ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ ನಿರಾಕರಿಸಿದ ಯುವತಿ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

Published 7 ಡಿಸೆಂಬರ್ 2023, 23:56 IST
Last Updated 7 ಡಿಸೆಂಬರ್ 2023, 23:56 IST
ಅಕ್ಷರ ಗಾತ್ರ

ಬೆಂಗಳೂರು: ತನ್ನನ್ನು ಪ್ರೀತಿಸಲು ಯುವತಿ ನಿರಾಕರಿಸಿದರೆಂಬ ಕಾರಣಕ್ಕೆ ರಾಕೇಶ್ (26) ಅವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ತೀವ್ರ ಗಾಯಗೊಂಡಿದ್ದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಗುರುವಾರ ಮೃತಪಟ್ಟಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಆನೇಕಲ್ ತಾಲ್ಲೂಕಿನ ಜಿಗಣಿ ಕಲ್ಲುಬಾಲು ಗ್ರಾಮದ ರಾಕೇಶ್, ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು. ಹೆಮ್ಮಿಗೆಪುರದಲ್ಲಿ ರಾಕೇಶ್‌ ವಾಸವಿದ್ದರು. ಯುವತಿಯೊಬ್ಬರು ಪೋಷಕರ ಜೊತೆ ಕೋಡಿಪಾಳ್ಯದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಹೆಮ್ಮಿಗೆಪುರದಲ್ಲಿರುವ ಸಂಬಂಧಿಕರ ಮನೆಗೆ ಯುವತಿ ಆಗಾಗ ಬಂದು ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ರಾಕೇಶ್ ಹಾಗೂ ಯುವತಿ ನಡುವೆ ಸ್ನೇಹ ಬೆಳೆದಿತ್ತು. ನಂತರ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರೆಂದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ಯುವತಿ ಮನೆ ಎದುರು ಆತ್ಮಹತ್ಯೆ: ‘ಪೋಷಕರು ಯುವತಿಗೆ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಸಿದ್ದರು. ಈ ಸಂಗತಿ ತಿಳಿಯುತ್ತಿದ್ದಂತೆ ರಾಕೇಶ್, ಯುವತಿಯನ್ನು ಸಂಪರ್ಕಿಸಿದ್ದ. ಆದರೆ, ಯುವತಿ ಹೆಚ್ಚು ಮಾತನಾಡಿರಲಿಲ್ಲ. ತನ್ನನ್ನು ಮಾತನಾಡಿಸದಂತೆ ತಾಕೀತು ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಪೆಟ್ರೋಲ್ ಬಾಟಲಿ ಸಮೇತ ಬುಧವಾರ ಮಧ್ಯಾಹ್ನ ಯುವತಿ ಮನೆ ಬಳಿ ಹೋಗಿದ್ದ ರಾಕೇಶ್, ತನ್ನನ್ನು ಪ್ರೀತಿಸುವಂತೆ ಯುವತಿಗೆ ಹೇಳಿದ್ದ. ಆದರೆ, ಯುವತಿ ಆತನ ಕೋರಿಕೆಯನ್ನು ನಿರಾಕರಿಸಿದ್ದರು. ಇದೇ ವಿಚಾರವಾಗಿ ಪರಸ್ಪರ ಮಾತಿನ ಚಕಮಕಿ ನಡೆದಿತ್ತು. ಪೋಷಕರು ಸಮಾಧಾನಪಡಿಸಿದರೂ ಪರಿಸ್ಥಿತಿ ತಿಳಿಗೊಂಡಿರಲಿಲ್ಲ.’

‘ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೂಗಾಡಿದ್ದ ರಾಕೇಶ್, ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಕೆಲ ಕ್ಷಣಗಳಲ್ಲಿ ಇಡೀ ದೇಹಕ್ಕೆ ಬೆಂಕಿ ಆವರಿಸಿತ್ತು. ಸ್ಥಳೀಯರು ಬೆಂಕಿ ಆರಿಸಿ ರಾಕೇಶ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ದೇಹದ ಮೇಲೆ ಶೇ 60 ರಷ್ಟು ಸುಟ್ಟ ಗಾಯಗಳಾಗಿದ್ದವು’ ಎಂದು ತಿಳಿಸಿದರು.

‘ರಾಕೇಶ್ ಸಾವಿನ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೋಷಕರು, ಸಂಬಂಧಿಕರು ಹಾಗೂ ಯುವತಿ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT