ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ: ಮೈಸೂರಿನ ರಿಜ್ವಾನ್‌ಗೆ ಗೆಲುವು

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಮೈಸೂರಿನ ರಿಜ್ವಾನ್ ಅರ್ಷದ್ ಭಾರಿ ಮತಗಳ (6818) ಅಂತರದಿಂದ ಜಯ ಗಳಿಸಿದ್ದಾರೆ.

ರಿಜ್ವಾನ್ ಅವರಿಗೆ ತೀವ್ರ ಪೈಪೋಟಿ ನೀಡಿದ್ದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದು, ಯುವ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಲಿದ್ದಾರೆ.

ಮತ ಎಣಿಕೆ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು. ಮಧ್ಯಾಹ್ನ 3.30ಕ್ಕೆ ಮತ ಎಣಿಕೆ ಪೂರ್ಣಗೊಂಡು, ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಿಜ್ವಾನ್ ಬೆಂಬಲಿಗರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.

ಇದೇ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಒಟ್ಟು 34,087 ಮಂದಿ ಮತದಾನ ಮಾಡಿದ್ದರು. ಅದರಲ್ಲಿ 528 ಮತ ತಿರಸ್ಕೃತಗೊಂಡಿದ್ದವು. ಉಳಿದ ಮತಗಳಲ್ಲಿ ರಿಜ್ವಾನ್ 14,743 ಮತ ಪಡೆದರೆ, ಪ್ರಿಯಾಂಕ ಖರ್ಗೆ 7925 ಮತ ಪಡೆದಿದ್ದಾರೆ.

3ನೇ ಸ್ಥಾನ ಪಡೆದ ಬಿ.ವಿ.ಶ್ರೀನಿವಾಸ್ 2,486 ಮತ ಗಳಿಸಿದ್ದಾರೆ. 4ನೇ ಸ್ಥಾನದ ರಾಜು ಕುನ್ನೂರು 1425, 5ನೇ ಸ್ಥಾನದ ಗೋಪಾಲಕೃಷ್ಣ 1308 ಮತ ಪಡೆದಿದ್ದು ಅವರು ಪ್ರಧಾನ ಕಾರ್ಯದರ್ಶಿಗಳಾಗಲಿದ್ದಾರೆ.

ರಾಜು ಕುನ್ನೂರು ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಇರುವ ಕಾರಣಕ್ಕೆ ಅವರನ್ನು ಅನರ್ಹಗೊಳಿಸಬೇಕೆಂದು ಕೆಲವರು ದೂರು ನೀಡಿದ್ದು, ಈ ವಿವಾದ ಭಾನುವಾರ ಇತ್ಯರ್ಥವಾಗಲಿದೆ. ಒಂದು ವೇಳೆ ಅವರು ಅನರ್ಹರಾದರೆ 1,239 ಮತ ಪಡೆದು 6ನೇ ಸ್ಥಾನದಲ್ಲಿರುವ ಎ.ಪಿ.ಬಸವರಾಜು ಪ್ರಧಾನ ಕಾರ್ಯದರ್ಶಿಯಾಗುವ ಸಾಧ್ಯತೆ ಇದೆ.

ಈ ವಿವಾದದ ಹಿನ್ನೆಲೆಯಲ್ಲಿ ಶನಿವಾರ ಯುವ ಕಾಂಗ್ರೆಸ್ ಸಮಿತಿ ರಚಿಸುವುದನ್ನು ಮುಂದೂಡಿದ್ದು, ಭಾನುವಾರ ಎಲ್ಲವೂ ಅಂತಿಮವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇತರ ಅಭ್ಯರ್ಥಿಗಳ ಮತ ವಿವರ: ಕಾರ್ತಿಕ್- 369, ಶಶಿ ಕುಮಾರ್- 308, ಲೋಕೇಶ್ ನಾಯಕ್- 680, ಡಾ.ಬಿ.ಸಿ.ಮುದ್ದುಗಂಗಾಧರ- 408, ಪ್ರದೀಪ್‌ಗೌಡ- 672, ಕೆ.ಗೀತಾ- 518, ಕೆರೋಲಿನ್ ಅಲ್ವಿನ್- 278, ಮೊಹಮದ್ ಅಕ್ರಂ- 342, ಹರೀಶ- 918, ಬಿ.ಜೆ.ರಮೇಶ- 137, ಶಾಜಿ ಥಾಮಸ್- 332, ಸೈಯದ್ ಸುಶೀಲ್-322 ಮತ ಪಡೆದಿದ್ದಾರೆ.

`ಯುವಕರನ್ನು ಕೈನತ್ತ ಸೆಳೆಯುವುದೇ ಮುಖ್ಯ ಉದ್ದೇಶ~
ಬೆಂಗಳೂರು:`ಯುವಕರನ್ನು ಕಾಂಗ್ರೆಸ್‌ನತ್ತ ಸೆಳೆಯುವುದೇ ನನ್ನ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ~- ಹೀಗೆ ಹೇಳಿದ್ದು ರಾಜ್ಯ ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷ ರಿಜ್ವಾನ್ ಅರ್ಷದ್.
ಮೊದಲ ಬಾರಿಗೆ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದ ಸಂತಸದಲ್ಲಿದ್ದ ಅವರು `ಪ್ರಜಾವಾಣಿ~ ಜತೆ ತಮ್ಮ ಅನಿಸಿಕೆ ಹಂಚಿಕೊಂಡರು.
`ಸತತ 14 ವರ್ಷಗಳಿಂದ ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದೇನೆ. ಅದರ ಅನುಭವ ಧಾರೆ ಎರೆದು ಪಕ್ಷಕ್ಕಾಗಿ ದುಡಿಯುವೆ. ರಾಜ್ಯದ ಯುವ ಕಾಂಗ್ರೆಸ್ ಕಾರ್ಯಕರ್ತರು ನನ್ನ ಮೇಲೆ ವಿಶ್ವಾಸ ಇಟ್ಟು ಮತ ಹಾಕಿದ್ದಾರೆ. ಅವರಿಗೆ ಚಿರಋಣಿಯಾಗಿರುತ್ತೇನೆ~ ಎಂದು ಹೇಳಿದರು.
ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರೂ ಆದ ಶಾಸಕ ಕೃಷ್ಣ ಬೈರೇಗೌಡ ಅವರ ಗುಂಪಿನ ಜತೆ ಗುರುತಿಸಿಕೊಂಡಿದ್ದ ರಿಜ್ವಾನ್, ಯುವಕರನ್ನು ಮತ್ತಷ್ಟು ಸಂಘಟಿಸಿ, ಪಕ್ಷದ ಕಡೆಗೆ ಕರೆ ತರುವೆ ಎಂದು ವಿವರಿಸಿದರು. ರಾಜ್ಯದಲ್ಲಿನ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಹೋರಾಟ ಹಮ್ಮಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಅನ್ನು ಸಂಘಟಿಸಲಾಗುವುದು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಲಾಗುವುದು ಎಂದು ಹೇಳಿದರು.
ರಾಜಕಾರಣ ಅಂದರೆ ಮೂಗು ಮುರಿಯುವ ಕಾಲ ಇದಾಗಿದೆ. ಹೀಗಾಗಿ ಜನರಲ್ಲಿ ವಿಶ್ವಾಸ ಮೂಡಿಸಿ, ಹೆಚ್ಚು ಹೆಚ್ಚು ಯುವಕರನ್ನು ಕಾಂಗ್ರೆಸ್‌ನತ್ತ ಸೆಳೆಯಲಾಗುವುದು ಎಂದರು.


 ಪರಿಚಯ
ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದ ಅವರು ವಿದ್ಯಾರ್ಥಿ ದಿನಗಳಿಂದಲೇ ಕಾಂಗ್ರೆಸ್ ಜತೆ ಗುರುತಿಸಿಕೊಂಡರು. ಎನ್‌ಎಸ್‌ಐಯುನ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಘಟಕದ ಪದಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅಖಿಲ ಭಾರತ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಹಾಗೂ ರಾಜ್ಯ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇವರಿಗೆ 31 ವರ್ಷ ವಯಸ್ಸು. ಇನ್ನೂ ಅವಿವಾಹಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT