ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಂಡ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ: ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ

Last Updated 18 ಜೂನ್ 2018, 14:10 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಪುಲಕೇಶಿನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ.

ಜೆಡಿಎಸ್‌ನಿಂದ ಅಮಾನತುಗೊಂಡ ಬಳಿಕ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದು ಕಣಕ್ಕಿಳಿದಿದ್ದ ಅವರು 97,574 ಮತಗಳನ್ನು ಗಳಿಸಿ, ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಬಿ. ಪ್ರಸನ್ನ ಕುಮಾರ್‌ (15,948) ವಿರುದ್ಧ 81,626 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

2016ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಏಳು ಶಾಸಕರಲ್ಲಿ ಶ್ರೀನಿವಾಸಮೂರ್ತಿ ಅವರೂ ಒಬ್ಬರು. ಆಗ ಯಾರ ವಿರುದ್ಧ ತೊಡೆತಟ್ಟಿ ದ್ದರೋ ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ.

ಬೆಟ್ಟದಷ್ಟಿರುವ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಅವರೊಂದಿಗೆ ಸೇರಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಸವಾಲು ಶಾಸಕರ ಮುಂದಿದೆ.

‘ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನ ನನಗೆ ಇಷ್ಟೊಂದು ಮತಗಳ ಅಂತರದ ಗೆಲುವು ನೀಡಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಅವರ ಋಣ ತೀರಿಸುತ್ತೇನೆ’ ಎನ್ನುತ್ತಾರೆ ಅವರು.

* ಮುಂದಿನ ಐದು ವರ್ಷ ಕ್ಷೇತ್ರದ ಅಭಿವೃದ್ಧಿಗೆ ನೀವು ಏನು ಮಾಡುತ್ತೀರಿ?
ತ್ರದಲ್ಲಿರುವ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಹಾಡಬೇಕು. ಬಡವರಿಗೆ ಮನೆಗಳನ್ನು ಕಟ್ಟಿಕೊಡಬೇಕು. ವಿದ್ಯುತ್‌ ಸಮಸ್ಯೆ ಬಗೆಹರಿಸಬೇಕು. ರಸ್ತೆಗಳ ವಿಸ್ತರಣೆ ಮಾಡಬೇಕಾಗಿದ್ದು, ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತೇನೆ.

* ಹಾಗಿದ್ದರೆ, ಈ ಹಿಂದೆ ಐದು ವರ್ಷ ಏಕೆ ಮಾಡಲಿಲ್ಲ?
ಹಿಂದೆಯೂ ಮಾಡಿದ್ದೇನೆ. ಕ್ಷೇತ್ರದಲ್ಲಿ ಬಡ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅವರಿಗೆ ವಸತಿ ಸೌಕರ್ಯ ಕಲ್ಪಿಸಬೇಕಾಗಿದೆ. ಪ್ರದೇಶ, ಬಡಾವಣೆ ವಿಸ್ತಾರವಾದಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿರುತ್ತವೆ. ಐದು ವರ್ಷಗಳಲ್ಲಿ ಸಾಧ್ಯವಾದಷ್ಟು ಮಾಡಿದ್ದೇನೆ.

* ಜನ ನಿಮ್ಮನ್ನು ಏಕೆ ಗೆಲ್ಲಿಸಿದ್ದಾರೆ?
ಹಿಂದೆ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಅವರ ಕಷ್ಟ–ಸುಖಗಳಿಗೆ ನೆರವಾಗಿದ್ದನ್ನು ಜನ ನೆನಪಿಟ್ಟುಕೊಂಡಿದ್ದಾರೆ.

* ನಿಮ್ಮ ಕ್ಷೇತ್ರದ ಪ್ರಮುಖ ಸಮಸ್ಯೆಗಳೇನು?
ರಸ್ತೆ, ಕುಡಿಯುವ ನೀರು, ಸರ್ಕಾರಿ ಶಾಲೆ, ಕಾಲೇಜುಗಳ, ಸುಸಜ್ಜಿತ ಆಸ್ಪತ್ರೆಗಳ ಕೊರತೆ ಮತ್ತು ವಿದ್ಯುತ್‌ ಸಮಸ್ಯೆ.

* ದಿನನಿತ್ಯ ಎಷ್ಟು ಜನರನ್ನು ಭೇಟಿ ಮಾಡುತ್ತೀರಿ. ಅವರು ನಿಮ್ಮ ಮುಂದಿಟ್ಟಿರುವ ಪ್ರಮುಖ ಅಹವಾಲುಗಳೇನು?
ನೂರಾರು ಜನರು ನಿತ್ಯವೂ ಬರುತ್ತಾರೆ. ಈಗ ಶಾಲೆಗಳಿಗೆ ಪ್ರವೇಶ ಆರಂಭವಾಗಿರುವುದರಿಂದ ಶಾಲಾ ಶುಲ್ಕ, ಶಾಲೆ ಪ್ರವೇಶಕ್ಕೆ ಸಂಬಂಧಿಸಿದಂತೆ ಜನ ಅಹವಾಲು ತೆಗೆದುಕೊಂಡು ಬರುತ್ತಾರೆ.

* ಬೆಂಗಳೂರಿನಲ್ಲಿ ಅಧಿವೇಶನ ನಡೆಯುವ ವೇಳೆ ನಗರದ ಶಾಸಕರ ಹಾಜರಾತಿ ಕಡಿಮೆ ಇರುತ್ತದೆ. ನಿಮ್ಮ ಹಾಜರಾತಿ ಎಷ್ಟು ಇರುತ್ತದೆ?
ಅನಿವಾರ್ಯ ಸಂದರ್ಭ ಹೊರತುಪಡಿಸಿ ಅಧಿವೇಶನಕ್ಕೆ ಹಾಜರಾಗಿದ್ದೇನೆ, ಮುಂದೆ ಗೈರಾಗದಿರಲು ನಿರ್ಧರಿಸಿದ್ದೇನೆ

* ಬ್ರ್ಯಾಂಡ್‌ ಬೆಂಗಳೂರಿಗೆ ನೀವು 28 ಶಾಸಕರು ಸೇರಿ ಏನು ಮಾಡುತ್ತೀರಿ?
ಬ್ರ್ಯಾಂಡ್‌ ಬೆಂಗಳೂರಿಗೆ ಎಲ್ಲ ರೀತಿಯ ನೆರವು ನೀಡುತ್ತೇನೆ. ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಫ್ಲೈಓವರ್‌ ಅಥವಾ ಉಕ್ಕಿನ ಸೇತುವೆ ನಿರ್ಮಿಸುವ ಪ್ರಸ್ತಾವವನ್ನು ಸಿ.ಎಂ. ಮುಂದಿಡುತ್ತೇನೆ. ಫ್ಲೈಓವರ್‌ ಅಥವಾ ಉಕ್ಕಿನ ಸೇತುವೆ ನಿರ್ಮಾಣವಾದರೆ ಸಂಚಾರ ದಟ್ಟಣೆ ಕಡಿಮೆ ಆಗಿ ಸಮಯದ ಉಳಿತಾಯ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT