ಮಂಗಳವಾರ, ಜೂನ್ 2, 2020
27 °C
ಯಲಹಂಕ ರೈತರ ಸಂತೆಯಲ್ಲಿ ಜನಜಂಗುಳಿ

ತರಕಾರಿ ಖರೀದಿಗೆ ಮುಗಿಬಿದ್ದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ಇಲ್ಲಿನ ರೈತರ ಸಂತೆ ಬಳಿ ಭಾನುವಾರ ಬೆಳಗ್ಗೆ ಚಿಲ್ಲರೆ ಅಂಗಡಿಗಳ ವ್ಯಾಪಾರಿಗಳು ತರಕಾರಿಗಳನ್ನು ಖರೀದಿಸಲು ಮುಗಿಬಿದ್ದ ಪರಿಣಾಮ, ಭಾರೀ ಜನಜಂಗುಳಿ ಉಂಟಾಗಿ ಗ್ರಾಹಕರು ಹಾಗೂ ಮಾರಾಟಗಾರರು ತೊಂದರೆ ಅನುಭವಿಸಬೇಕಾಯಿತು.

ನಾಳೆ ಮಾರುಕಟ್ಟೆಯಲ್ಲಿ ತರಕಾರಿಗಳು ಸಿಗುತ್ತವೋ, ಇಲ್ಲವೋ ಎಂಬ ಆತಂಕದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಯಾವುದೇ ಭೀತಿಯಿಲ್ಲದೆ ಗುಂಪುಗುಂಪಾಗಿ ತರಕಾರಿಗಳನ್ನು ಕೊಳ್ಳಲು ಮುಗಿಬಿದ್ದರು. ಇದರ ಜೊತೆಗೆ ತರಕಾರಿಗಳನ್ನು ವಿಲೇವಾರಿ ಮಾಡಲು ಬಂದಿದ್ದ ವಾಹನಗಳು ದಟ್ಟಣೆಯಲ್ಲಿ ಸಿಲುಕಿ, ಅಲ್ಲಿಂದ ಹೊರಹೋಗಲು ಹರಸಾಹಸ ಪಡಬೇಕಾಯಿತು.

ಕೆಲವೇ ಕ್ಷಣಗಳಲ್ಲಿ ಈ ದೃಶ್ಯಗಳು ವಾಟ್ಸ್ ಆಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಇದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದು, ಜನರ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾದರು.

ಕೋಳಿಗಳ ಖರೀದಿಗೆ ಮುಗಿಬಿದ್ದ ಜನ: ರಾಜಾನುಕುಂಟೆ ಸಮೀಪದ ದಿಬ್ಬೂರಿನಲ್ಲಿರುವ ಕೋಳಿ ಫಾರಂನಲ್ಲಿ ಕಡಿಮೆ ದರದಲ್ಲಿ ಕೋಳಿಗಳನ್ನು ಖರೀದಿಸಲು ಜನರು ಮುಗಿಬಿದ್ದರು.

ಫಾರಂನಲ್ಲಿ ₹250ಕ್ಕೆ 5 ಕೆ.ಜಿ ಕೋಳಿ ದೊರೆಯುತ್ತದೆ ಎಂಬ ಮಾಹಿತಿ ತಿಳಿದ ಸುತ್ತಮುತ್ತಲ ಗ್ರಾಮಸ್ಥರು, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ, ಸರತಿಸಾಲಿನಲ್ಲಿ ಮತ್ತೆ ಕೆಲವರು ಗುಂಪುಗುಂಪಾಗಿ ನಿಂತು ಕೋಳಿಗಳ ಖರೀದಿಗೆ ಮುಂದಾದರು. ಯಾವುದೇ ಆತಂಕವಿಲ್ಲದೆ ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಕೋಳಿಗಳನ್ನು ಖರೀದಿಸಿದರು.

ನಂತರ ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ರಾಜಾನುಕುಂಟೆ ಪೊಲೀಸರು, ಜನರ ಗುಂಪನ್ನು ಚದುರಿಸಿ, ಮಾರಾಟವನ್ನು ನಿಲ್ಲಿಸಿದರು. ನಿಯಮ ಉಲ್ಲಂಘಿಸಿದ ಕೋಳಿ ಫಾರಂ ಮಾಲೀಕರಿಗೆ ನೋಟಿಸ್ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು