ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮೂಲ ಸಮೀಕ್ಷೆ 20ಕ್ಕೆ ಪೂರ್ಣ: ಮರಿಸ್ವಾಮಿ

Last Updated 17 ಜೂನ್ 2020, 16:50 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠಕ್ಕೆ (ಎನ್‍ಜಿಟಿ) ಜಲಮೂಲಗಳ ಮಾಹಿತಿ ಸಲ್ಲಿಸಲು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ 357 ಕೆರೆಗಳ ಸಮೀಕ್ಷೆ ಕೈಗೊಳ್ಳಲಾಗಿದ್ದು, ಜೂನ್ 20ಕ್ಕೆ ಪೂರ್ಣಗೊಳ್ಳಲಿದೆ’ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಿ.ಮರಿಸ್ವಾಮಿ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 421 ಕೆರೆಗಳಿವೆ. ಈ ಪೈಕಿ 21 ಕೆರೆಗಳನ್ನು ಪುರಸಭೆ ವ್ಯಾಪ್ತಿಗೆ ಹಸ್ತಾಂತರಿಸಲಾಗಿದೆ. ಉಳಿದ 400 ಕೆರೆಗಳಲ್ಲಿ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ ಮತ್ತು ಆನೇಕಲ್ ತಾಲ್ಲೂಕುಗಳ 26 ಹೋಬಳಿಗಳ ವ್ಯಾಪ್ತಿಯಲ್ಲಿರುವ 357 ಕೆರೆಗಳು ಸಮೀಕ್ಷೆಗೆ ಒಳಪಡಲಿವೆ’ ಎಂದರು.

‘ಜೂ.15ರಿಂದ ಸಮೀಕ್ಷೆ ಆರಂಭಗೊಂಡಿದೆ. ಕೆರೆಗಳ ನೀರಿನ ಪ್ರಮಾಣ, ನೀರಿನ ಮಟ್ಟ, ಜಲಚರಗಳು, ಮೀನುಗಾರಿಕೆ, ಕೆರೆ ಬದಿಯ ಮಣ್ಣಿನ ಏರಿ, ಹೂಳು ಮತ್ತು ಒತ್ತುವರಿಗಳ ಸಮಗ್ರ ಮಾಹಿತಿಯನ್ನು ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರದ (ಕೆಎಸ್‌ಆರ್‌ಎಸ್‌ಎಸಿ) kgis.ksrsac.in/tis ತಂತ್ರಾಂಶದಲ್ಲಿ ನಮೂದಿಸಲಾಗುವುದು’ ಎಂದರು.

‘ಸಮೀಕ್ಷೆ ನಡೆಸಲು ಹೋಬಳಿ ಮಟ್ಟದಲ್ಲಿ ರಚನೆಯಾಗಿರುವ 16 ತಂಡಗಳು, ನಿಗದಿತ ಸಮಯದಲ್ಲಿ ಕೆರೆಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಿವೆ. ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಇವರ ಅಧೀನದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಇರಲಿದ್ದಾರೆ’ ಎಂದು ವಿವರಿಸಿದರು.

‘ಕೆಎಸ್‌ಆರ್‌ಎಸ್‌ಎಸಿ ಸಿದ್ಧಪಡಿಸಿರುವ 'ಜಲಾಮೃತ' ಮೊಬೈಲ್ ಆ್ಯಪ್ ನಲ್ಲಿ ಕೆರೆಗಳನ್ನು ಜಿಯೋಟ್ಯಾಗ್ ಮಾಡಲಾಗುವುದು. ಕೆರೆಗಳ ವಸ್ತುಸ್ಥಿತಿಯ ಛಾಯಾಚಿತ್ರಗಳು ಹಾಗೂ ಕೆರೆಗಳ ಸ್ವಾಮ್ಯಕ್ಕೆ ಪಡೆದ ಇಲಾಖೆಗಳ ದೃಢೀಕರಣ ಮಾಡಲಾಗುವುದು. ಜೂ.22ರೊಳಗೆ ಕೆಎಸ್‌ಆರ್‌ಎಸ್‌ಎಸಿ ವೆಬ್‍ಸೈಟ್‍ನಲ್ಲಿ ಎಲ್ಲ ಮಾಹಿತಿ ನಮೂದಿಸಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT