರ ಮೀನು ಮಾರುಕಟ್ಟೆಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್ ಕಂಡು ಸಚಿವರು ಕಿಡಿಕಾರಿದರು.

‘ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಈ ಅಂಡರ್‌ಪಾಸ್‌ನಲ್ಲಿ ಮಳೆ ನೀರು ಹೊರಹೋಗುತ್ತಿಲ್ಲ. ಕೊಳಚೆ ನೀರು ಸೇರಿಕೊಂಡು ದುರ್ನಾತ ಬೀರುತ್ತಿತ್ತಲ್ಲದೆ, ಜನರು ಸಂಚಾರ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ತಕ್ಷಣ ಇದಕ್ಕೊಂದು ಪರಿಹಾರ ಕಲ್ಪಿಸಬೇಕು' ಎಂದು ಸಚಿವರು ನಿರ್ದೇಶನ ನೀಡಿದರು.

ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ: ‘ಯಶವಂತಪುರದಲ್ಲಿ ಯಲಹಂಕ ತಾಲ್ಲೂಕು ಪಂಚಾಯಿತಿಗೆ ಸೇರಿದ ಜಾಗವಿದ್ದು, ಅದರ ಪಕ್ಕದಲ್ಲಿ ಹೂವಿನ ಮಾರುಕಟ್ಟೆ ಇದೆ. ವ್ಯಾಪಾರಿಗಳು ಬೀದಿ ಬದಿಯಲ್ಲೇ ವ್ಯಾಪಾರ ಮಾಡುತ್ತಿದ್ದು ಇದರಿಂದ ಜನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಹೀಗಾಗಿ ಖಾಲಿ ಇರುವ ತಾಲ್ಲೂಕು ಪಂಚಾಯಿತಿ ಜಾಗದಲ್ಲಿ ಸುಸಜ್ಜಿತ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡುವ ಬಗ್ಗೆ ಯೋಜನೆ ಸಿದ್ಧಪಡಿಸಿದ್ದು ಅದರ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸಬೇಕು’ ಎಂದು ಸಚಿವ ಡಾ.ಅಶ್ವತ್ಥನಾರಾಯಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಶ್ಚಿಮ ವಿಭಾಗದ ಆಯುಕ್ತ ಬಸವರಾಜು, ಜಂಟಿ ಆಯುಕ್ತ ಶಿವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT