ಗುರುವಾರ , ಡಿಸೆಂಬರ್ 2, 2021
20 °C

ಯುವ ನೀತಿ: ಬಾಲಸುಬ್ರಹ್ಮಣ್ಯಂ ನೇತೃತ್ವದ ಸಮಿತಿ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕರ್ನಾಟಕ ಯುವ ನೀತಿ– 2021’ ರೂಪಿಸಲು ತಜ್ಞರ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸ್ವಾಮಿ ವಿವೇಕಾನಂದ ಯುವ ಚಳವಳಿ ಸಂಸ್ಥಾಪಕ ಡಾ.ಆರ್‌.ಬಾಲಸುಬ್ರಹ್ಮಣ್ಯಂ ನೇತೃತ್ವದಲ್ಲಿ 13 ಸದಸ್ಯರ ನೂತನ ಸಮಿತಿ ರಚಿಸಲಾಗಿದೆ. ತಜ್ಞರ ಸಮಿತಿಯು ರಾಜ್ಯಾದ್ಯಂತ ಸಮಗ್ರ ಆಧ್ಯಯನ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಎರಡು ತಿಂಗಳೊಳಗೆ ವರದಿ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

2012 ರಲ್ಲಿ ಕರ್ನಾಟಕ ರಾಜ್ಯ ಯುವ ನೀತಿ ರೂಪಿಸಲಾಗಿತ್ತು. ಈಗ ಬದಲಾದ ಕಾಲಕ್ಕೆ ಅನುಗುಣವಾಗಿ ಹೊಸ ಯುವ ನೀತಿ ರೂಪಿಸುವುದು ಅವಶ್ಯಕತೆ ಇದೆ. ಆದ್ದರಿಂದ ತಜ್ಞರ ಸಮಿತಿ ರಚಿಸಲಾಗಿದ್ದು, ಇದರಿಂದ ಯುವ ಜನತೆ ತಮ್ಮ ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಸಮಗ್ರ ಮತ್ತು ಕೌಶಲ್ಯಭರಿತ ನೀತಿಯನ್ನು ರೂಪಿಸಲಾಗುವುದು ಎಂದು ಯುವ ಜನ ಸಬಲೀಕರಣ ಸಚಿವ ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಡ್ರಗ್ಸ್‌ ಸೇರಿದಂತೆ ವಿವಿಧ ದುಶ್ಚಟಗಳಿಗೆ ಬಲಿಯಾಗುತ್ತಿದೆ. ಯುವಕರು ದಾರಿ ತಪ್ಪದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು, ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬಗ್ಗೆ ಆದ್ಯತೆ ನೀಡುವುದು, ಯುವ ಸಂಘಟನೆಗಳ ಮೂಲಕ ಕ್ರೀಡೆಗೆ ಒತ್ತು ನೀಡುವುದು, ಯುವ ಜನತೆಯಲ್ಲಿ ನಾಯಕತ್ವ ಗುಣವನ್ನು ಬೆಳೆಸುವುದು ಸೇರಿದಂತೆ  ಯುವ ಜನತೆಗೆ ಅನುಕೂಲವಾಗುವಂತೆ ನೀತಿ ರೂಪಿಸಲಾಗುವುದು ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳ ಮೂಲಕ ಯುವ ಸಮುದಾಯಕ್ಕೆ ಕೋಟ್ಯಂತರ ಹಣವನ್ನು ಖರ್ಚು ಮಾಡುತ್ತಿದೆ. ಈ ಯೋಜನೆಗಳು ಯುವ ಜನತೆಗೆ ಸರಿಯಾದ ರೀತಿಯಲ್ಲಿ ತಲುಪಲು ಹೊಸ ಯುವ ನೀತಿ ರೂಪಿಸುವುದರಿಂದ ಅನುಕೂಲವಾಗಲಿದೆ ಎಂದು ನಾರಾಯಣಗೌಡ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು