ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಾನಿಕ್ ಸಿಟಿಗೆ ನಗರ ಸ್ಥಳೀಯ ಸಂಸ್ಥೆಯ ಮಾನ್ಯತೆ

Last Updated 20 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯವನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಮಾಹಿತಿ ತಂತ್ರಜ್ಞಾನ ಕಂಪೆನಿಗಳೇ ಹೆಚ್ಚಿರುವ ಎಲೆಕ್ಟ್ರಾನಿಕ್ ಸಿಟಿಯನ್ನು ನಗರ ವ್ಯಾಪ್ತಿಗೆ ಸೇರಿಸಬೇಕೆಂಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಬೇಡಿಕೆಗೆ ರಾಜ್ಯ ಸರ್ಕಾರ ತಣ್ಣೀರೆರಚಿದೆ.

ಏಕೆಂದರೆ, ಎಲೆಕ್ಟ್ರಾನಿಕ್ ಸಿಟಿಗೆ ನಗರ ಸ್ಥಳೀಯ ಸಂಸ್ಥೆಯ (ಟೌನ್ ಶಿಪ್ ಮಾದರಿ) ಮಾನ್ಯತೆ ನೀಡುವ ಸಂಬಂಧ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ವಾರ್ಷಿಕ ಸುಮಾರು 300 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಿ ಎಲೆಕ್ಟ್ರಾನಿಕ್ ಸಿಟಿಯನ್ನು ನಗರ ವ್ಯಾಪ್ತಿಗೆ ಸೇರಿಸಬೇಕು ಎಂಬ ನಿರ್ಣಯ ಅಂಗೀಕರಿಸಿದ್ದ ಪಾಲಿಕೆ ತೀರ್ಮಾನಕ್ಕೆ ಬೆಲೆ ಇಲ್ಲದಂತಾಗಿದೆ.

ಎಲೆಕ್ಟ್ರಾನಿಕ್ ಸಿಟಿಯನ್ನು ಅಧಿಸೂಚಿತ ಪ್ರದೇಶವೆಂದು ಘೋಷಿಸಲು ಕಳೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿರುವುದರಿಂದ ಈ ಪ್ರದೇಶವನ್ನು ನಗರ ವ್ಯಾಪ್ತಿಗೆ ಸೇರಿಸಲು ಬಿಬಿಎಂಪಿ ನಡೆಸಿದ ಪ್ರಯತ್ನ ಕೊನೆಗೂ ಕೈಗೂಡದಂತಾಗಿದೆ.

ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಪಾಲಿಕೆ ಹೆಚ್ಚುತ್ತಿರುವ ಸಾಲ ತೀರಿಸಿಕೊಳ್ಳಲು ತನ್ನ ಆಸ್ತಿಗಳನ್ನು `ಹುಡ್ಕೊ~ ಸೇರಿದಂತೆ ಮತ್ತಿತರ ಸಂಸ್ಥೆಗಳಿಗೆ ಅಡಮಾನವಿಟ್ಟು ಸಾಲ ಪಡೆಯುತ್ತಿರುವ ಸನ್ನಿವೇಶ ಎದುರಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವರಮಾನ ಸಂಗ್ರಹಿಸುವ ಉದ್ದೇಶದಿಂದ ಎಲೆಕ್ಟ್ರಾನಿಕ್ ಸಿಟಿಯ ಮೇಲೆ ಕಣ್ಣಿಟ್ಟಿತ್ತು.

ಇತ್ತೀಚೆಗೆ ನಡೆದ ಬಿಬಿಎಂಪಿಯ ಎರಡು ಸಾಮಾನ್ಯ ಸಭೆಗಳಲ್ಲಿ ಈ ಬಗ್ಗೆ ಸುದಿರ್ಘ ಚರ್ಚೆ ನಡೆದಿತ್ತು. ಯಡಿಯೂರು ವಾರ್ಡ್‌ನ ಬಿಜೆಪಿ ಸದಸ್ಯ ಎನ್.ಆರ್. ರಮೇಶ್, ಎಲೆಕ್ಟ್ರಾನಿಕ್ ಸಿಟಿಯ ವರಮಾನಕ್ಕೆ ಸಂಬಂಧಿಸಿದಂತೆ ಅಂಕಿ-ಅಂಶ ಸಹಿತ ಸಭೆಗೆ ಮಾಹಿತಿ ಒದಗಿಸಿದ್ದರು.

ಅಂತಿಮವಾಗಿ ಎಲೆಕ್ಟ್ರಾನಿಕ್ ಸಿಟಿಯನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಸಭೆಯಲ್ಲಿ ಸರ್ವಾನುಮತದ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು. ಈ ನಡುವೆಯೇ, ರಾಜ್ಯ ಸರ್ಕಾರ ಎಲೆಕ್ಟ್ರಾನಿಕ್ ಸಿಟಿಯನ್ನು ಅಧಿಸೂಚಿತ ಪ್ರದೇಶವೆಂದು ಘೋಷಿಸಿ ಅದಕ್ಕೆ ನಗರ ಸ್ಥಳೀಯ ಸಂಸ್ಥೆಯ ಮಾನ್ಯತೆ ನೀಡಲು ತೀರ್ಮಾನ ಕೈಗೊಂಡಿದೆ.

ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಹಾಗೂ ಇತರ ಕೈಗಾರಿಕಾ ಸಂಸ್ಥೆಗಳು ಸೇರಿ ಚುನಾವಣಾ ಮೂಲಕ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ತೆರಿಗೆ ಸಂಗ್ರಹಿಸಲು ಅವಕಾಶವಿದೆ. ಅ್ಲ್ಲಲದೆ, ಮೂಲಭೂತ ಸೌಲಭ್ಯಗಳನ್ನೂ ತಾವೇ ಕಲ್ಪಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್ `ಪ್ರಜಾವಾಣಿ~ಗೆ ತಿಳಿಸಿದರು.

`ನಗರಾಭಿವೃದ್ಧಿ ಇಲಾಖೆಯ ಪ್ರಸ್ತಾವದ ಮೇರೆಗೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ~ ಎಂದರು.

ಪಾಲಿಕೆಗೆ ಸೇರಲು ಸಾಧ್ಯವಿಲ್ಲ: `ಎಲೆಕ್ಟ್ರಾನಿಕ್ ಸಿಟಿಗೆ ನಗರ ಸ್ಥಳೀಯ ಸಂಸ್ಥೆಯ ಮಾನ್ಯತೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತೀರ್ಮಾನ ಕೈಗೊಂಡಿದ್ದರೆ ಅದು ಯಾವ ಕಾರಣಕ್ಕೂ ಪಾಲಿಕೆ ವ್ಯಾಪ್ತಿಗೆ ಸೇರಲು ಸಾಧ್ಯವಿಲ್ಲ. ಅದು ಬಿಬಿಎಂಪಿಯ ಹೊರಗಿನ ಪ್ರದೇಶವಾಗಿಯೇ ಉಳಿಯಲಿದೆ~ ಎಂದು ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.
 

ಎಲೆಕ್ಟ್ರಾನಿಕ್ ಸಿಟಿ ಬಗ್ಗೆ ಒಂದಿಷ್ಟು...
ವಿಧಾನಸೌಧಕ್ಕೆ 25 ಕಿ.ಮೀ. ದೂರ, ರಾಷ್ಟ್ರೀಯ ಹೆದ್ದಾರಿ-7ಕ್ಕೆ ಹೊಂದಿಕೊಂಡಂತಿರುವ ಎಲೆಕ್ಟ್ರಾನಿಕ್ ಸಿಟಿಯು ಪ್ರಸ್ತುತ 5.2 ಚದರ ಕಿ.ಮೀ. ವಿಸ್ತೀರ್ಣದಲ್ಲಿ ಬೃಹತ್ ಕೈಗಾರಿಕಾ ವಲಯವಾಗಿ ಬೆಳೆದು ನಿಂತಿದೆ.

ಸುಮಾರು 187 ಬೃಹತ್ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಉದ್ದಿಮೆಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ ಸಿಟಿಯಲ್ಲಿ 25ಕ್ಕೂ ಹೆಚ್ಚು ವಸತಿ ಸಂಕೀರ್ಣಗಳು, 26 ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು ಹಾಗೂ ಮೂರು ತಾರಾ ಹೋಟೆಲ್‌ಗಳಿವೆ.

ದೊಡ್ಡನಾಗಮಂಗಲ, ರಾಯಸಂದ್ರ, ಚಿಕ್ಕ ತೋಗೂರು, ಘಟ್ಟಹಳ್ಳಿ, ವೀರಸಂದ್ರ ಸೇರಿದಂತೆ 9 ಕೆರೆಗಳನ್ನು ಒಳಗೊಂಡಿರುವ ಈ ಪ್ರದೇಶಕ್ಕೆ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಪಾಲಿಕೆಯೇ ಒದಗಿಸುತ್ತಿದೆ.

ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ ಎನ್ನುವ ಕಾರಣದಿಂದ ಕೋನಪ್ಪನ ಅಗ್ರಹಾರ, ದೊಡ್ಡ ತೋಗೂರು, ಗೊಲ್ಲಹಳ್ಳಿ, ಬಾಲಾಜಿ ಬಡಾವಣೆ, ಶಿಕಾರಿಪಾಳ್ಯ, ತಿರುಪಾಳ್ಯ, ನೀಲಾದ್ರಿನಗರ, ಬೆಟ್ಟದಾಸಪುರ, ಹುಲಿಮಂಗಲ, ಗೋವಿಂದಶೆಟ್ಟಿಪಾಳ್ಯ, ಕೃಷ್ಣಾರೆಡ್ಡಿ ಬಡಾವಣೆ, ನಿಯೋ ಟೌನ್, ಶಾಂತಿಪುರ, ವೀರಸಂದ್ರ ಕೈಗಾರಿಕಾ ಪ್ರದೇಶ ಮತ್ತು ವೀರಸಂದ್ರ ಗ್ರಾಮಗಳನ್ನು ಒಳಗೊಂಡ ಎಲೆಕ್ಟ್ರಾನಿಕ್ ಸಿಟಿ 1 ಮತ್ತು 2 ಮತ್ತು 3ನೇ ಹಂತದ ಪ್ರದೇಶಗಳನ್ನು ತನ್ನ ವ್ಯಾಪ್ತಿಗೆ ಸೇರಿಸಲು ಬಿಬಿಎಂಪಿ ಆಗ್ರಹಿಸಿತ್ತು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪ್ರತಿಭಟನೆ
ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂದರೆ, ಧರಂಸಿಂಗ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಐಟಿ ಕಂಪೆನಿಗಳು ಮೂಲ ಸೌಲಭ್ಯಗಳಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಹುಶಃ ಐಟಿ ಕಂಪೆನಿಗಳ ಒತ್ತಡಕ್ಕೆ ಮಣಿದು ಸರ್ಕಾರ ಎಲೆಕ್ಟ್ರಾನಿಕ್ ಸಿಟಿಗೆ ನಗರ ಸ್ಥಳೀಯ ಸಂಸ್ಥೆಯ ಮಾನ್ಯತೆ ನೀಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT