ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶವಂತಪುರ ನಿಲ್ದಾಣ| ಪ್ಲಾಟ್‌ಫಾರ್ಮ್‌ ಪಡಿಪಾಟಲು, ಪ್ರವೇಶಕ್ಕೆ ಕಾಯಬೇಕು ರೈಲು

ಯಶವಂತಪುರ ರೈಲು ನಿಲ್ದಾಣ ನವೀಕರಣ; ‍ಪ್ಲಾಟ್‌ಫಾರ್ಮ್‌ ಸಂಖ್ಯೆ ಹೆಚ್ಚಳವಿಲ್ಲ
Last Updated 2 ಡಿಸೆಂಬರ್ 2022, 20:59 IST
ಅಕ್ಷರ ಗಾತ್ರ

ಬೆಂಗಳೂರು: ರೈಲುಗಳ ವೇಗ ಹೆಚ್ಚಿಸಲು ವಂದೇ ಭಾರತ್‌ ರೀತಿಯ ರೈಲುಗಳನ್ನು ಪರಿಚಯಿಸುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ನಿಲ್ದಾಣಗಳನ್ನು ಹೈಟೆಕ್ ಮಾಡುವ ಯೋಜನೆಗಳೂ ಆರಂಭವಾಗಿವೆ. ಆದರೆ, ನಿಲ್ದಾಣಗಳನ್ನು ಪ್ರವೇಶಿಸಲು ರೈಲುಗಳ ಕಾದು ನಿಲ್ಲುವ ಸಮಸ್ಯೆಗೆ ಪರಿಹಾರ ಇಲ್ಲವಾಗಿದೆ.

ಪ್ರಯಾಣದ ಅವಧಿ ಕಡಿಮೆ ಮಾಡುವ ಯೋಜನೆ ಭಾಗವಾಗಿ ಚೆನ್ನೈ ಮತ್ತು ಮೈಸೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಾಗಿದೆ. ನಿಲ್ದಾಣಗಳ ಅಂದ ಹೆಚ್ಚಿಸುವ ಯೋಜನೆಗಳಿಗೂ ಚಾಲನೆ ಸಿಕ್ಕಿದೆ. ಅದರ ಭಾಗವಾಗಿ ಯಶವಂತಪುರ ರೈಲು ನಿಲ್ದಾಣವನ್ನು ‘ಸಿಟಿ ಸೆಂಟರ್’ ಆಗಿ ನವೀಕರಿಸಲಾಗುತ್ತಿದೆ. ₹380 ಕೋಟಿ ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಮತ್ತು ವಿಶಾಲ ದ್ವಾರಗಳು, ಮನರಂಜನಾ ತಾಣಗಳನ್ನು ನಿರ್ಮಿಸಲಾಗುತ್ತಿದೆ.

‘ಈಗ ಪ್ರತಿನಿತ್ಯ 50 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದು, ನವೀಕರಣಗೊಂಡ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ಜನರು ಸಂಚರಿಸಲು ಅನುಕೂಲವಾಗಲಿದೆ ಎನ್ನುವುದು ರೈಲ್ವೆ ಅಧಿಕಾರಿಗಳೇ ನೀಡುವ ಮಾಹಿತಿ. ಆದರೆ, ಇಡೀ ಯೋಜನೆಯಲ್ಲಿ ಪ್ಲಾಟ್‌ಫಾರ್ಮ್‌ಗಳ ಸಂಖ್ಯೆ ಹೆಚ್ಚಿಸುವ ಪ್ರಸ್ತಾಪ ಇಲ್ಲ. ಇನ್ನು ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗುವುದು ಹೇಗೆ’ ಎನ್ನುವುದು ರೈಲ್ವೆ ಹೋರಾಟಗಾರರ ಪ್ರಶ್ನೆ.

ಯಶವಂತಪುರಕ್ಕೆ ಬರುವ ರೈಲುಗಳು ಸರಾಸರಿ 30 ನಿಮಿಷ ತಡವಾಗುತ್ತಿವೆ. ಮಂಗಳೂರು, ತುಮಕೂರು, ಯಲಹಂಕ ಕಡೆಯಿಂದ ಬರುವ ರೈಲುಗಳೆಲ್ಲವೂ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದೇ ಮುಂದೆ ಸಾಗಬೇಕು. ಚಿಕ್ಕಬಾಣಾವರದ ತನಕ ಸಮಯಕ್ಕೆ ಸರಿಯಾಗಿ ಬರುವ ರೈಲುಗಳು, ಯಶವಂತಪುರಕ್ಕೆ ತಡವಾಗಿ ಸಾಗುತ್ತಿವೆ. ಚಿಕ್ಕಬಾಣಾವರ ನಿಲ್ದಾಣ ಅಥವಾ ಯಶವಂತಪುರ ಮತ್ತು ಚಿಕ್ಕಬಾಣಾವರ ನಿಲ್ದಾಣದ ನಡುವೆ ಸಿಗ್ನಲ್‌ಗಳ ಬಳಿ ರೈಲುಗಳನ್ನು ನಿಲ್ಲಿಸಲಾಗುತ್ತದೆ.

ಸಮಯಕ್ಕೆ ಸರಿಯಾಗಿ ತಲುಪುವ ಲೆಕ್ಕಾಚಾರದಲ್ಲಿ ರೈಲು ಹತ್ತಿದವರು ಅಲ್ಲೇ ಚಡಪಡಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಹಲವರು ಚಿಕ್ಕಬಾಣಾವರದಲ್ಲೇ ಇಳಿದು ಬೇರೆ ವ್ಯವಸ್ಥೆ ಮಾಡಿಕೊಂಡು ಸಂಚರಿಸುತ್ತಾರೆ. ಇನ್ನು ಕೆಲವರು ರೈಲು ಪ್ರಯಾಣದಿಂದಲೇ ದೂರ ಉಳಿಯುತ್ತಾರೆ.

‘ಕೆಆರ್‌ಎಸ್‌ ರೈಲು ನಿಲ್ದಾಣದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಕೆಂಗೇರಿ ದಾಟಿದ ಬಳಿಕ ಅಲ್ಲಲ್ಲೇ ನಿಲುಗಡೆ ಮಾಡಲಾಗುತ್ತದೆ. ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಗ ಸಿಕ್ಕ ಬಳಿಕ ಗ್ರೀನ್‌ ಸಿಗ್ನಲ್ ದೊರಕುತ್ತದೆ. ಮೈಸೂರು, ಮಂಡ್ಯ, ರಾಮನಗರದಿಂದ ಬೆಂಗಳೂರಿಗೆ ಪ್ರತಿನಿತ್ಯ ಉದ್ಯೋಗಿಗಳು ಸಂಚರಿಸುತ್ತಾರೆ. ರೈಲುಗಳು ಕೆಎಸ್‌ಆರ್ ರೈಲು ನಿಲ್ದಾಣ ತಲುಪದೆ ಮಧ್ಯದಲ್ಲೇ ನಿಂತರೆ ಕಚೇರಿ ತಲುಪಲಾಗದೆ ಪರದಾಡಬೇಕಾಗುತ್ತದೆ. ಇದು ಪ್ರತಿನಿತ್ಯದ ಗೋಳು’ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಾರೆ.

‘ರೈಲು ನಿಲ್ದಾಣಗಳ ಕಟ್ಟಡಗಳನ್ನಷ್ಟೇ ಮರು ವಿನ್ಯಾಸಗೊಳಿಸಿದರೆ ಸಾಲದು. ರೈಲುಗಳಲ್ಲೇ ಪ್ರಯಾಣಿಕರು ಕಾಯುವ ಸ್ಥಿತಿಯನ್ನೂ ತಪ್ಪಿಸಬೇಕು’ ಎನ್ನುವುದು ಪ್ರಯಾಣಿಕರ ಒತ್ತಾಯ.

‘ಇದು ನಿಲ್ದಾಣ ನವೀಕರಣಕ್ಕೆ ಸಂಬಂಧಿಸಿದ ಯೋಜನೆಯಾಗಿದ್ದು, ಪ್ಲಾಟ್‌ಫಾರ್ಮ್‌ ಸಂಖ್ಯೆ ಹೆಚ್ಚಳ ಈ ಯೋಜನೆಯಲ್ಲಿ ಇಲ್ಲ. ಯಾರ್ಡ್‌ ಮರು ರೂಪಿಸುವ ಸಂದರ್ಭದಲ್ಲಿ ಇದನ್ನು ಪರಿಗಣಿಸಲಾಗುತ್ತದೆ. ಈಗಿರುವ ರೈಲುಗಳ ಸಂಚಾರಕ್ಕೆ ಪ್ಲಾಟ್‌ಫಾರ್ಮ್‌ ಸಂಖ್ಯೆ ಸೂಕ್ತವಾಗಿದೆ’ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದರು.

‘ಪ್ರಯಾಣಿಕರ ಅನನುಕೂಲ ತಪ್ಪಬೇಕು’

‘ಎರಡು ವರ್ಷಗಳ ಹಿಂದೆಯಷ್ಟೆ ಯಶವಂತಪುರ ನಿಲ್ದಾಣ ನವೀಕರಿಸಿದ್ದು, ಈಗ ಮತ್ತೊಮ್ಮೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಇದರಿಂದ ರೈಲು ಪ್ರಯಾಣಿಕರಿಗೆ ಯಾವುದೇ ಪ್ರಯೋಜನ ಇಲ್ಲ’ ಎಂದು ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್ ಹೇಳಿದರು.

‘ಆರು ಪ್ಲಾಟ್‌ಫಾರ್ಮ್‌ಗಳಿದ್ದು, ಮರು ಅಭಿವೃದ್ಧಿ ಯೋಜನೆಯಲ್ಲಿ ಇವುಗಳ ಸಂಖ್ಯೆ ಹೆಚ್ಚಿಸಿದ್ದರೆ ಅನುಕೂಲ ಆಗುತ್ತಿತ್ತು. ₹380 ಕೋಟಿ ಮೊತ್ತದ ಯೋಜನೆಯಲ್ಲೂ ಈ ಅನನುಕೂಲ ತಪ್ಪದಿರುವುದು ವಿಪರ್ಯಾಸ’ ಎಂದರು.

ನಿಲ್ದಾಣಗಳನ್ನು ಪ್ರವೇಶಿಸಲು ರೈಲುಗಳು ಕಾಯುವ ಸ್ಥಿತಿ ಯಶವಂತಪುರ ಮತ್ತು ಕೆಎಸ್‌ಆರ್ ರೈಲು ನಿಲ್ದಾಣಗಳಲ್ಲಿ ಇದೆ. ಇದನ್ನು ತಪ್ಪಿಸದ ಹೊರತು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿದರೆ ಪ್ರಯೋಜನವಾಗದು’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT